ಬೆಂಗಳೂರು:ರಾಜಧಾನಿ ಬೆಂಗಳೂರನ್ನು ಸುಂದರ, ಸ್ವಚ್ಛ ಮತ್ತು ಜಾಗತಿಕ ಮಟ್ಟದ ಸುರಕ್ಷಿತ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹಾಗೂ ಬಿಬಿಎಂಪಿ ಮಹತ್ವದ ಜಂಟಿ ಕಾರ್ಯಾಚರಣೆಗಳನ್ನು ಕೈಗೊಂಡಿವೆ. ನಗರದ 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ವರ್ಷಗಟ್ಟಲೆಯಿಂದ ರಸ್ತೆ ಬದಿಗಳಲ್ಲಿ ಧೂಳು ಹಿಡಿದು ಬಿದ್ದಿರುವ, ವಾರಸುದಾರರಿಲ್ಲದ ಅನಾಥ ವಾಹನಗಳ ತೆರವು ಕಾರ್ಯಕ್ಕೆ ಇಂದಿನಿಂದ ಚಾಲನೆ ನೀಡಲಾಗಿದೆ. ಕ್ವೀನ್ಸ್ ರಸ್ತೆಯ ಶಿಫಾ ಆಸ್ಪತ್ರೆ ಬಳಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಈ ವಿಶೇಷ ಆಪರೇಷನ್‌ಗೆ ಅಧಿಕೃತವಾಗಿ ಗ್ರೀನ್ ಸಿಗ್ನಲ್ ನೀಡಿದರು. ಈ ಬೃಹತ್ ನಾಗರಿಕ ಅಭಿಯಾನಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತನ್ನ ಸಂಪೂರ್ಣ ಬೆಂಬಲವನ್ನು ಘೋಷಿಸಿದೆ.
ಇದು ಯಾರದ್ದೋ ವಿರುದ್ಧದ ಕ್ರಮವಲ್ಲ, ಸಾರ್ವಜನಿಕ ಹಿತದ ನಡೆ
ಸರ್ಕಾರದ ಈ ಕಟ್ಟುನಿಟ್ಟಿನ ಕ್ರಮವನ್ನು ಮುಕ್ತವಾಗಿ ಶ್ಲಾಘಿಸಿರುವ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡ ಅವರು, ಪಾದಚಾರಿಗಳ ಓಡಾಟಕ್ಕಾಗಿ ಮೀಸಲಿಟ್ಟಿರುವ ಜಾಗಗಳನ್ನು ಅಕ್ರಮವಾಗಿ ಆಕ್ರಮಿಸಿಕೊಂಡು ನಿರ್ಮಿಸಲಾಗಿರುವ ಖಾಯಂ ಕಟ್ಟಡಗಳು, ಶಾಷ್ಟ್ರ ಹಾಗೂ ತಾತ್ಕಾಲಿಕ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸುತ್ತಿರುವುದು ಅತ್ಯಂತ ಸೂಕ್ತವಾದ ನಿರ್ಧಾರವಾಗಿದೆ ಎಂದು ತಿಳಿಸಿದ್ದಾರೆ.
ಇಂದು ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ಪಾದಚಾರಿಗಳು ನಡೆಯಲು ಸ್ಥಳವಿಲ್ಲದೆ ಜೀವ ಕೈಯಲ್ಲಿ ಹಿಡಿದು ರಸ್ತೆ ಮೇಲೆ ಸಂಚರಿಸುವ ಪರಿಸ್ಥಿತಿ ಇದೆ. ಇದರ ಪರಿಣಾಮವಾಗಿ ಅಪಘಾತಗಳು ಸಂಭವಿಸುತ್ತಿವೆ. ಒಂದು ನಗರದ ಅಭಿವೃದ್ಧಿಯ ಮಾನದಂಡವನ್ನು ಕೇವಲ ಎತ್ತರದ ಕಟ್ಟಡಗಳು ಅಥವಾ ತಂತ್ರಜ್ಞಾನಗಳಿಂದ ಮಾತ್ರ ನಿರ್ಧರಿಸಲು ಸಾಧ್ಯವಿಲ್ಲ. ಸಾಮಾನ್ಯ ನಾಗರಿಕರು ಸುರಕ್ಷಿತವಾಗಿ ನಡೆದುಕೊಂಡು ಹೋಗಲು ಸಾಧ್ಯವಾಗುವ ಪರಿಸರವೂ ಮುಖ್ಯ ಎಂದರು. ನಗರದ ಒಟ್ಟು ರಸ್ತೆಗಳ ಪೈಕಿ ಕೇವಲ ಶೇಕಡಾ 10ರಿಂದ 20ರಷ್ಟು ಪ್ರಮುಖ ರಸ್ತೆಗಳಲ್ಲಷ್ಟೇ ಈ ಕ್ರಮ ಕೈಗೊಳ್ಳಲಾಗುತ್ತಿದ್ದು, ಉಳಿದ ಬಹುತೇಕ ಕಡೆ ವ್ಯಾಪಾರ ನಡೆಸಲು ಮುಕ್ತ ಅವಕಾಶವಿದೆ. ಹೀಗಾಗಿ ಇದನ್ನು ವ್ಯಾಪಾರಸ್ಥರ ವಿರುದ್ಧದ ಕ್ರಮ ಎಂದು ಬಿಂಬಿಸುವುದು ತಪ್ಪು ಎಂದು ಅವರು ಸ್ಪಷ್ಟಪಡಿಸಿದರು.
