ಬೆಂಗಳೂರು: “ನಾನೇನು ಸಲಹೆ ನೀಡಲಿ, ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಏನು ಸಾಧನೆ ಮಾಡಿದ್ದಾರೆ ಎಂದು ಕಾಂಗ್ರೆಸ್‌ನವರೇ ಈ ಹಿಂದೆ ಟೀಕಿಸಿದ್ದರು. ಈಗ ನನ್ನ ಬಳಿ ಬಂದು ಏನು ಸಲಹೆ ಕೇಳುತ್ತಾರೆ?” ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳ ಭೇಟಿಯ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ನಿವಾಸಕ್ಕೆ ಮುಖ್ಯಮಂತ್ರಿಗಳು ಭೇಟಿ ನೀಡಿ ಸಲಹೆ ಪಡೆಯಲಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ತೀಕ್ಷ್ಣವಾಗಿ ಉತ್ತರಿಸಿದ ಅವರು, “ನಾನೇನು ಸಾಧಿಸಿಲ್ಲ, ನನ್ನ ಬಳಿ ಅವರಿಗೇನು ಸಲಹೆ ಬೇಕಿದೆ? ಎಲ್ಲದಕ್ಕೂ ಸಾಕ್ಷಿ ಕೇಳುವ ಅವರಿಗೆ ಎಲ್ಲವೂ ತಿಳಿದಿದೆ. ಹಿರಿಯರು ಹೇಳಿರುವ ‘ಅತಿ ವಿನಯಂ ದೂರ್ತ ಲಕ್ಷಣಂ’ ಎಂಬ ಮಾತು ನನಗೆ ಪದೇಪದೇ ನೆನಪಿಗೆ ಬರುತ್ತಿದೆ” ಎಂದು ಕುಟುಕಿದ್ದಾರೆ.
ವಿಧಾನ ಪರಿಷತ್ ಚುನಾವಣೆ ಮತ್ತು ಯತ್ನಾಳ್ ಬೆಂಬಲ:
ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸಿರುವ ಕುರಿತು ಮಾತನಾಡಿದ ಕುಮಾರಸ್ವಾಮಿ, “ನಮಗೂ ಮತಗಳ ಅಗತ್ಯವಿದೆ, ಕಾಂಗ್ರೆಸ್ ಪಕ್ಷಕ್ಕೂ ಇದೆ. ಇದರಲ್ಲಿ ಯಾವುದೇ ರಹಸ್ಯ ತಂತ್ರಗಳಿಲ್ಲ. ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಎಲ್ಲರ ಬಳಿಯೂ ನಮ್ಮ ಪ್ರಯತ್ನದ ಭಾಗವಾಗಿ ಮತ ಕೇಳುತ್ತೇವೆ. ಕಾಂಗ್ರೆಸ್ ಬಳಿ ಹಣ ಮತ್ತು ಅಧಿಕಾರದ ಬಲವಿದೆ, ಮುಂದೆ ಏನಾಗುತ್ತದೆ ಎಂದು ಕಾದು ನೋಡೋಣ” ಎಂದರು.
ಜಾಗತಿಕ ಇಂಧನ ಬೆಲೆ ಏರಿಕೆ ಕುರಿತು ಸಮರ್ಥನೆ:
ಪೆಟ್ರೋಲ್ ಮತ್ತು ಗ್ಯಾಸ್ ಬೆಲೆ ಏರಿಕೆಯ ಕುರಿತು ಕಾಂಗ್ರೆಸ್ ಮಾಡುತ್ತಿರುವ ಟೀಕೆಗಳಿಗೆ ಉತ್ತರಿಸಿದ ಕೇಂದ್ರ ಸಚಿವರು, “ಜಾಗತಿಕ ಯುದ್ಧದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂಧನ ಬೆಲೆಗಳು ಏರಿಕೆಯಾಗುತ್ತಿವೆ. ಇದು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ, ವಿಶ್ವದ ಎಲ್ಲಾ ದೇಶಗಳಿಗೂ ಈ ಬೆಲೆ ಏರಿಕೆಯ ಬಿಸಿ ತಟ್ಟಿದೆ” ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಕಾಂಗ್ರೆಸ್ ನಾಯಕರು ಎಲ್ಲದರಲ್ಲೂ ರಾಜಕೀಯ ಮಾಡುತ್ತಿದ್ದಾರೆ. ರಾಜ್ಯದಲ್ಲೇ ನೋಡುವುದಾದರೆ ಇಲ್ಲಿನ ಕಾಂಗ್ರೆಸ್ ಸರ್ಕಾರ ಕಳೆದ ಮೂರೂವರೆ ವರ್ಷಗಳಿಂದ ನಿರಂತರವಾಗಿ ವಿವಿಧ ರಂಗಗಳಲ್ಲಿ ಬೆಲೆ ಏರಿಕೆ ಮಾಡುತ್ತಾ ಬಂದಿದೆ, ಇದಕ್ಕೆ ಅವರೇನು ಉತ್ತರಿಸುತ್ತಾರೆ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

