ಬೆಂಗಳೂರು: ರಾಜ್ಯದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿರುವ ಎಸ್‌ಐಆರ್ (SIR) ಮತ್ತು ಶಾಶ್ವತ ನಿವಾಸಿ ಪ್ರಮಾಣಪತ್ರ (PRC) ವಿತರಣೆ ಪ್ರಕ್ರಿಯೆಯು ಸಂಪೂರ್ಣವಾಗಿ ಕಾನೂನುಬದ್ಧವಾಗಿದ್ದು, ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷ ಬಿಜೆಪಿಯ ಆರೋಪಗಳನ್ನು ತಳ್ಳಿಹಾಕಿದ್ದಾರಲ್ಲದೆ, ದೆಹಲಿಯಲ್ಲಿ ನಡೆಯುತ್ತಿರುವ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಹಾಗೂ ರಾಜ್ಯದ ಬರ ನಿರ್ವಹಣೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ನುಸುಳುಕೋರರ ತಡೆಗೆ ಪಿಆರ್‌ಸಿ ಅಸ್ತ್ರ: ಬಿಜೆಪಿಗೆ ಕೌಂಟರ್
“ಹಿಂದೆಯೂ ಜಾತಿ ಪ್ರಮಾಣ ಪತ್ರವನ್ನು ತಹಶೀಲ್ದಾರ್ ಅವರೇ ನೀಡುತ್ತಿದ್ದರು. ಈಗ ಎಸ್‌ಐಆರ್ ಪ್ರಕ್ರಿಯೆಯಲ್ಲೂ ಅದನ್ನೇ ಕೇಳಲಾಗುತ್ತಿದ್ದು, ನಾವು ವ್ಯವಸ್ಥೆಯನ್ನು ಅಧಿಕೃತಗೊಳಿಸುತ್ತಿದ್ದೇವೆ” ಎಂದು ಪರಮೇಶ್ವರ್ ತಿಳಿಸಿದರು. ಕರ್ನಾಟಕದಲ್ಲಿ ಜನಿಸಿದ ಆಧಾರದ ಮೇಲೆ ಪಿಆರ್‌ಸಿ ನೀಡಲು ತೀರ್ಮಾನಿಸಲಾಗಿದ್ದು, 2002ರ ಮತದಾರರ ಪಟ್ಟಿಯನ್ನು ಆಧರಿಸಿ ಶೇ. 50 ರಿಂದ 60 ರಷ್ಟು ಜನರಿಗೆ ಇದರಿಂದ ಅನುಕೂಲವಾಗಲಿದೆ ಎಂದ ಅವರು, “ಬೇರೆ ರಾಜ್ಯದವರು ಮತ್ತು ಬಾಂಗ್ಲಾದೇಶದವರು ಹೆಚ್ಚಾಗುತ್ತಿದ್ದಾರೆ ಎಂದು ಬಿಜೆಪಿಯವರೇ ಈ ಹಿಂದೆ ಸದನದಲ್ಲಿ ಆರೋಪ ಮಾಡಿದ್ದರು. ಕನಿಷ್ಠ 10 ವರ್ಷ ಇಲ್ಲೇ ನೆಲೆಸಿದ್ದಾರೆ ಎಂಬ ಪುರಾವೆ ಸಿಕ್ಕರೆ ಮಾತ್ರ ಪರಿಗಣಿಸಲಾಗುತ್ತದೆ. ಬಾಂಗ್ಲಾದೇಶದವರಿಗೆ ನಾವು ಹೆಣ್ಣು ಕೊಡಲು ಸಾಧ್ಯವೇ? ನಾವು ಕೇಂದ್ರದ ವಿರುದ್ಧ ಹೋಗುತ್ತಿಲ್ಲ, ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳುತ್ತಿದ್ದೇವೆ” ಎಂದು ತಿರುಗೇಟು ನೀಡಿದರು.
ಸಂಪುಟ ವಿಸ್ತರಣೆಯಲ್ಲಿ ಯುವಕರಿಗೆ ಹೆಚ್ಚಿನ ಪ್ರಾತಿನಿಧ್ಯಕ್ಕೆ ಒಲವು
ರಾಜ್ಯದಲ್ಲಿ ಬಾಕಿ ಉಳಿದಿರುವ ಸಚಿವ ಸಂಪುಟ ವಿಸ್ತರಣೆಯ ಕಸರತ್ತಿನ ಕುರಿತು ಮಾತನಾಡಿದ ಸಚಿವರು, “ನಮ್ಮ ರಾಜ್ಯ ನಾಯಕರು ದೆಹಲಿಗೆ ತೆರಳಿದ್ದು, ಹೈಕಮಾಂಡ್ ಅನುಮತಿ ನೀಡಿದರೆ ಶೀಘ್ರದಲ್ಲೇ ಮಂತ್ರಿಮಂಡಲ ವಿಸ್ತರಣೆಯಾಗಲಿದೆ. ಹೊಸ ಮಂತ್ರಿಗಳ ಆಯ್ಕೆಯ ಮಾನದಂಡಗಳಲ್ಲಿ ಯುವ ನಾಯಕರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎನ್ನುವ ಅಂಶ ಪ್ರಮುಖವಾಗಿದ್ದು, ಅದನ್ನು ವರಿಷ್ಠರು ಗಣನೆಗೆ ತೆಗೆದುಕೊಳ್ಳಬೇಕು” ಎಂದು ಆಶಯ ವ್ಯಕ್ತಪಡಿಸಿದರು. ಹಿಂದೆ ತಾವು ಪಕ್ಷದ ಅಧ್ಯಕ್ಷರಾಗಿದ್ದಾಗಲೂ ಹೊಸ ನಾಯಕತ್ವಕ್ಕೆ ಆದ್ಯತೆ ನೀಡುವ ಮಾನದಂಡವಿತ್ತು, ಅದು ಈಗಲೂ ಅನ್ವಯಿಸುತ್ತದೆ ಎಂದು ಭಾವಿಸಿದ್ದೇನೆ ಎಂದರು.
ಬರ ನಿರ್ವಹಣೆಗೆ ಕೋಟ್ಯಂತರ ಅನುದಾನ ಬಿಡುಗಡೆ
ರಾಜ್ಯದ ಬರ ಪರಿಸ್ಥಿತಿಯ ಕುರಿತು ಪ್ರತಿಕ್ರಿಯಿಸಿದ ಅವರು, ಯಾವ ಯಾವ ತಾಲ್ಲೂಕುಗಳಲ್ಲಿ ತೀವ್ರ ಬರ ಇದೆ ಎಂಬುದನ್ನು ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಅಧಿಕಾರಿಗಳ ವರದಿ ಬಂದ ತಕ್ಷಣವೇ ಮುಂದಿನ ಕಠಿಣ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಪ್ರತಿ ಜಿಲ್ಲೆಗೆ ತಲಾ ₹5 ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಸದ್ಯ ಜಿಲ್ಲಾಧಿಕಾರಿಗಳ ಪಿಡಿ (PD) ಖಾತೆಯಲ್ಲಿ ₹329 ಕೋಟಿ ಹಣ ಲಭ್ಯವಿದ್ದು, ಇದರ ಜೊತೆಗೆ ಪ್ರತಿ ತಾಲ್ಲೂಕಿಗೆ ತಲಾ ₹1 ಕೋಟಿ ಹಣವನ್ನು ಮೀಸಲಿಡಲಾಗಿದೆ ಎಂದು ಹಣಕಾಸಿನ ನೆರವಿನ ವಿವರ ನೀಡಿದರು.

