Wed. Jul 22nd, 2026

ತುಮಕೂರಿನಲ್ಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿ; 25 ವರ್ಷಗಳ ಕನಸು ಬಿಚ್ಚಿಟ್ಟ ಪರಮೇಶ್ವರ್ 

Share this with Friends

ತುಮಕೂರು:ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ರಾಜ್ಯದ ಎರಡನೇ ಬೃಹತ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರು ಜಿಲ್ಲೆಯಲ್ಲೇ ಸ್ಥಾಪಿಸಬೇಕು ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್ ಅವರು ಬಲವಾಗಿ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಹೊಸ ವಿಮಾನ ನಿಲ್ದಾಣದ ಕುರಿತು ಪ್ರಸ್ತಾಪಿಸಿದರು.ಈ ಯೋಜನೆಯು ತುಮಕೂರಿಗೆ ಬಂದರೆ ಪ್ರಾದೇಶಿಕ ಅಭಿವೃದ್ಧಿಗೆ ಭಾರಿ ವೇಗ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.

25 ವರ್ಷಗಳ ಸುದೀರ್ಘ ಕನಸು:

“ತುಮಕೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂಬುದು ನನ್ನ ಇಂದಿನ ಬೇಡಿಕೆಯಲ್ಲ. ನಾನು ಕಳೆದ 25 ವರ್ಷಗಳಿಂದಲೂ ಇದೇ ನಿಲುವನ್ನು ಹೊಂದಿದ್ದು, ನನ್ನ ಇಚ್ಛೆಯನ್ನು ನಿರಂತರವಾಗಿ ವ್ಯಕ್ತಪಡಿಸುತ್ತಾ ಬಂದಿದ್ದೇನೆ” ಎಂದು ಪರಮೇಶ್ವರ್ ನೆನಪಿಸಿಕೊಂಡರು. ಬೆಂಗಳೂರಿಗೆ ಅತ್ಯಂತ ಹತ್ತಿರವಿರುವ ಮತ್ತು ಕೈಗಾರಿಕಾ ಹಬ್ ಆಗಿ ಬೆಳೆಯುತ್ತಿರುವ ತುಮಕೂರು ಜಿಲ್ಲೆಯು ಈ ಯೋಜನೆಗೆ ಅತ್ಯಂತ ಸೂಕ್ತವಾದ ಸ್ಥಳವಾಗಿದೆ ಎಂಬುದು ಅವರ ಸ್ಪಷ್ಟ ನಿಲುವಾಗಿದೆ.

ಬಿಡದಿ ಸೇರಿ ಹಲವು ಜಾಗಗಳ ಪರಿಶೀಲನೆ:

ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಾಪನೆಗಾಗಿ ರಾಮನಗರ ಜಿಲ್ಲೆಯ ಬಿಡದಿ ಸೇರಿದಂತೆ ರಾಜ್ಯದ ಬೇರೆ ಬೇರೆ ಆಯಕಟ್ಟಿನ ಜಾಗಗಳನ್ನು ಈಗಾಗಲೇ ಇಲಾಖೆಯ ವತಿಯಿಂದ ಗುರುತಿಸಿ ಪರಿಶೀಲಿಸಲಾಗುತ್ತಿದೆ. ಆದರೆ, ಭೌಗೋಳಿಕ ಮತ್ತು ಮೂಲಸೌಕರ್ಯಗಳ ದೃಷ್ಟಿಯಿಂದ ತುಮಕೂರು ಜಿಲ್ಲೆಯೇ ಎಲ್ಲಕ್ಕಿಂತ ಹೆಚ್ಚು ಯೋಗ್ಯವಾಗಿದೆ. ಒಂದು ವೇಳೆ ಇದು ತುಮಕೂರಿನಲ್ಲೇ ಸ್ಥಾಪನೆಯಾದರೆ ಇಡೀ ರಾಜ್ಯಕ್ಕೆ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಗೆ ಬಹಳ ದೊಡ್ಡ ಮಟ್ಟದ ಅನುಕೂಲವಾಗಲಿದೆ. ಹಾಗಾಗಿ ನನ್ನ ಸಂಪೂರ್ಣ ಆಗ್ರಹ ಮತ್ತು ಒತ್ತಡ ಏನಿದ್ದರೂ ಅದು ತುಮಕೂರು ಜಿಲ್ಲೆಯ ಪರವಾಗಿಯೇ ಇರಲಿದೆ ಎಂದು ಅವರು ಸಾರಿದರು.

ಬರ ಪರಿಹಾರ ನಿಯಮ ಸಡಿಲಿಕೆಗೆ ಆಗ್ರಹಿಸಿ ಸಿಎಂ ಜೊತೆ ಜಂಟಿ ಪತ್ರ

ರಾಜ್ಯದಲ್ಲಿ ತಲೆದೋರಿರುವ ತೀವ್ರ ಬರಗಾಲದ ಪರಿಸ್ಥಿತಿ ಮತ್ತು ವಿದ್ಯಾರ್ಥಿಗಳ ಹಿತರಕ್ಷಣೆ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವುಗಳಿಗೆ ಡಿಸಿಎಂ  ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದ ಪ್ರಸಕ್ತ ಗಂಭೀರ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರದ ಹಸ್ತಕ್ಷೇಪ ಅತ್ಯಗತ್ಯವಾಗಿದ್ದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಅವರು ದೂರಿದ್ದಾರೆ.

