Tue. Jun 9th, 2026

ಭಾರತದ ಶಕ್ತಿಶಾಲಿ ಕ್ವಾಂಟಮ್ ಪ್ರೊಸೆಸರ್ ‘ಕಾವೇರಿ’ ಅನಾವರಣ: ಕರ್ನಾಟಕದ ಹೆಮ್ಮೆಯ ಮೈಲುಗಲ್ಲು!

Share this with Friends

ಬೆಂಗಳೂರು: ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಹೆಜ್ಜೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಬೆಂಗಳೂರು ಮೂಲದ ತಂತ್ರಜ್ಞಾನ ಸಂಸ್ಥೆಯೊಂದು ದೇಶದ ಅತ್ಯಂತ ಶಕ್ತಿಶಾಲಿ ಹಾಗೂ ಸಂಪೂರ್ಣ ಸ್ವದೇಶಿ ನಿರ್ಮಿತ ಕ್ವಾಂಟಮ್ ಪ್ರೊಸೆಸರ್ ‘ಕಾವೇರಿ’ಯನ್ನು ಅಭಿವೃದ್ಧಿಪಡಿಸಿದೆ. ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಕರ್ನಾಟಕದ ಹೆಮ್ಮೆಯನ್ನು ಎತ್ತಿಹಿಡಿಯುವ ಈ ಮಹತ್ವದ ಸಾಧನೆಯನ್ನು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಶ್ಲಾಘಿಸಿದ್ದಾರೆ.

ಈ ನೂತನ ಪ್ರೊಸೆಸರ್ 64-ಕ್ಯೂಬಿಟ್ (64-qubit) ಸೂಪರ್ ಕಂಡಕ್ಟಿಂಗ್ ತಂತ್ರಜ್ಞಾನವನ್ನು ಹೊಂದಿದ್ದು, ಕ್ವಾಂಟಮ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ದೇಶಕ್ಕೆ ಹೊಸ ಆಯಾಮವನ್ನು ನೀಡಿದೆ.

‘ಕಾವೇರಿ’ ಪ್ರೊಸೆಸರ್‌ನ ಪ್ರಮುಖ ವೈಶಿಷ್ಟ್ಯಗಳು ಮತ್ತು ಪ್ರಾಮುಖ್ಯತೆ:

ಜಾಗತಿಕ ಸಾಧನೆ: ವಿಶ್ವದಾದ್ಯಂತ ಕೇವಲ 7 ದೇಶಗಳು ಮಾತ್ರ ಸ್ವತಂತ್ರವಾಗಿ ಕ್ವಾಂಟಮ್ ಪ್ರೊಸೆಸರ್ ವಿನ್ಯಾಸ ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಹೊಂದಿವೆ. ‘ಕಾವೇರಿ’ ಚಿಪ್‌ನ ಆವಿಷ್ಕಾರದೊಂದಿಗೆ ಭಾರತ ಮತ್ತು ಕರ್ನಾಟಕ ರಾಜ್ಯವು ಈ ಪ್ರತಿಷ್ಠಿತ ದೇಶಗಳ ಸಾಲಿಗೆ ಹೆಮ್ಮೆಯಿಂದ ಸೇರ್ಪಡೆಯಾಗಿದೆ.

ನಿರ್ಣಾಯಕ ಮಿತಿ ದಾಟಿದ ಚಿಪ್: ಜಾಗತಿಕ ವಿಜ್ಞಾನಿಗಳ ಪ್ರಕಾರ, ನಿರ್ದಿಷ್ಟ ಸವಾಲುಗಳ ವಿಶ್ಲೇಷಣೆಯಲ್ಲಿ ಕ್ವಾಂಟಮ್ ವ್ಯವಸ್ಥೆಗಳು ಸಾಮಾನ್ಯ ಕಂಪ್ಯೂಟರ್‌ಗಳನ್ನು ಮೀರಿಸಲು 50-ಕ್ಯೂಬಿಟ್ (50-qubit) ಮಿತಿಯನ್ನು ದಾಟುವುದು ಅನಿವಾರ್ಯವಾಗಿತ್ತು. ಪ್ರಸ್ತುತ ‘ಕಾವೇರಿ’ ಪ್ರೊಸೆಸರ್ 64-ಕ್ಯೂಬಿಟ್ ಸಾಮರ್ಥ್ಯ ಹೊಂದಿದ್ದು, ಈ ಮೈಲುಗಲ್ಲನ್ನು ಯಶಸ್ವಿಯಾಗಿ ದಾಟಿದೆ.

ಬೆಂಗಳೂರಿನ ತಂತ್ರಜ್ಞಾನದ ಶಕ್ತಿ: ಬೆಂಗಳೂರಿನ ತಂತ್ರಜ್ಞಾನ ಪರಿಸರ ವ್ಯವಸ್ಥೆ (Ecosystem) ಮತ್ತು ದೇಶೀಯ ಪ್ರತಿಭೆಗಳು ಜಾಗತಿಕ ಮಟ್ಟದ ಮಹೋನ್ನತ ತಂತ್ರಜ್ಞಾನವನ್ನು ಹೇಗೆ ಸೃಷ್ಟಿಸಬಲ್ಲವು ಎಂಬುದಕ್ಕೆ ‘ಕಾವೇರಿ’ ಪ್ರಮುಖ ಸಾಕ್ಷಿಯಾಗಿದೆ.

ಕರ್ನಾಟಕ ಮುಂಚೂಣಿಯಲ್ಲಿ:

ರಾಜ್ಯ ಸರ್ಕಾರದ ಐಟಿಬಿಟಿ ಇಲಾಖೆಯ ಲೀಪ್ (LEAP) ಕಾರ್ಯಕ್ರಮದ ಅಡಿಯಲ್ಲಿ ಕರ್ನಾಟಕವು ಭಾರತದ ಮೊದಲ ವಾಣಿಜ್ಯ ನಿಯೋಜನೆಯ ಕ್ವಾಂಟಮ್ ಕಂಪ್ಯೂಟರ್ ಅನ್ನು ಐಐಐಟಿ ಧಾರವಾಡ (IIIT Dharwad) ಮತ್ತು ಐಐಐಟಿ ರಾಯಚೂರು (IIIT Raichur) ಕೇಂದ್ರಗಳಲ್ಲಿ ಯಶಸ್ವಿಯಾಗಿ ಸ್ಥಾಪಿಸಿದೆ. ಈ ಮೂಲಕ ಇಡೀ ಭಾರತದ ಕ್ವಾಂಟಮ್ ಕಂಪ್ಯೂಟಿಂಗ್ ಪಯಣದಲ್ಲಿ ಕರ್ನಾಟಕ ರಾಜ್ಯವು ಅಗ್ರಸ್ಥಾನದಲ್ಲಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.

 

 

 


Share this with Friends

Related Post