Tue. Jun 9th, 2026

ಎಲ್‌ಪಿಜಿ ಸಬ್ಸಿಡಿ ಕಡಿತ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲ ತೀವ್ರ ಆಕ್ರೋಶ!

Share this with Friends

ಬೆಂಗಳೂರು: ಉಜ್ವಲಾ ಯೋಜನೆಯಡಿ ಬಡ ಮಹಿಳೆಯರಿಗೆ ನೀಡಲಾಗುತ್ತಿದ್ದ ವಾರ್ಷಿಕ ಸಬ್ಸಿಡಿ ಸಿಲಿಂಡರ್‌ಗಳ ಸಂಖ್ಯೆಯನ್ನು ಕೇಂದ್ರ ಸರ್ಕಾರ ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿರುವುದನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ತೀವ್ರವಾಗಿ ಖಂಡಿಸಿದ್ದಾರೆ. ಕೇಂದ್ರದ ಈ ಹೊಸ ನಿರ್ಧಾರವು ನೇರವಾಗಿ ಜನಸಾಮಾನ್ಯರ ಹಾಗೂ ಬಡ ಕುಟುಂಬಗಳ ಮಾಸಿಕ ಬಜೆಟ್‌ಗೆ ಕತ್ತರಿ ಹಾಕುವ ಜನವಿರೋಧಿ ನೀತಿಯಾಗಿದೆ ಎಂದು ಅವರು ದೂರಿದ್ದಾರೆ.

ಆರ್ಥಿಕ ಹೊರೆಯ ಲೆಕ್ಕಾಚಾರ ಮುಂದಿಟ್ಟ ಸುರ್ಜೆವಾಲ:

ಸಬ್ಸಿಡಿ ಕಡಿತದ ವಿವರ: ಉಜ್ವಲಾ ಯೋಜನೆ ಆರಂಭವಾದಾಗ ವರ್ಷಕ್ಕೆ 12 ಸಿಲಿಂಡರ್‌ಗಳಿಗೆ ₹300 ಸಬ್ಸಿಡಿ ನಿಗದಿ ಮಾಡಲಾಗಿತ್ತು. ಬಳಿಕ ಅದನ್ನು 9ಕ್ಕೆ ಇಳಿಸಲಾಗಿತ್ತು. ಈಗ ಅದನ್ನು ಕೇವಲ 4 ಸಿಲಿಂಡರ್‌ಗಳಿಗೆ ಸೀಮಿತಗೊಳಿಸುವ ಮೂಲಕ ವರ್ಷಕ್ಕೆ ಒಟ್ಟು 8 ಸಬ್ಸಿಡಿ ಸಿಲಿಂಡರ್‌ಗಳನ್ನು ಬಡವರಿಂದ ಕಸಿದುಕೊಳ್ಳಲಾಗಿದೆ ಎಂದು ಅವರು ಆಪಾದಿಸಿದ್ದಾರೆ.

ಕೋಟಿಗಟ್ಟಲೆ ಹೊರೆ: ಈ ಕಡಿತದಿಂದಾಗಿ ದೇಶದ ಪ್ರತಿಯೊಬ್ಬ ಬಡ ಮಹಿಳೆ ವರ್ಷಕ್ಕೆ ₹2,400 ಕಳೆದುಕೊಳ್ಳಲಿದ್ದಾರೆ. ದೇಶಾದ್ಯಂತ ಇರುವ 10.33 ಕೋಟಿ ಫಲಾನುಭವಿಗಳ ಮೇಲೆ ಒಟ್ಟಾರೆಯಾಗಿ ₹24,792 ಕೋಟಿ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದ್ದು, ತಾಯಂದಿರು ಇದನ್ನು ಭರಿಸಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

ಕರ್ನಾಟಕದ ಮೇಲಿನ ಪ್ರಭಾವ: ಕರ್ನಾಟಕ ರಾಜ್ಯವೊಂದರಲ್ಲೇ 37.50 ಲಕ್ಷ ಉಜ್ವಲಾ ಯೋಜನೆಯ ಫಲಾನುಭವಿಗಳಿದ್ದು, ಕೇಂದ್ರದ ಈ ನಿರ್ಧಾರದಿಂದಾಗಿ ರಾಜ್ಯದ ಮಹಿಳೆಯರ ಮೇಲೆ ಪ್ರತಿ ವರ್ಷ ₹900 ಕೋಟಿಗೂ ಅಧಿಕ ಆರ್ಥಿಕ ಹೊರೆ ಬೀಳಲಿದೆ ಎಂದು ಸುರ್ಜೆವಾಲ ಕಳವಳ ವ್ಯಕ್ತಪಡಿಸಿದ್ದಾರೆ.

