Wed. Jul 22nd, 2026

ಆಡಳಿತ ಮತ್ತು ರಿಜಿಸ್ಟ್ರಿ ನಿರ್ಲಕ್ಷ್ಯಕ್ಕೆ ವಕೀಲರ ಆಕ್ರೋಶ: ಬೆಂಗಳೂರು ವಕೀಲರ ಸಂಘದಿಂದ ಉಚ್ಚ ನ್ಯಾಯಾಲಯದ ಮುಂಭಾಗ ಬೃಹತ್ ಧರಣಿ!

Share this with Friends

ಬೆಂಗಳೂರು:ಕಳೆದ ಹಲವು ದಿನಗಳಿಂದ ವಕೀಲರು ಎದುರಿಸುತ್ತಿರುವ ವಿವಿಧ ದೈನಂದಿನ ಮತ್ತು ವೃತ್ತಿಪರ ಗಂಭೀರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸದ ಹಾಗೂ ಅವುಗಳನ್ನು ಕಾಲಮಿತಿಯಲ್ಲಿ ಬಗೆಹರಿಸಲು ವಿಫಲವಾಗಿರುವ ರಿಜಿಸ್ಟ್ರಿ ಮತ್ತು ಆಡಳಿತ ಮಂಡಳಿಯ ಧೋರಣೆಯನ್ನು ಖಂಡಿಸಿ, ಬೆಂಗಳೂರು ವಕೀಲರ ಸಂಘದ (AAB) ವತಿಯಿಂದ ಇಂದು ಕರ್ನಾಟಕ ಉಚ್ಚ ನ್ಯಾಯಾಲಯದ ಮುಂಭಾಗದಲ್ಲಿ ಬೃಹತ್ ಧರಣಿ ಸತ್ಯಾಗ್ರಹವನ್ನು ನಡೆಸಲಾಯಿತು.

ಆಡಳಿತದ ವಿಳಂಬ ನೀತಿಯ ವಿರುದ್ಧ ಪ್ರತಿಭಟನೆ:

ವಕೀಲರ ದೈನಂದಿನ ಕೋರ್ಟ್ ಕಾರ್ಯಕಲಾಪಗಳಿಗೆ ಸಂಬಂಧಿಸಿದ ಹಲವು ಪ್ರಮುಖ ತಾಂತ್ರಿಕ ಬೇಡಿಕೆಗಳು, ಕೇಸ್‌ಗಳ ಲಿಸ್ಟಿಂಗ್ ಗೊಂದಲಗಳು ಮತ್ತು ರಿಜಿಸ್ಟ್ರಿ ಮಟ್ಟದಲ್ಲಿ ಆಗುತ್ತಿರುವ ಅತಿಯಾದ ವಿಳಂಬ ನೀತಿಯ ವಿರುದ್ಧ ವಕೀಲರ ಸಂಘವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಹಲವು ಬಾರಿ ವ್ಯವಸ್ಥಿತವಾಗಿ ಮನವಿ ಸಲ್ಲಿಸಿದರೂ ಆಡಳಿತ ವಿಭಾಗವು ಸಮಸ್ಯೆಗಳ ಪರಿಹಾರಕ್ಕೆ ಯಾವುದೇ ಸಕಾರಾತ್ಮಕ ಕ್ರಮ ಕೈಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ವಕೀಲರ ಹಿತರಕ್ಷಣೆಯ ದೃಷ್ಟಿಯಿಂದ, ಇಂದು ನೇರವಾಗಿ ನ್ಯಾಯಾಲಯದ ಆವರಣದ ಮುಖ್ಯ ಮುಂಭಾಗದಲ್ಲೇ ಧರಣಿ ಕೂರುವ ಮೂಲಕ ವಕೀಲರು ಆಡಳಿತದ ವಿರುದ್ಧ ತಮ್ಮ ತೀವ್ರ ಆಕ್ರೋಶವನ್ನು ಹೊರಹಾಕಿದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರು ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲರಾದ ವಿವೇಕ್ ಸುಬ್ಬಾರೆಡ್ಡಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಧರಣಿಯ ಮುಂಚೂಣಿಯನ್ನು ಸಂಘದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಗೌಡ, ಉಪಾಧ್ಯಕ್ಷ ಗಿರೀಶ್ ಕುಮಾರ್, ಮತ್ತು ಖಜಾಂಚಿ ಶ್ವೇತಾ ರವಿಶಂಕರ್ ಅವರು ಜಂಟಿಯಾಗಿ ವಹಿಸಿದ್ದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಹಾಗೂ ನೂರಾರು ವಕೀಲ ಮಿತ್ರರು ಧರಣಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಆಡಳಿತದ ವಿರುದ್ಧ ಒಗ್ಗಟ್ಟಿನ ಧ್ವನಿ ಎತ್ತಿದರು. ವಕೀಲರು ಎದುರಿಸುತ್ತಿರುವ ತೊಂದರೆಗಳಿಗೆ ಹೈಕೋರ್ಟ್ ರಿಜಿಸ್ಟ್ರಿ ತಕ್ಷಣವೇ ಸ್ಪಂದಿಸಿ, ನ್ಯಾಯಯುತ ಪರಿಹಾರ ಒದಗಿಸದಿದ್ದರೆ ಮುಂಬರುವ ದಿನಗಳಲ್ಲಿ ಕಾನೂನು ಹೋರಾಟ ಮತ್ತು ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಸಂಘದ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.


Share this with Friends

Related Post