ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಸಂಪುಟ ವಿಸ್ತರಣೆಯ ಕಸರತ್ತು ಈಗ ಅಂತಿಮ ಘಟ್ಟ ತಲುಪಿದ್ದು, ನೂತನ ಸಚಿವರುಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದ ದಿನಾಂಕ ಬಹುತೇಕ ಖಚಿತಗೊಂಡಿದೆ.

ದೆಹಲಿಯಲ್ಲಿ ರಾಜ್ಯದ ಪ್ರಮುಖ ನಾಯಕರು ಹೈಕಮಾಂಡ್ ಜೊತೆ ಮ್ಯಾರಾಥಾನ್ ಸಭೆ ನಡೆಸುತ್ತಿರುವ ಬೆನ್ನಲ್ಲೇ, ಇತ್ತ ರಾಜಧಾನಿ ಬೆಂಗಳೂರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಹೊರಡಿಸಿರುವ ಅಧಿಕೃತ ಆದೇಶದ ಪತ್ರವೊಂದು ಸದ್ಯ ಹೊರಬಿದ್ದಿದ್ದು, ಭಾರಿ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಸರ್ಕಾರದ ಈ ರಹಸ್ಯ ಪತ್ರದ ಪ್ರಕಾರ ಮುಂಬರುವ ಜುಲೈ 22 ರಂದು ಬುಧವಾರವೇ ರಾಜ್ಯ ಮಂತ್ರಿಮಂಡಲಕ್ಕೆ ಹೊಸ ಸಚಿವರುಗಳ ಅಧಿಕೃತ ಸೇರ್ಪಡೆ ಪ್ರಕ್ರಿಯೆ ನೆರವೇರಲಿದೆ ಎಂದು ತಿಳಿದುಬಂದಿದೆ.
ರಾಜ್ಯ ಸರ್ಕಾರದ ಸಚಿವಾಲಯದಿಂದ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ರವಾನೆಯಾಗಿರುವ ಈ ಅಧಿಕೃತ ಆಡಳಿತಾತ್ಮಕ ಪತ್ರದಲ್ಲಿ, ನೂತನ ಸಚಿವರುಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ರಾಜಭವನದ ಸನಿಹದ ಲೋಕಭವನದ ಗಾಜಿನ ಮನೆಯಲ್ಲಿ (Glass House) ಅದ್ದೂರಿ ಸಿದ್ಧತೆಗಳನ್ನು ಕೈಗೊಳ್ಳುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ಆರ್. ಯದುಕುಮಾರ್ ಅವರ ಡಿಜಿಟಲ್ ಸಹಿಯೊಂದಿಗೆ ಜುಲೈ 21 ರಂದೇ ಅಧಿಕೃತವಾಗಿ ಹೊರಬಿದ್ದಿರುವ ಈ ಪತ್ರದನ್ವಯ, ಜುಲೈ 22 ರ ನಿಗದಿತ ಕಾರ್ಯಕ್ರಮಕ್ಕಾಗಿ ಜರ್ಮನ್ ಟೆಂಟ್, ಕಾರ್ಪೆಟ್ ಹಾಗೂ ಅಗತ್ಯ ಪೀಠೋಪಕರಣಗಳ ವ್ಯವಸ್ಥೆಯನ್ನು ಮಾಡಲು ಖಾಸಗಿ ಟೆಂಟ್ಹೌಸ್ ಸಂಸ್ಥೆಗೆ ಹೊಣೆ ವಹಿಸಲಾಗಿದೆ. ಈ ಎಲ್ಲಾ ಸಿದ್ಧತೆಗಳನ್ನು ಲೋಕೋಪಯೋಗಿ ಇಲಾಖೆಯ ಸಿಬ್ಬಂದಿಗಳು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ, ಉಪಕರಣಗಳ ನಿಖರ ಲೆಕ್ಕವನ್ನು ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಸಚಿವ ಸಂಪುಟದ 20 ಖಾಲಿ ಸ್ಥಾನಗಳ ಭರ್ತಿಗಾಗಿ ಆಕಾಂಕ್ಷಿ ಶಾಸಕರು ತೀವ್ರ ಲಾಬಿ ನಡೆಸುತ್ತಿದ್ದು, ಜುಲೈ 25 ರಂದು ಮುಹೂರ್ತ ಫಿಕ್ಸ್ ಆಗಬಹುದು ಎಂಬ ರಾಜಕೀಯ ಲೆಕ್ಕಾಚಾರಗಳು ಕೇಳಿಬಂದಿದ್ದವು. ಆದರೆ ಆ ಎಲ್ಲಾ ಊಹೆಗಳನ್ನು ಉಲ್ಟಾ ಮಾಡಿರುವ ಸರ್ಕಾರದ ಈ ಆಂತರಿಕ ಪತ್ರವು, ನಾಳೆಯೇ ಅಂದರೆ ಬುಧವಾರವೇ ಮಂತ್ರಿಮಂಡಲ ವಿಸ್ತರಣೆಯಾಗಲಿದೆ ಎಂಬ ಸ್ಪಷ್ಟ ಸುಳಿವನ್ನು ನೀಡಿದೆ. ಇಲಾಖೆಯು ಈ ಪತ್ರದ ಪ್ರತಿಗಳನ್ನು ಸಹಾಯಕ ಕಾರ್ಯಪಾಲಕ ಅಭಿಯಂತರರು, ಲೋಕಭವನದ ಭದ್ರತಾಧಿಕಾರಿ ಹಾಗೂ ವಿಧಾನಸೌಧದ ಹಿರಿಯ ಮೇಲ್ವಿಚಾರಕರಿಗೆ ತುರ್ತು ಕ್ರಮಕ್ಕಾಗಿ ರವಾನಿಸಿದ್ದು, ರಾಜಧಾನಿಯಲ್ಲಿ ಸದ್ಯ ಪ್ರಮಾಣ ವಚನ ಸ್ವೀಕಾರದ ರಾಜಕೀಯ ಸಿದ್ಧತೆಗಳು ಯುದ್ಧೋಪಾದಿಯಲ್ಲಿ ಆರಂಭವಾಗಿವೆ.

