Thu. Jun 25th, 2026

ರೆಕಾರ್ಡ್ ಮಾಡಲು ಒಪ್ಪಿಗೆ ಕೊಟ್ಟರೆ ಪ್ರಸಾರ ಮಾಡಬಹುದೇ? ಸುಲಿಗೆ-ಬ್ಲ್ಯಾಕ್‌ಮೇಲ್ ತಡೆಗೆ ಬಂದ ಹೊಸ ನಿಯಮಗಳೇನು? ಇಲ್ಲಿದೆ ಕಂಪ್ಲೀಟ್ ಗೈಡ್

Share this with Friends

ಬೆಂಗಳೂರು: ರಾಜ್ಯದಲ್ಲಿ ಪ್ರತೀಕಾರಾತ್ಮಕ ಅಶ್ಲೀಲತೆ (Revenge Pornography), ಸೆಕ್ಸ್‌ಟಾರ್ಷನ್‌ (Sextortion) ಹಾಗೂ ಬ್ಲ್ಯಾಕ್‌ಮೇಲ್ ಪ್ರಕರಣಗಳಿಗೆ ಸಂಪೂರ್ಣ ಬ್ರೇಕ್ ಹಾಕಲು ಕರ್ನಾಟಕ ಸರ್ಕಾರ ಅತ್ಯಂತ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದೆ. ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಅನುಮತಿಯಿಲ್ಲದೆ ಹಂಚಿಕೊಳ್ಳುವ ಕಿಡಿಗೇಡಿಗಳ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯು ರಾಜ್ಯದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಪಾಲಿಸಬೇಕಾದ ಐತಿಹಾಸಿಕ ಸ್ಥಾಯಿ ಆದೇಶವನ್ನು (Standing Order) ಹೊರಡಿಸಿದೆ.

‘ರೆಕಾರ್ಡ್ ಮಾಡಲು ನೀಡಿದ ಒಪ್ಪಿಗೆ ಪ್ರಸಾರಕ್ಕಲ್ಲ!’

ಈ ನೂತನ ಆದೇಶದಲ್ಲಿ ಕಾನೂನಿನ ಅತ್ಯಂತ ಪ್ರಮುಖ ಅಂಶವೊಂದನ್ನು ಸ್ಪಷ್ಟಪಡಿಸಲಾಗಿದೆ. ಯಾವುದೇ ಖಾಸಗಿ ಫೋಟೋ ಅಥವಾ ವಿಡಿಯೋವನ್ನು ಚಿತ್ರೀಕರಿಸಲು (Record) ವ್ಯಕ್ತಿಯು ಒಪ್ಪಿಗೆ ನೀಡಿದ್ದರೂ ಸಹ, ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲು ಒಪ್ಪಿಗೆ ನೀಡಿದ್ದಾರೆ ಎಂದು ಪರಿಗಣಿಸಲಾಗುವುದಿಲ್ಲ. ಸಂಬಂಧಿತ ವ್ಯಕ್ತಿಯ ಲಿಖಿತ ಅಥವಾ ಸ್ಪಷ್ಟ ಅನುಮತಿಯಿಲ್ಲದೆ ಅಂತಹ ದೃಶ್ಯಗಳನ್ನು ಫಾರ್ವರ್ಡ್ ಮಾಡುವುದು, ಪ್ರಕಟಿಸುವುದು ಅಥವಾ ಶೇರ್ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಚಿತ್ರೀಕರಣಕ್ಕೆ ಒಪ್ಪಿಗೆ ಇದ್ದರೂ ಪ್ರಸಾರಕ್ಕೆ ಒಪ್ಪಿಗೆ ಇರದಿದ್ದರೆ ಅದು ಸಂಜ್ಞೇಯ (Cognizable) ಅಪರಾಧ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕಡ್ಡಾಯ ಎಫ್‌ಐಆರ್ ಮತ್ತು ಕಠಿಣ ಕಾಯ್ದೆಗಳ ಅನ್ವಯ