ಬೆಲೆ ಏರಿಕೆ ಕುರಿತು ವಾಗ್ದಾಳಿ:

2014ರಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ₹400 ಇದ್ದ ಅಡುಗೆ ಅನಿಲ ಸಿಲಿಂಡರ್ ಬೆಲೆ ಇಂದು ₹1,000ರ ಗಡಿ ತಲುಪುತ್ತಿದೆ ಎಂದು ಸುರ್ಜೆವಾಲ ನೆನಪಿಸಿದ್ದಾರೆ. ಇತ್ತೀಚಿನ ಮೂರು ತಿಂಗಳ ಅವಧಿಯಲ್ಲೇ ಗೃಹಬಳಕೆಯ ಸಿಲಿಂಡರ್ ಬೆಲೆಯನ್ನು ಒಟ್ಟು ₹90ರಷ್ಟು ಏರಿಕೆ ಮಾಡಲಾಗಿದ್ದು, ಇಷ್ಟು ಭೀಕರ ಬೆಲೆ ಏರಿಕೆಯ ಮಧ್ಯೆ ಬಡವರು ಬದುಕುವುದು ಹೇಗೆ? ಬಡ ಮಹಿಳೆಯರು ಮತ್ತೆ ಸೌದೆ ಒಲೆಯತ್ತ ಮುಖ ಮಾಡುವ ಪರಿಸ್ಥಿತಿ ಬಂದೊದಗಿದೆ ಎಂದು ಅವರು ಕಿಡಿಕಾರಿದ್ದಾರೆ.

ಗೃಹಬಳಕೆ ಮಾತ್ರವಲ್ಲದೆ ವಾಣಿಜ್ಯ ಸಿಲಿಂಡರ್ ಬೆಲೆಯೂ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಸಣ್ಣ ಹೋಟೆಲ್ ಉದ್ಯಮಿಗಳು ಹಾಗೂ ಬೀದಿಬದಿ ವ್ಯಾಪಾರಿಗಳ ಬದುಕಿನ ಮೇಲೂ ಇದು ಅತ್ಯಂತ ಕೆಟ್ಟ ಪರಿಣಾಮ ಬೀರಿದೆ ಎಂದು ಸುರ್ಜೆವಾಲ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಈ ನಿರಂತರ ಬೆಲೆ ಏರಿಕೆಗೆ ಕಾರಣವೇನು ಎಂದು ಪ್ರಧಾನಿ ಮೋದಿ, ಕರ್ನಾಟಕ ಬಿಜೆಪಿ ನಾಯಕರಾದ ಆರ್. ಅಶೋಕ್, ವಿಜಯೇಂದ್ರ ಅವರು ಉತ್ತರಿಸುವರೇ?ಉಜ್ವಲ ಯೋಜನೆ ಫಲಾನುಭವಿಗಳು, ಜನಸಾಮಾನ್ಯರ ಮೇಲೆ ಬಿಜೆಪಿ ದಾಳಿ ಮಾಡುತ್ತಿದ್ದು, ಕರ್ನಾಟಕದ ಮಹಿಳೆಯರ ಮೇಲೆ ಈ ಹೆಚ್ಚುವರಿ ₹900 ಕೋಟಿ ಹಾಗೂ ದೇಶದ ಮಹಿಳೆಯರ ಮೇಲೆ ಸುಮಾರು 25,000 ಕೋಟಿ ರೂ. ಆರ್ಥಿಕ ಹೊರೆಗೆ ಹೊಣೆ ಯಾರು?ದೇಶದ ಜನರು ಹಾಗೂ ಕರ್ನಾಟಕದ ಸಹೋದರರು ಹಾಗೂ ಸಹೋದರಿಯರು ಇದಕ್ಕೆ ಉತ್ತರ ಬಯಸುತ್ತಿದ್ದಾರೆ. ಬಿಜೆಪಿ ಇದಕ್ಕೆ ಉತ್ತರ ನೀಡಲಿ‌ ಎಂದು ಆಗ್ರಹಿಸಿದ್ದಾರೆ.


Share this with Friends

Related Post