ಬೆಂಗಳೂರು: ಸಿನಿಮಾ ರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾದ ರುಕ್ಮಿಣಿ ವಸಂತ್ ಅವರ ಹೆಸರಿನಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ನಕಲಿ ಚಿತ್ರ ಹಾಗೂ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಕಿಡಿಗೇಡಿಗಳ ವಿರುದ್ಧ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಾಗಿದೆ.
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನಟಿಯ ಮುಖವನ್ನು ಹೋಲುವ ಅಶ್ಲೀಲ ಡೀಪ್‌ಫೇಕ್ ಬಿಕಿನಿ ವಿಡಿಯೋ ಮತ್ತು ಫೋಟೋಗಳನ್ನು ಕಿಡಿಗೇಡಿಗಳು ವ್ಯಾಪಕವಾಗಿ ಹಂಚಿಕೊಂಡಿದ್ದರು. ಇದು ಇತ್ತೀಚಿನ ಚಿತ್ರೀಕರಣದ ದೃಶ್ಯಗಳು ಎಂಬಂತೆ ಸುಳ್ಳು ಪ್ರಚಾರವನ್ನೂ ಮಾಡಲಾಗಿತ್ತು. ಈ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದ್ದ ನಟಿ, ಇವು ತಂತ್ರಜ್ಞಾನವನ್ನು ಬಳಸಿ ಸೃಷ್ಟಿಸಿರುವ ಸಂಪೂರ್ಣ ನಕಲಿ ದೃಶ್ಯಗಳಾಗಿದ್ದು, ನನ್ನ ವೈಯಕ್ತಿಕ ಗೌರವಕ್ಕೆ ಧಕ್ಕೆ ತರಲಾಗಿದೆ ಎಂದು ಸ್ಪಷ್ಟಪಡಿಸಿದ್ದರು.
29 ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಕಾನೂನು ಕ್ರಮ:
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ನಟಿ ರುಕ್ಮಿಣಿ ವಸಂತ್ ಅವರು ಬೆಂಗಳೂರಿನ ಸೈಬರ್ ಕ್ರೈಮ್ ವಿಭಾಗಕ್ಕೆ ಅಧಿಕೃತ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಪೊಲೀಸರು ಅಶ್ಲೀಲ ಹಾಗೂ ನಕಲಿ ಕಂಟೆಂಟ್ ಪೋಸ್ಟ್ ಮಾಡಿದ ಒಟ್ಟು 29 ಸೋಶಿಯಲ್ ಮೀಡಿಯಾ ಖಾತೆಗಳ ವಿರುದ್ಧ ಐಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಇದರಲ್ಲಿ ಪ್ರಮುಖ ಸಾಮಾಜಿಕ ಜಾಲತಾಣಗಳಾದ ಎಕ್ಸ್, ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ನ ನಕಲಿ ಪ್ರೊಫೈಲ್‌ಗಳು ಮತ್ತು ಪೇಜ್‌ಗಳು ಸೇರಿವೆ.
ಈ ಕುರಿತು ಸಾರ್ವಜನಿಕವಾಗಿ ಕಳವಳ ವ್ಯಕ್ತಪಡಿಸಿರುವ ನಟಿ ರುಕ್ಮಿಣಿ, “ಎಐ ತಂತ್ರಜ್ಞಾನವನ್ನು ಸಕಾರಾತ್ಮಕ ಕೆಲಸಗಳಿಗೆ ಬಳಸಬೇಕು. ಆದರೆ ಕಿಡಿಗೇಡಿಗಳು ಇದನ್ನು ಮಹಿಳೆಯರ ಮಾನಹಾನಿ ಮಾಡಲು ಬಳಸುತ್ತಿದ್ದಾರೆ. ಇದು ಕೇವಲ ನಟಿಯರಿಗಷ್ಟೇ ಅಲ್ಲ, ಸಾಮಾನ್ಯ ಮಹಿಳೆಯರಿಗೂ ದೊಡ್ಡ ಕಂಟಕವಾಗಿ ಪರಿಣಮಿಸಿದೆ” ಎಂದು ಹೇಳಿದ್ದಾರೆ. ಸದ್ಯ ಸೈಬರ್ ಪೊಲೀಸರು ಈ ನಕಲಿ ಖಾತೆಗಳ ಹಿಂದಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

