ಚೆನ್ನೈ: ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ನೂತನ ಸರ್ಕಾರಿ ಬಸ್‌ಗಳ ಸೇವೆಗೆ ಹಸಿರು ನಿಶಾನೆ ತೋರಿಸಿದ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು, ಸ್ವತಃ ತಾವೇ ಸಾಮಾನ್ಯ ಪ್ರಯಾಣಿಕರಂತೆ ಬಸ್‌ನಲ್ಲಿ ಪ್ರಯಾಣಿಸಿದ್ದಾರೆ. ಅಷ್ಟೇ ಅಲ್ಲದೆ ಪ್ರಯಾಣದ ವೇಳೆ ತಮ್ಮ ಮೊಬೈಲ್ ಫೋನ್ ಮೂಲಕ ರಸ್ತೆ ಹಾಗೂ ಬಸ್‌ನ ಒಳಗಿನ ದೃಶ್ಯಗಳನ್ನು ವೀಡಿಯೊ ಚಿತ್ರೀಕರಿಸಿದ್ದು, ಈ ಅಪರೂಪದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.
ಸಾರಿಗೆ ಇಲಾಖೆಯ ನೂತನ 300 ಸರ್ಕಾರಿ ಬಸ್‌ಗಳ ಲೋಕಾರ್ಪಣೆ ಕಾರ್ಯಕ್ರಮದ ಬಳಿಕ ಮುಖ್ಯಮಂತ್ರಿಗಳು ಸಾರ್ವಜನಿಕ ಬಸ್ ಹತ್ತಿ ಪ್ರಯಾಣಿಸಿದರು. ಬಸ್‌ನ ಮುಂಭಾಗದ ಸೀಟಿನಲ್ಲಿ ಕುಳಿತ ಅವರು, ತಮ್ಮ ಜೇಬಿನಿಂದ ಮೊಬೈಲ್ ಫೋನ್ ಹೊರಗೆ ತೆಗೆದು ಚಲಿಸುತ್ತಿದ್ದ ಬಸ್‌ನಿಂದ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಾರ್ವಜನಿಕರನ್ನು ಸ್ವತಃ ತಾವೇ ವೀಡಿಯೊ ಚಿತ್ರೀಕರಿಸಿಕೊಂಡರು. ಮುಖ್ಯಮಂತ್ರಿಯೊಬ್ಬರು ಸಾಮಾನ್ಯ ವ್ಲಾಗರ್ ಮಾದರಿಯಲ್ಲಿ ವೀಡಿಯೊ ಶೂಟ್ ಮಾಡಿದ ಈ ಶೈಲಿ ಸಾರ್ವಜನಿಕರ ಆಕರ್ಷಣೆಗೆ ಕಾರಣವಾಗಿದೆ.
ಕಂಡಕ್ಟರ್ ಜೊತೆ ಸಮಾಲೋಚನೆ
ಪ್ರಯಾಣದ ಅವಧಿಯಲ್ಲಿ ಮುಖ್ಯಮಂತ್ರಿಗಳು ಬಸ್ ನಿರ್ವಾಹಕರನ್ನು (ಕಂಡಕ್ಟರ್) ತಮ್ಮ ಪಕ್ಕದಲ್ಲೇ ಕುಳ್ಳಿರಿಸಿಕೊಂಡು ಆತ್ಮೀಯವಾಗಿ ಮಾತನಾಡಿಸಿದರು. ದೈನಂದಿನ ಪ್ರಯಾಣದ ವೇಳೆ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳು, ಬಸ್‌ಗಳ ನಿರ್ವಹಣೆ ಹಾಗೂ ಪ್ರಯಾಣಿಕರ ಸುರಕ್ಷತೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮುಕ್ತವಾಗಿ ಚರ್ಚಿಸಿ ಮಾಹಿತಿ ಪಡೆದುಕೊಂಡರು.
ಸಾರ್ವಜನಿಕ ಸಾರಿಗೆಯನ್ನು ಮತ್ತಷ್ಟು ಆಧುನೀಕರಣಗೊಳಿಸಲು ಮುಂದಿನ ದಿನಗಳಲ್ಲಿ ಕೇವಲ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಎಸಿ ಬಸ್‌ಗಳನ್ನು ಮಾತ್ರ ಖರೀದಿಸುವಂತೆ ಇದೇ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ಉನ್ನತಾಧಿಕಾರಿಗಳಿಗೆ ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.