ರಿವೆಂಜ್ ಪೋರ್ನೋಗ್ರಫಿ, ಸೆಕ್ಸ್‌ಟಾರ್ಷನ್ ಹಾಗೂ ಬ್ಲ್ಯಾಕ್‌ಮೇಲ್ ವಿಡಿಯೋಗಳ ಮೂಲಕ ಕಿರುಕುಳ ನೀಡುವ ಪ್ರಕರಣಗಳಲ್ಲಿ ವಿಳಂಬ ಮಾಡದೆ ತಕ್ಷಣವೇ ಕಡ್ಡಾಯವಾಗಿ FIR ದಾಖಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಇಂತಹ ಡಿಜಿಟಲ್ ಅಪರಾಧಗಳಿಗೆ ಹೊಸ ಭಾರತೀಯ ನ್ಯಾಯ ಸಂಹಿತೆ (BNS), 2023 ರ ಸೆಕ್ಷನ್ 77 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act), 2000 ರ ಸೆಕ್ಷನ್ 66E, 67 ಮತ್ತು 67A ಅಡಿಯಲ್ಲಿ ಸೂಕ್ತ ಪ್ರಕರಣಗಳನ್ನು ದಾಖಲಿಸಬೇಕಾಗುತ್ತದೆ. ಬೆದರಿಕೆ, ಬ್ಲ್ಯಾಕ್‌ಮೇಲ್ ಮೂಲಕ ಹಣ ಸುಲಿಗೆ ಮಾಡುವುದು ಅಥವಾ ಲೈಂಗಿಕ ಅನುಕೂಲಕ್ಕಾಗಿ ಒತ್ತಡ ಹೇರುವ ಸಂದರ್ಭಗಳಲ್ಲಿ ಕ್ರಿಮಿನಲ್ ಬೆದರಿಕೆಯ ಹೆಚ್ಚುವರಿ ಕಠಿಣ ಕಾನೂನು ಸೆಕ್ಷನ್‌ಗಳನ್ನು ಸಹ ಕಿಡಿಗೇಡಿಗಳ ಮೇಲೆ ಹೇರಲು ಸೂಚಿಸಲಾಗಿದೆ.

ವ್ಯಾಪ್ತಿಯ ನೆಪ ಹೇಳುವಂತಿಲ್ಲ; ‘ಜೀರೋ-ಎಫ್‌ಐಆರ್’ ಕಡ್ಡಾಯ

ಸಾಮಾನ್ಯವಾಗಿ ಸೈಬರ್ ಅಪರಾಧಗಳು ನಡೆದಾಗ ಘಟನೆ ನಡೆದ ಪ್ರದೇಶ ತಮ್ಮ ಪೊಲೀಸ್ ಠಾಣೆಯ ವ್ಯಾಪ್ತಿಗೆ (Jurisdiction) ಬರುವುದಿಲ್ಲ ಎಂಬ ಕಾರಣ ನೀಡಿ ದೂರು ದಾಖಲಿಸಿಕೊಳ್ಳಲು ನಿರಾಕರಿಸುವಂತಿಲ್ಲ. ಇಂತಹ ಪ್ರಕರಣಗಳು ಎದುರಾದಾಗ ಸಂಬಂಧಿತ ಪೊಲೀಸ್ ಠಾಣೆಗಳು ತಕ್ಷಣವೇ ‘ಜೀರೋ-ಎಫ್‌ಐಆರ್’ (Zero-FIR) ದಾಖಲಿಸಿಕೊಳ್ಳಬೇಕು. ಆ ನಂತರ ಯಾವುದೇ ವಿಳಂಬವಿಲ್ಲದೆ ಪ್ರಕರಣವನ್ನು ಸೂಕ್ತ ಕಾನೂನು ವ್ಯಾಪ್ತಿಯುಳ್ಳ ಪೊಲೀಸ್ ಠಾಣೆಗೆ ವರ್ಗಾಯಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಆಕ್ಷೇಪಾರ್ಹ ವಿಡಿಯೋ ತಕ್ಷಣ ಡಿಲೀಟ್: ಸಾಕ್ಷ್ಯ ಸಂರಕ್ಷಣೆ