ಬೀಡಾಡಿ ಹಾಗೂ ತುಕ್ಕು ಹಿಡಿದ ವಾಹನಗಳು ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸುವುದಲ್ಲದೆ, ನಗರ ಸೌಂದರ್ಯ ಮತ್ತು ಸ್ವಚ್ಛತೆಯ ಮೇಲೂ ಪರಿಣಾಮ ಬೀರುತ್ತವೆ. ಇವುಗಳ ತೆರವು ಕಾರ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸಬೇಕು ಎಂದು ನಾರಾಯಣಗೌಡ ಅವರು ಒತ್ತಾಯಿಸಿದರು.
ಒತ್ತಡಗಳಿಗೆ ಅಂಜದೆ ಎ.ಟಿ. ರಾಮಸ್ವಾಮಿ ವರದಿ ಜಾರಿಗೆ ಕರವೇ ಆಗ್ರಹ
ಸಚಿವ ಕೃಷ್ಣ ಬೈರೇಗೌಡರು ಯಾವುದೇ ಇಲಾಖೆಯ ಜವಾಬ್ದಾರಿ ವಹಿಸಿಕೊಂಡರೂ ಕ್ರಿಯಾಶೀಲವಾಗಿ, ಜನಪರವಾಗಿ ಕೆಲಸ ಮಾಡುವ ವಿಭಿನ್ನ ಶೈಲಿಯ ರಾಜಕಾರಣಿ ಎಂದು ಬಣ್ಣಿಸಿದ ಕರವೇ ಅಧ್ಯಕ್ಷರು, ಬೆಂಗಳೂರಿನ ಮುಂದಿರುವ ಇತರ ಪ್ರಮುಖ ಸವಾಲುಗಳನ್ನು ನೆನಪಿಸಿದರು. ಹಿಂದೆ ಎ.ಟಿ. ರಾಮಸ್ವಾಮಿ ಅವರ ನೇತೃತ್ವದ ಸಮಿತಿಯು ಬೆಂಗಳೂರಿನ ಸರ್ಕಾರಿ ಜಮೀನುಗಳ ಒತ್ತುವರಿ ಕುರಿತು ನೀಡಿದ್ದ ಸಮಗ್ರ ವರದಿಯ ಆಧಾರದ ಮೇಲೆ, ಒತ್ತುವರಿಯಾಗಿರುವ ಎಲ್ಲಾ ಸರ್ಕಾರಿ ಆಸ್ತಿಗಳನ್ನು, ಕೆರೆಗಳನ್ನು ಹಾಗೂ ರಾಜಕಾಲುವೆಗಳನ್ನು ಮರಳಿ ಸರ್ಕಾರದ ವಶಕ್ಕೆ ಪಡೆಯುವ ಧೈರ್ಯವನ್ನು ಸಚಿವರು ಮಾಡಬೇಕು ಎಂದು ಆಗ್ರಹಿಸಿದರು.
ಸಚಿವರು ಈ ವಿಚಾರದಲ್ಲಿ ಯಾವುದೇ ಟೀಕೆ, ರಾಜಕೀಯ ಪ್ರಭಾವ, ಒತ್ತಡ ಅಥವಾ ಲೆಕ್ಕಾಚಾರಗಳಿಗೆ ಮಣಿಯಬಾರದು. ನಾಡಪ್ರಭು ಕೆಂಪೇಗೌಡರು ಕಟ್ಟಿದ ಈ ಅಂತಾರಾಷ್ಟ್ರೀಯ ನಗರವನ್ನು ಸ್ವಚ್ಛ ಮತ್ತು ಸುರಕ್ಷಿತವಾಗಿಡಲು ಬೇಕಾದ ಇಚ್ಛಾಶಕ್ತಿ ಸಚಿವರಿಗಿದೆ. ಬಡ ಮತ್ತು ಸಣ್ಣ ಮಟ್ಟದ ಬೀದಿಬದಿ ವ್ಯಾಪಾರಿಗಳ ಜೀವನೋಪಾಯದ ಬಗ್ಗೆ ಸರ್ಕಾರ ಮಾನವೀಯ ದೃಷ್ಟಿಕೋನವನ್ನು ಹೊಂದಿರಬೇಕು. ಅಗತ್ಯವಿರುವ ಬಡ ವ್ಯಾಪಾರಿಗಳಿಗೆ ಸಾರ್ವಜನಿಕರಿಗೆ ತೊಂದರೆಯಾಗದ ಪರ್ಯಾಯ ಸ್ಥಳಗಳಲ್ಲಿ ವ್ಯಾಪಾರ ನಡೆಸಲು ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