ರಾಜ್ಯಾದ್ಯಂತ ಬರದ ಛಾಯೆ ದೊಡ್ಡ ಪ್ರಮಾಣದಲ್ಲಿ ಆವರಿಸುತ್ತಿದ್ದು ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಪರಮೇಶ್ವರ್ ಆತಂಕ ವ್ಯಕ್ತಪಡಿಸಿದ್ದಾರೆ. ಬರದ ನಿಯಮಗಳನ್ನು ಸಡಿಲಗೊಳಿಸಿ ರಾಜ್ಯಕ್ಕೆ ತುರ್ತು ಸಹಾಯಹಸ್ತ ಚಾಚುವಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ತಾವು ಜಂಟಿಯಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಆದರೆ ಕೇಂದ್ರದಿಂದ ಈವರೆಗೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ತಾವು ಇಂದು ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದರು. ಶನಿವಾರ ಚಿತ್ರದುರ್ಗದಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಬೆಂಗಳೂರು ವಿಭಾಗದ ಪ್ರಗತಿ ಪರಿಶೀಲನಾ ಸಭೆ ನಡೆಯಲಿದ್ದು, ಶೀಘ್ರದಲ್ಲೇ ಮೈಸೂರು ವಿಭಾಗದ ಸಭೆಯನ್ನೂ ಹಮ್ಮಿಕೊಳ್ಳಲಾಗುವುದು ಎಂದರು.

ವಿದ್ಯಾರ್ಥಿಗಳ ಪರ ಧ್ವನಿ ಎತ್ತಿದ ರಾಹುಲ್ ಗಾಂಧಿ ಬಂಧನಕ್ಕೆ ಖಂಡನೆ

ದೇಶದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಗಿರುವ ಮೋಸ ಮತ್ತು ಅನ್ಯಾಯದ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಧ್ವನಿ ಎತ್ತಿದ್ದಾರೆ. ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಅವರನ್ನು ಕಾನೂನುಬಾಹಿರವಾಗಿ ಬಂಧಿಸಿ ದುರ್ವರ್ತನೆ ತೋರಲಾಗಿದೆ. ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ಬಳಸಿ ರಾಹುಲ್ ಗಾಂಧಿಯವರ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುತ್ತಿದೆ. ಆದರೆ ಯುವಜನತೆಯ ಪರವಾಗಿರುವ ಕಾಂಗ್ರೆಸ್ ಧ್ವನಿ ಮತ್ತು ಪ್ರತಿಭಟನೆಗಳು ಎಂದಿಗೂ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.

ಕೇಂದ್ರ ಸಚಿವರ ರಾಜೀನಾಮೆಗೆ ಆಗ್ರಹ

ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪರಮೇಶ್ವರ್ ಒತ್ತಾಯಿಸಿದರು. ಈ ಹಿಂದೆ ದೇಶದಲ್ಲಿ ರೈಲ್ವೆ ಅಪಘಾತಗಳಾದಾಗ ನೈತಿಕ ಹೊಣೆ ಹೊತ್ತು ಸಚಿವರುಗಳು ರಾಜೀನಾಮೆ ನೀಡಿದ ಉದಾಹರಣೆಗಳಿವೆ. ಅಧಿಕಾರದಲ್ಲಿ ಇರುವವರು ತಪ್ಪು ಮಾಡಿದಾಗ ರಾಜೀನಾಮೆ ಕೇಳುವುದು ಸ್ವಾಭಾವಿಕವಾಗಿದ್ದು, ಪ್ರಧಾನಿ ಮೋದಿಯವರೂ ರಾಜೀನಾಮೆ ನೀಡಬೇಕೆಂಬ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡರು.

ತುಮಕೂರಿಗೆ ಮತ್ತೊಂದು ಸಚಿವ ಸ್ಥಾನದ ಬೇಡಿಕೆ

ಸಚಿವ ಸಂಪುಟ ವಿಸ್ತರಣೆಯ ಕುರಿತ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, “ತುಮಕೂರು ರಾಜ್ಯದ ಅತಿ ದೊಡ್ಡ ಜಿಲ್ಲೆಗಳಲ್ಲಿ ಒಂದಾಗಿದೆ. ಹಾಗಾಗಿ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ನೀಡಬೇಕು ಎಂದು ನಾನೂ ಕೂಡ ವರಿಷ್ಠರಲ್ಲಿ ಮನವಿ ಮಾಡಿದ್ದೇನೆ” ಎಂದರು. ಪ್ರಸ್ತುತ ರಾಜ್ಯ ನಾಯಕರು ದೆಹಲಿಗೆ ತೆರಳಿದ್ದು, ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ. ವರಿಷ್ಠರ ಅನುಮತಿ ದೊರೆತ ತಕ್ಷಣವೇ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು

 

 


Share this with Friends

Related Post