ಸಾಮಾಜಿಕ ಜಾಲತಾಣ ಅಥವಾ ಇಂಟರ್ನೆಟ್‌ನಲ್ಲಿ ಹರಡಿರುವ ಆಕ್ಷೇಪಾರ್ಹ ಖಾಸಗಿ ವಿಷಯಗಳನ್ನು ತಕ್ಷಣವೇ ತೆಗೆದುಹಾಕಲು (Remove) ಅಥವಾ ಬ್ಲಾಕ್ ಮಾಡಲು ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು. ಇದರೊಂದಿಗೆ ಡಿಜಿಟಲ್ ಸಾಕ್ಷ್ಯಗಳನ್ನು (Electronic Evidence) ಸುರಕ್ಷಿತವಾಗಿ ಸಂರಕ್ಷಿಸಬೇಕು. ತಾಂತ್ರಿಕ ಮತ್ತು ಆಳವಾದ ತನಿಖೆಗಾಗಿ ಸ್ಥಳೀಯ ಪೊಲೀಸರು ಸೈಬರ್ ಕ್ರೈಂ ಠಾಣೆಗಳು ಹಾಗೂ ಸಿಐಡಿ (CID) ಸೈಬರ್ ವಿಭಾಗದೊಂದಿಗೆ ನಿರಂತರ ಸಮನ್ವಯ ಸಾಧಿಸಿ ಕೆಲಸ ಮಾಡಬೇಕಾಗುತ್ತದೆ.

‘ವಿಕ್ಟಿಮ್ ಶೇಮಿಂಗ್‌’ಗೆ ಬ್ರೇಕ್; ಸಂತ್ರಸ್ತರ ಗುರುತು ಗೌಪ್ಯ

ಈ ಸ್ಥಾಯಿ ಆದೇಶವು ಸಂತ್ರಸ್ತರನ್ನು ಅತ್ಯಂತ ಗೌರವ ಹಾಗೂ ಸಂವೇದನಾಶೀಲತೆಯಿಂದ ನಡೆಸಿಕೊಳ್ಳಬೇಕೆಂದು ಕಟ್ಟುನಿಟ್ಟಾಗಿ ಒತ್ತಿ ಹೇಳುತ್ತದೆ. ತನಿಖೆಯ ಯಾವುದೇ ಹಂತದಲ್ಲೂ ಸಂತ್ರಸ್ತರ ಗುರುತನ್ನು ಬಹಿರಂಗಪಡಿಸದೆ ಗೌಪ್ಯವಾಗಿಡಬೇಕು. ಮುಖ್ಯವಾಗಿ, ಸಂತ್ರಸ್ತರನ್ನೇ ಅಪರಾಧಿಗಳಂತೆ ನೋಡುವುದು ಅಥವಾ ಅವರನ್ನೇ ದೂಷಿಸುವ (Victim Shaming) ವರ್ತನೆಯನ್ನು ಪೊಲೀಸರು ಸಂಪೂರ್ಣವಾಗಿ ನಿಲ್ಲಿಸಬೇಕು. ಸಾಧ್ಯವಿರುವ ಎಲ್ಲಾ ಪ್ರಕರಣಗಳಲ್ಲಿ ಮಹಿಳಾ ಸಂತ್ರಸ್ತರ ದೂರುಗಳನ್ನು ಮಹಿಳಾ ಪೊಲೀಸ್ ಅಧಿಕಾರಿಗಳೇ ದಾಖಲಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಕರ್ತವ್ಯ ಲೋಪವೆಸಗಿದರೆ ಅಧಿಕಾರಿಗಳ ವಿರುದ್ಧವೇ ಶಿಸ್ತು ಕ್ರಮ!

“ಹಿಂದೆ ವಿಡಿಯೋ ಮಾಡಲು ಒಪ್ಪಿಗೆ ನೀಡಲಾಗಿತ್ತು” ಎಂಬ ತಪ್ಪು ಕಾರಣವನ್ನು ಮುಂದಿಟ್ಟುಕೊಂಡು ಎಫ್‌ಐಆರ್ ದಾಖಲಿಸಲು ವಿಫಲವಾದರೆ ಅಥವಾ ದೂರು ಸ್ವೀಕರಿಸಲು ವಿಳಂಬ ಮಾಡಿದರೆ, ಅದನ್ನು ಅತ್ಯಂತ ಗಂಭೀರ ಲೋಪ ಎಂದು ಪರಿಗಣಿಸಲಾಗುತ್ತದೆ. ಇಂತಹ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕಠಿಣ ಇಲಾಖಾ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ. ಈ ಐತಿಹಾಸಿಕ ತೀರ್ಮಾನವು ಪ್ರತಿಯೊಬ್ಬ ನಾಗರಿಕನ ಸಂವಿಧಾನಬದ್ಧ ಖಾಸಗಿತನದ ಹಕ್ಕನ್ನು (Right to Privacy) ಮತ್ತಷ್ಟು ಬಲಪಡಿಸಲಿದೆ ಎನ್ನಲಾಗಿದೆ.

 


Share this with Friends

Related Post