Sat. Jun 13th, 2026

ಅಣ್ಣಾಮಲೈ ನಿರ್ಗಮನ ವೈಯಕ್ತಿಕ ನಿರ್ಧಾರ; ಯತ್ನಾಳ್, ಈಶ್ವರಪ್ಪ ವಾಪಸಾತಿ ಬಗ್ಗೆ ಉಸ್ತುವಾರಿ ರಾಧಾ ಮೋಹನ್ ದಾಸ್ ಹೇಳಿದ್ದೇನು?

Share this with Friends

ಮಂಗಳೂರು: ಯಾರನ್ನೂ ಪಕ್ಷದಿಂದ ಉಚ್ಛಾಟಿಸುವ ಇಚ್ಛೆ ತಮಗೆ ಇರುವುದಿಲ್ಲ. ಆದರೆ ಕೆಲವು ವರ್ತನೆ ಹಾಗೂ ನಡವಳಿಕೆಗಳ ಕಾರಣದಿಂದಾಗಿ ಶಿಸ್ತು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿತ್ತು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ದಾಸ್ ಅಗರ್ವಾಲ್ ಸ್ಪಷ್ಟಪಡಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಿಂದ ಹೊರಗುಳಿದಿರುವ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಕೆ.ಎಸ್. ಈಶ್ವರಪ್ಪ ಅವರ ವಾಪಸಾತಿ ಕುರಿತು ಪ್ರತಿಕ್ರಿಯಿಸಿದರು. 6 ವರ್ಷಗಳ ಅವಧಿಯಲ್ಲಿ ಅವರ ವರ್ತನೆಯನ್ನು ವರಿಷ್ಠರು ಗಮನಿಸಲಿದ್ದಾರೆ. ಅವರನ್ನು ಮತ್ತೆ ಪಕ್ಷಕ್ಕೆ ಪುನಃ ಕರೆತರುವ ಅವಕಾಶಗಳು ಯಾವಾಗಲೂ ತೆರೆದಿರುತ್ತವೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಅಣ್ಣಾಮಲೈ ನಿರ್ಧಾರ ವೈಯಕ್ತಿಕ:

ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಪಕ್ಷ ತೊರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಅವರು, “ಬಿಜೆಪಿ ದೊಡ್ಡ ರಾಷ್ಟ್ರೀಯ ಪಕ್ಷವಾಗಿದ್ದು, ದೀರ್ಘಾವಧಿಯ ಯೋಜನೆಗಳನ್ನು ಹೊಂದಿದೆ. ನಾವು ದೇಶದ ಭವಿಷ್ಯದ ದೃಷ್ಟಿಯಿಂದ ಮುನ್ನಡೆಯುತ್ತಿದ್ದೇವೆಯೇ ಹೊರತು ಅಲ್ಪಾವಧಿ ರಾಜಕಾರಣಕ್ಕೆ ಗಮನ ಕೊಡುವುದಿಲ್ಲ. ಅಣ್ಣಾಮಲೈ ಪಕ್ಷ ತೊರೆದಿರುವುದು ಅವರ ವೈಯಕ್ತಿಕ ನಿರ್ಧಾರ” ಎಂದು ಜಾಣ್ಮೆಯ ಉತ್ತರ ನೀಡಿದರು. ಇದೇ ವೇಳೆ ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಕುರಿತು ರಾಷ್ಟ್ರೀಯ ಅಧ್ಯಕ್ಷರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ಸುಮಲತಾಗೆ ಸೂಕ್ತ ಸ್ಥಾನಮಾನ, ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅಗರ್ವಾಲ್

ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಭರವಸೆ ನೀಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸರ್ಕಾರದ ಕಾರ್ಯವೈಖರಿಯಿಂದ ಜನರಲ್ಲಿ ಆಕ್ರೋಶವಿದ್ದು, 2028ರ ಚುನಾವಣೆಯಲ್ಲಿ ಜನರೇ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ರಾಧಾ ಮೋಹನ್ ದಾಸ್ ಅಗರ್ವಾಲ್ ಹೇಳಿದರು.

 


Share this with Friends

Related Post