ಮಂಡ್ಯ:ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರ ಮೇಲೆ ಕಾಂಗ್ರೆಸ್ ನಾಯಕರಿಗೆ ಅತಿಯಾದ ಅನುಕಂಪ ಬಂದಿದೆ. ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿಯಲ್ಲಿ ಬಿರುಕು ಸೃಷ್ಟಿಸಲು ಆ ಪಕ್ಷದ ಅನುಕಂಪದ ಅಸ್ತ್ರ ಪ್ರಯೋಗಿಸುತ್ತಿದೆ ಎಂದು ಕೇಂದ್ರ ಸಚಿವರು ಹಾಗೂ ಜೆಡಿಎಸ್ ರಾಜ್ಯ ಅಧ್ಯಕ್ಷರಾದ ಹೆಚ್.ಡಿ. ಕುಮಾರಸ್ವಾಮಿ ಕಟುವಾಗಿ ಟೀಕಿಸಿದರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ವಿಧಾನಸಭೆ ಕ್ಷೇತ್ರದ ತಗ್ಗಹಳ್ಳಿ ಗ್ರಾಮದಲ್ಲಿ ಸಿಎಸ್ಆರ್ ನಿಧಿ ಅನುದಾನದಿಂದ ನೂತನವಾಗಿ ನಿರ್ಮಾಣಗೊಂಡಿರುವ ಶಾಲಾ ಕೊಠಡಿಗಳನ್ನು ಉದ್ಘಾಟಿಸಿದ ನಂತರ ಕೇಂದ್ರ ಮಾಧ್ಯಮಗಳ ಜೊತೆ ಮಾತನಾಡಿದ ಅವರು,ರಾಜ್ಯಸಭೆ ಟಿಕೆಟ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಅನಗತ್ಯವಾಗಿ ಮಾತನಾಡುತ್ತಿದ್ದಾರೆ. ದೇವೇಗೌಡರ ಬಗ್ಗೆ ಎಲ್ಲಿಲ್ಲದ ಅನುಕಂಪ ಬಂದಿದೆ. ಬಿಜೆಪಿ, ಜೆಡಿಎಸ್ ಮೈತ್ರಿಯಲ್ಲಿ ಬಿರುಕು ತರಲು ಕಾಂಗ್ರೆಸ್ ವಿಫಲ ಪ್ರಯತ್ನ ನಡೆಸುತ್ತಿದೆ. ರಾಜ್ಯಸಭೆ ಟಿಕೆಟ್‌ಗೆ ದೇವೇಗೌಡರು ಅರ್ಜಿಯೇ ಹಾಕಿಲ್ಲ ಎಂದು ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು.
ತನ್ನಲ್ಲಿ ಆಗುತ್ತಿರುವ ಬೆಳವಣಿಗೆಗಳು ಮತ್ತು ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಕಾಂಗ್ರೆಸ್ ಪಕ್ಷವು ದೇವೇಗೌಡರನ್ನು ನೆಪ ಮಾಡಿಕೊಂಡು ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದ ಕೇಂದ್ರ ಸಚಿವರು; ದೇವೇಗೌಡರದು ಹೋರಾಟದ ಬುದಕು. ಅಧಿಕಾರಕ್ಕಾಗಿ ಹಪಾಹಪಿಸಿದವರಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಪ್ರಧಾನಿ ಸ್ಥಾನವನ್ನೇ ಬಿಟ್ಟು ಬಂದರು ಅವರು. ಅದೆಲ್ಲವೂ ಕಾಂಗ್ರೆಸ್ ಪಕ್ಷಕ್ಕೆ ಗೊತ್ತಿಲ್ಲವೇ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
ಕಳೆದ ಬಾರಿ ದೇವೇಗೌಡರ ಅವಿರೋಧ ಆಯ್ಕೆಗೆ ಕಾಂಗ್ರೆಸ್ ಬೆಂಬಲದ ಬಗ್ಗೆಯೂ ಮಾತನಾಡಿದ ಕುಮಾರಸ್ವಾಮಿ ಅವರು; ಆಗ ದೇವೇಗೌಡರ ವಿರುದ್ಧ ಇನ್ನೊಬ್ಬ ಅಭ್ಯರ್ಥಿ ನಿಲ್ಲುವ ಅವಕಾಶ ಇರಲಿಲ್ಲ. ಆ ಸಂದರ್ಭದಲ್ಲಿ ಯಾವುದೇ ಪಕ್ಷಕ್ಕೆ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿ ಗೆಲ್ಲಿಸಿಕೊಳ್ಳುವಷ್ಟು ಸಂಖ್ಯಾಬಲ ಇರಲಿಲ್ಲ. ನಮ್ಮ ಪಕ್ಷಕ್ಕೆ ಸಂಖ್ಯಾಬಲ ಇತ್ತು, ಹೀಗಾಗಿ ರಾಜ್ಯಸಭೆಗೆ ದೇವೇಗೌಡರು ಆಯ್ಕೆಯಾದರು. ಅವರು ಕಾಂಗ್ರೆಸ್ ಬೆಂಬಲದಿಂದ ರಾಜ್ಯಸಭೆಗೆ ಹೋಗಲಿಲ್ಲ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಒಕ್ಕಲಿಗ ಮುಖ್ಯಮಂತ್ರಿ ಇರಬೇಕಾದರೆ ರಾಜ್ಯಸಭೆ ತಗೊಂಡು ಏನ್ಮಾಡ್ತೀರಾ? ಎರಡು ತಿಂಗಳು ಕಾದು ನೋಡೋಣ, ಅವರೇನು ಮಾಡುತ್ತಾರೆ ಎಂಬುದನ್ನು ಗಮನವಿಟ್ಟು ನೋಡೋಣ ಎಂದ ಸಚಿವರು; ಡಿಕೆಶಿ ಮುಖ್ಯಮಂತ್ರಿ ಆಗುತ್ತಿರುವ ಹಿನ್ನೆಲೆಯಲ್ಲಿ ದೇವೇಗೌಡರ ಮನೆಯಲ್ಲಿ ಸೂತಕ ಆವರಿಸಿದೆ ಎಂದಿದ್ದ ಮಾಜಿ ಮಂತ್ರಿಯೊಬ್ಬರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಸ್ಪಷ್ಟವಾಗಿ ನಿರಾಕರಿಸಿದರು.
ಜಮೀರ್ ನನ್ನ ಸಂಪರ್ಕದಲ್ಲಿ ಇಲ್ಲ:
ಹಾಗೆಯೇ ಮಾಜಿ ಸಚಿವ ಜಮೀರ್ ಅಹಮದ್ ಅವರು ತಮ್ಮ ಜತೆ ಸಂಪರ್ಕ ಹೊಂದಿದ್ದಾರೆ ಎಂಬ ವದಂತಿಗಳನ್ನು ಕೂಡ ಸಚಿವ ಕುಮಾರಸ್ವಾಮಿ ಅವರು ಸ್ಪಷ್ಟವಾಗಿ ತಳ್ಳಿ ಹಾಕಿದರಲ್ಲದೆ, ಕಾಂಗ್ರೆಸ್‌ನ ಯಾವ ನಾಯಕರನ್ನು ನಾನು ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದರು.

