ಬೆಂಗಳೂರು:”ಕರ್ನಾಟಕವು ಗೂಂಡಾಗಳ ರಾಜ್ಯವಾಗಿ ಮಾರ್ಪಟ್ಟಿದೆ. ಇಲ್ಲಿರುವುದು ಗೂಂಡಾ ಮುಖ್ಯಮಂತ್ರಿ” ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀಕ್ಷ್ಣ ಮಾಗ್ದಾಳಿ ನಡೆಸಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ದೇಶದ್ರೋಹಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಮತ್ತು ದೇಶದ ಯುವಜನತೆಗೆ ದ್ರೋಹ ಎಸಗುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯ ನೇತೃತ್ವವನ್ನು ಆರ್. ಅಶೋಕ್ ವಹಿಸಿದ್ದರು.ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರ ಹಲ್ಲೆ ರಾಜಕಾರಣ ಹಾಗೂ ಸರ್ಕಾರದ ದ್ವೇಷದ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದರು.
ಪ್ರತಿಭಟನಾಕಾರರ ಬಂಧನಕ್ಕೆ ಆಕ್ರೋಶ:
ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ತಮ್ಮನ್ನು ಮತ್ತು ಬಿಜೆಪಿ ಮುಖಂಡರನ್ನು ಸರ್ಕಾರ ಕಾನೂನುಬಾಹಿರವಾಗಿ ಬಂಧಿಸಿ ಪೊಲೀಸ್ ಕಸ್ಟಡಿಯಲ್ಲಿಟ್ಟಿದೆ ಎಂದು ಅವರು ಆಕ್ರೋಶ ಹೊರಹಾಕಿದರು. “ನಾವು ಸದ್ಯ ಪೊಲೀಸ್ ಸುಪರ್ದಿಯಲ್ಲಿದ್ದೇವೆ. ಇಲ್ಲಿ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿದ್ದಾರೆ. ಒಂದು ವೇಳೆ ನಮ್ಮ ಪ್ರಾಣಕ್ಕೆ ಏನಾದರೂ ಅಪಾಯ ಸಂಭವಿಸಿದರೆ ಅದಕ್ಕೆ ಯಾರು ಜವಾಬ್ದಾರರು?” ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್ ಕಚೇರಿ ಗೂಂಡಾಗಳ ಅಡ್ಡೆ – ಪೊಲೀಸರ ದಾಳಿಗೆ ಆಗ್ರಹ:
ಕಾಂಗ್ರೆಸ್ ಕಚೇರಿಯನ್ನು ಗೂಂಡಾಗಳ ಕಚೇರಿ ಎಂದು ಕರೆದ ಆರ್. ಅಶೋಕ್, “ಕಾಂಗ್ರೆಸ್ಸಿಗರು ತಮ್ಮ ಕಚೇರಿಯಲ್ಲಿ ಮಚ್ಚು, ಲಾಂಗು, ಚಾಕು ಹಾಗೂ ಮೊಟ್ಟೆಗಳನ್ನು ಮೊದಲೇ ಸಂಗ್ರಹಿಸಿ ಇಟ್ಟುಕೊಂಡಿದ್ದರು. ಅಲ್ಲಿ ಬಾಂಬ್ ಕೂಡ ಇತ್ತೇ ಎಂಬುದು ನಮಗೆ ತಿಳಿದಿಲ್ಲ. ಹೀಗಾಗಿ ಪೊಲೀಸರು ತಕ್ಷಣವೇ ಕಾಂಗ್ರೆಸ್ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲಿಸಬೇಕು” ಎಂದು ಆಗ್ರಹಿಸಿದರು. ಪ್ರತಿಭಟನೆ ವೇಳೆ ಬಿಜೆಪಿ ಶಾಸಕರಾದ ವೈ.ಎ. ನಾರಾಯಣಸ್ವಾಮಿ (ರಾಮಮೂರ್ತಿ), ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರ ಮೇಲೆ ಭೀಕರ ಹಲ್ಲೆ ನಡೆಸಲಾಗಿದೆ. ಶಾಸಕ ಹರೀಶ್ ಪೂಂಜಾ ಅವರಿಗೆ ಹಿಗ್ಗಾಮುಗ್ಗಾ ಮೊಟ್ಟೆಗಳಿಂದ ಹೊಡೆದು, ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂದು ಅವರು ದೂರಿದರು.
“ಇವರೆಲ್ಲ ಕೊತ್ವಾಲ್ ರಾಮಚಂದ್ರನ ಶಿಷ್ಯರು”:
ರಾಜ್ಯ ಸರ್ಕಾರದ ಪ್ರಮುಖರ ವಿರುದ್ಧ ಹರಿಹಾಯ್ದ ಅಶೋಕ್, “ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಬಿ.ಕೆ. ಹರಿಪ್ರಸಾದ್ ಅವರೆಲ್ಲರೂ ಅಂಡರ್‌ವರ್ಲ್ಡ್ ಡಾನ್ ಕೊತ್ವಾಲ್ ರಾಮಚಂದ್ರನ ಶಿಷ್ಯಂದಿರು. ಪ್ರಸ್ತುತ ಕರ್ನಾಟಕದಲ್ಲಿ ಕೊತ್ವಾಲ್ ರಾಮಚಂದ್ರನ ಗೂಂಡಾ ಆಡಳಿತವೇ ನಡೆಯುತ್ತಿದೆ. ಕೊಲೆ ಮಾಡಲು ಬಂದಿದ್ದ ಆ ಹಲ್ಲೆಕೋರರು ಭಯೋತ್ಪಾದಕರು ಮತ್ತು ಪಾಕಿಸ್ತಾನದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ರಾಜ್ಯದಲ್ಲಿ ವಿರೋಧ ಪಕ್ಷದ ಜನಪ್ರತಿನಿಧಿಗಳಿಗೇ ರಕ್ಷಣೆ ಇಲ್ಲದಂತಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಈ ಗೂಂಡಾಗಿರಿ ವರ್ತನೆಯ ವಿರುದ್ಧ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಗೆ ಅಧಿಕೃತವಾಗಿ ದೂರು ನೀಡುವುದಾಗಿ ತಿಳಿಸಿದ ಅವರು, ಹಲ್ಲೆ ನಡೆಸಿದ ಎಲ್ಲಾ ಗೂಂಡಾಗಳನ್ನು ತಕ್ಷಣವೇ ‘ಗೂಂಡಾ ಕಾಯ್ದೆ’ಯಡಿ ಬಂಧಿಸಿ ಜೈಲಿಗಟ್ಟಬೇಕು ಎಂದು ಕಟ್ಟುನಿಟ್ಟಾಗಿ ಒತ್ತಾಯಿಸಿದರು.

