Fri. Jun 5th, 2026

“ಎಂಟು ಬಾರಿ ಗೆದ್ದವರಿಗೇ ಬೆಲೆ ಇಲ್ಲ ಅಂದ್ರೆ ಹೇಗೆ?”: ಖಾತೆ ಹಂಚಿಕೆ ವಿರುದ್ಧ ಸಚಿವ ಕೆ.ಎಚ್. ಮುನಿಯಪ್ಪ ತೀವ್ರ ವಾಗ್ದಾಳಿ!

Share this with Friends

ಬೆಂಗಳೂರು: ನೂತನ ಸರ್ಕಾರದ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆಯಾದ ಬೆನ್ನಲ್ಲೇ ಆಡಳಿತ ಪಕ್ಷದಲ್ಲಿ ಅಸಮಾಧಾನದ ಜ್ವಾಲೆ ಮತ್ತಷ್ಟು ಜೋರಾಗಿದೆ. ರಾಮಲಿಂಗಾರೆಡ್ಡಿ ಅವರ ರಾಜೀನಾಮೆಯ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ಹೈಕಮಾಂಡ್ ಮತ್ತು ರಾಜ್ಯ ನಾಯಕರ ನಿರ್ಧಾರಗಳ ವಿರುದ್ಧ ಬಹಿರಂಗವಾಗಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,”ಪಕ್ಷದಲ್ಲಿ ಹಿರಿತನಕ್ಕೆ ಬೆಲೆ ಇಲ್ಲದಂತಾಗಿದೆ. ರಾಮಲಿಂಗಾರೆಡ್ಡಿ ಅವರು ಎಂಟು ಬಾರಿ ಶಾಸಕರಾಗಿ ಗೆದ್ದವರು. ಅವರಂತಹ ಹಿರಿಯ ನಾಯಕರಿಗೇ ಕೇವಲ ಜಲಸಂಪನ್ಮೂಲ ಖಾತೆ ನೀಡಿ, ಅವರು ಕೇಳಿದ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ನಿರಾಕರಿಸಿರುವುದು ಎಷ್ಟು ಸರಿ? ಹಿರಿಯ ನಾಯಕರನ್ನು ಈ ರೀತಿ ಪದೇ ಪದೇ ಕಡೆಗಣಿಸುತ್ತಾ ಹೋದರೆ, ಅದು ಪಕ್ಷದ ಸಂಘಟನೆಗೆ ದೊಡ್ಡ ಹೊಡೆತ ನೀಡುತ್ತದೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಭಾರಿ ನಷ್ಟವಾಗಲಿದೆ” ಎಂದು ಮುನಿಯಪ್ಪ ಎಚ್ಚರಿಸಿದ್ದಾರೆ.

ಎಐಸಿಸಿ ಅಧ್ಯಕ್ಷರಿಗೆ ಮುನಿಯಪ್ಪ ನೇರ ಮನವಿ

“ಪಕ್ಷವು ತಾಯಿಯಿದ್ದಂತೆ. ತಾಯಿ ಎನ್ನುವವಳು ತನ್ನ ಎಲ್ಲಾ ಮಕ್ಕಳನ್ನು ಸಮಾನವಾಗಿ ನೋಡಬೇಕು. ಯಾರಿಗೆ ಯಾವ ಖಾತೆ ನೀಡಬೇಕು, ಯಾರ ಹಿರಿತನಕ್ಕೆ ಏನು ಗೌರವ ಕೊಡಬೇಕು ಎನ್ನುವುದನ್ನು ಸರಿಯಾಗಿ ನಿರ್ಧರಿಸಬೇಕು. ಈ ತಾರತಮ್ಯದ ಧೋರಣೆಯನ್ನು ಸರಿಪಡಿಸುವಂತೆ ನಾನು ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಅಧ್ಯಕ್ಷರಿಗೆ ಮತ್ತು ಹೈಕಮಾಂಡ್ ನಾಯಕರಿಗೆ ನೇರವಾಗಿ ಮನವಿ ಮಾಡುತ್ತೇನೆ” ಎಂದು ಅವರು ಹೇಳಿದ್ದಾರೆ.

ಸರ್ಕಾರಕ್ಕೆ ಹೆಚ್ಚಿದ ಬಿಕ್ಕಟ್ಟು

ತಾವು ಸಚಿವ ಸ್ಥಾನಕ್ಕೆ ತಕ್ಷಣವೇ ರಾಜೀನಾಮೆ ನೀಡದಿದ್ದರೂ, ಪಕ್ಷದೊಳಗಿನ ಈ ತಾರತಮ್ಯದ ಆಡಳಿತ ವೈಖರಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಮುನಿಯಪ್ಪ ಖಡಕ್ ಆಗಿ ನುಡಿದಿದ್ದಾರೆ. ಒಂದೆಡೆ ರಾಮಲಿಂಗಾರೆಡ್ಡಿ ಅವರ ರಾಜೀನಾಮೆ, ಮತ್ತೊಂದೆಡೆ ಕೆ.ಎಚ್. ಮುನಿಯಪ್ಪ ಅವರ ಬಹಿರಂಗ ವಾಗ್ದಾಳಿ ಹಾಗೂ ಬಿ.ಕೆ. ಹರಿಪ್ರಸಾದ್ ಅವರ ಮುನಿಸು ನೂತನ ಕಾಂಗ್ರೆಸ್ ಸರ್ಕಾರಕ್ಕೆ ಆರಂಭದಲ್ಲೇ ದೊಡ್ಡ ಬಿಕ್ಕಟ್ಟನ್ನು ತಂದಿಟ್ಟಿದೆ.

 


Share this with Friends

Related Post