Wed. Jul 8th, 2026

ಮತದಾರರ ಪಟ್ಟಿ ಅಕ್ರಮ ತನಿಖೆ ಚುರುಕು: ಕರ್ತವ್ಯ ಲೋಪವೆಸಗಿದ 35ಕ್ಕೂ ಹೆಚ್ಚು ಬಿಎಲ್‌ಒಗಳಿಗೆ ಶೋಕಾಸ್‌ ನೋಟಿಸ್‌!

Share this with Friends

ಬೆಂಗಳೂರು:ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಅದಕ್ಕೆ ಸಂಬಂಧಿಸಿದ ಅಕ್ರಮಗಳ ತನಿಖೆಯನ್ನು ಚುನಾವಣಾ ಆಯೋಗ ತೀವ್ರಗೊಳಿಸಿದೆ. ಈ ಪ್ರಕ್ರಿಯೆಯಲ್ಲಿ ತೀವ್ರ ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿತನ ತೋರಿರುವ 35ಕ್ಕೂ ಹೆಚ್ಚು ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಅಧಿಕೃತವಾಗಿ ಶೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರ ಪಟ್ಟಿಯ ಪಾವಿತ್ರ್ಯತೆಯನ್ನು ಕಾಯ್ದುಕೊಳ್ಳುವುದು ಆಯೋಗದ ಮೊದಲ ಆದ್ಯತೆಯಾಗಿದೆ. ಇದರಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ. ನಿಯಮಾವಳಿಗಳನ್ನು ಗಾಳಿಗೆ ತೂರಿ ಕೆಲಸ ಮಾಡಿರುವ ಅಧಿಕಾರಿಗಳ ವಿರುದ್ಧ ಈಗಾಗಲೇ ಪ್ರಾಥಮಿಕ ಕ್ರಮ ಕೈಗೊಳ್ಳಲಾಗಿದ್ದು, ನೋಟಿಸ್‌ಗೆ ನೀಡುವ ಉತ್ತರದ ಆಧಾರದ ಮೇಲೆ ಮುಂದಿನ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಚುನಾವಣಾ ಆಯೋಗದ ಉಸ್ತುವಾರಿಯಲ್ಲಿ ತನಿಖೆ:

ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯ ವಿಶೇಷ ತನಿಖಾ ಪ್ರಕ್ರಿಯೆಯು (SIR) ಸಂಪೂರ್ಣವಾಗಿ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ನೇರ ಉಸ್ತುವಾರಿಯಲ್ಲೇ ಪಾರದರ್ಶಕವಾಗಿ ನಡೆಯುತ್ತಿದೆ. ತನಿಖೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

ರಸ್ತೆಗಳಲ್ಲಿ ಕುಳಿತುಕೊಳ್ಳುವಂತಿಲ್ಲ, ಮನೆ ಮನೆಗೇ ಹೋಗಬೇಕು:

ಬೂತ್ ಮಟ್ಟದ ಅಧಿಕಾರಿಗಳು ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ ಅರ್ಜಿಗಳನ್ನು ವಿತರಿಸುತ್ತಿಲ್ಲ ಮತ್ತು ಪರಿಶೀಲನೆ ನಡೆಸುತ್ತಿಲ್ಲ ಎಂಬ ದೂರುಗಳು ಕೇಳಿಬಂದಿದ್ದವು. ಅಧಿಕಾರಿಗಳು ಬೀದಿಗಳಲ್ಲಿ ಟೆಂಟ್ ಹಾಕಿಕೊಂಡು ಕುಳಿತುಕೊಳ್ಳುವಂತಿಲ್ಲ. ಕಡ್ಡಾಯವಾಗಿ ಪ್ರತಿಯೊಬ್ಬ ಮತದಾರನ ಮನೆಗೆ ಭೇಟಿ ನೀಡಿ ನಿಗದಿತ ನಮೂನೆಯ ಅರ್ಜಿಗಳನ್ನು ನೀಡಬೇಕು ಮತ್ತು ಮಾಹಿತಿ ಸಂಗ್ರಹಿಸಬೇಕು ಎಂದು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ.

ದಸ್ತಾವೇಜು ಸಲ್ಲಿಕೆ ಹಾಗೂ ತಪ್ಪುಗಳ ತಿದ್ದುಪಡಿ:

ಮನೆ ಮನೆ ಭೇಟಿಯ ಮೊದಲ ಹಂತದಲ್ಲಿ ನಾಗರಿಕರು ಯಾವುದೇ ಪ್ರಮುಖ ಮೂಲ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡುವ ಅಗತ್ಯವಿಲ್ಲ. ಕೇವಲ ಅರ್ಜಿಯನ್ನು ಭರ್ತಿ ಮಾಡಿ ಕೊಟ್ಟರೆ ಸಾಕು. ವಯಸ್ಸು, ವಿಳಾಸ, ತಂದೆ-ತಾಯಿಯ ಹೆಸರಿನಲ್ಲಿ ಆಗಿರುವ ತಪ್ಪುಗಳು ಹಾಗೂ ಪೋಷಕರು ಮತ್ತು ಮಕ್ಕಳ ವಯಸ್ಸಿನ ವ್ಯತ್ಯಾಸದಲ್ಲಿರುವ ತಾಂತ್ರಿಕ ದೋಷಗಳನ್ನು ಪತ್ತೆ ಹಚ್ಚಲೆಂದೇ ಈ ವಿಶೇಷ ತಪಾಸಣೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಇಂತಹ ತಪ್ಪುಗಳಿರುವ ಮತದಾರರನ್ನು ಗುರುತಿಸಿ ಮುಂದಿನ ಹಂತದಲ್ಲಿ ಸೂಕ್ತ ದಾಖಲೆ ಪಡೆಯಲು ನೋಟಿಸ್ ನೀಡಲಾಗುತ್ತದೆ.

ಯಾರಿಗೂ ಅನ್ಯಾಯವಾಗಲ್ಲ:

ನಿಯಮಾವಳಿಗಳ ಪ್ರಕಾರ ಈಗಾಗಲೇ ಲಕ್ಷಾಂತರ ಮತದಾರರ ದತ್ತಾಂಶಗಳ ಮ್ಯಾಪಿಂಗ್ ಕೆಲಸಗಳು ನಡೆಯುತ್ತಿವೆ. ಪ್ರಸ್ತುತ ಚಾಲ್ತಿಯಲ್ಲಿರುವ ವಿಶೇಷ ಇಂಟೆನ್ಸಿವ್ ತಿದ್ದುಪಡಿ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿದ್ದು, ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅನಗತ್ಯವಾಗಿ ಕೈಬಿಡಲಾಗುವುದಿಲ್ಲ. ಸಾರ್ವಜನಿಕರು ಆನ್‌ಲೈನ್ ಮೂಲಕವೂ ತಮ್ಮ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಈ ತಿಂಗಳ ಕೊನೆಯವರೆಗೂ ಮನೆ ಮನೆ ಸಮೀಕ್ಷೆಯ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

 


Share this with Friends

Related Post