ಅಯೋಧ್ಯಾ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ವಿಶ್ವಸ್ತರ (ನ್ಯಾಸಿ) ಮಹತ್ವದ ಸಭೆಯು ಅಯೋಧ್ಯೆಯಲ್ಲಿ ಬುಧವಾರ (ಜುಲೈ 22, 2026) ಯಶಸ್ವಿಯಾಗಿ ಜರುಗಿತು. ಆಷಾಢ ಶುಕ್ಲ ನವಮಿ ದಿನದಂದು ನಡೆದ ಈ ಸಭೆಯಲ್ಲಿ ಮುಂಬರುವ ಶ್ರಾವಣ ಮಾಸದಲ್ಲಿ ಬರಲಿರುವ ಭಕ್ತರ ದಟ್ಟಣೆಯ ನಿರ್ವಹಣೆ ಸೇರಿದಂತೆ ಟ್ರಸ್ಟ್ನ ಆಡಳಿತಾತ್ಮಕ ವಿಷಯಗಳ ಕುರಿತು ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಸಿಇಒ ಆಯ್ಕೆಗೆ ಕಾಲಾವಕಾಶ ವಿಸ್ತರಣೆ:
ಮಂದಿರದ ಆಡಳಿತವನ್ನು ಚುರುಕುಗೊಳಿಸಲು ಸೂಕ್ತ ‘ಮುಖ್ಯ ಕಾರ್ಯನಿರ್ವಹಣಾಧಿಕಾರಿ’ (CEO) ಹುದ್ದೆಗೆ ಭಾರಿ ಸಂಖ್ಯೆಯಲ್ಲಿ ಅರ್ಜಿಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಅರ್ಹ ಅಭ್ಯರ್ಥಿಯ ಆಯ್ಕೆಗೆ ರಚಿಸಲಾಗಿರುವ ಸಮಿತಿಯು ಮತ್ತಷ್ಟು ಕಾಲಾವಕಾಶ ಕೋರಿದ್ದು, ಟ್ರಸ್ಟ್ ಇನ್ನು ಒಂದು ತಿಂಗಳ ಹೆಚ್ಚುವರಿ ಸಮಯವನ್ನು ಮಂಜೂರು ಮಾಡಿದೆ. ಸಿಇಒ ನೇಮಕಾತಿ ವಿಳಂಬವಾಗುತ್ತಿರುವ ಕಾರಣ, ತಾತ್ಕಾಲಿಕವಾಗಿ ಆಡಳಿತ ನಿರ್ವಹಣೆಗೆ ಒಬ್ಬರು ‘ಕಾರ್ಯದರ್ಶಿ’ಯನ್ನು ನೇಮಿಸಲು ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಸ್ಟೇಟ್ ಬ್ಯಾಂಕ್ ಒಪ್ಪಂದದ ಮರುಪರಿಶೀಲನೆ:
ಮಂದಿರದ ಕಾಣಿಕೆ ಎಣಿಕೆ ಪ್ರಕ್ರಿಯೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಜೊತೆಗಿನ ಒಪ್ಪಂದದ (MoU) ಅಡಿಯಲ್ಲಿ ಬ್ಯಾಂಕ್ ಕಡೆಯಿಂದ ಕೆಲವು ಲೋಪದೋಷಗಳು ಕಂಡುಬಂದಿವೆ. ಬ್ಯಾಂಕಿನ ಈ ನಿರಾಸಕ್ತಿ ಮತ್ತು ಗಂಭೀರತೆಯ ಕೊರತೆಗೆ ಟ್ರಸ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಜೊತೆಗಿನ ಸಂಬಂಧಗಳು ಮತ್ತು ಪ್ರಮಾಣಿತ ಪ್ರಕ್ರಿಯೆಗಳನ್ನು ಮರುಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಟ್ರಸ್ಟ್ನ ಹಣಕಾಸು ಸಮಿತಿಗೆ ಸೂಚಿಸಲಾಗಿದೆ.
ದಾನದ ಚಿನ್ನ, ಬೆಳ್ಳಿ ಪರಿಶುದ್ಧತೆ ತಪಾಸಣೆ:
ಭಕ್ತರು ಸಮರ್ಪಿಸುವ ಚಿನ್ನ ಮತ್ತು ಬೆಳ್ಳಿಯ ಕಾಣಿಕೆಗಳ ಪ್ರಮಾಣ ಹಾಗೂ ಪರಿಶುದ್ಧತೆಯನ್ನು ನಿರಂತರವಾಗಿ ತಪಾಸಣೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ನ (RBI) ಸಹಾಯಕ ಸಂಸ್ಥೆಯಾದ ‘ಮಿಂಟ್’ (ಟಾಕಸಾಲೆ) ವ್ಯವಸ್ಥೆ ಮಾಡಿದ್ದು, ಈ ಪ್ರಕ್ರಿಯೆಯನ್ನು ಸಭೆಯು ಶ್ಲಾಘಿಸಿದೆ. ಇನ್ನು, ಕಾಣಿಕೆ ಎಣಿಕೆ ಕೊಠಡಿ ಸೇರಿದಂತೆ ಮಂದಿರದ ಆವರಣದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ಸಂಪೂರ್ಣ ಕಣ್ಗಾವಲು ವ್ಯವಸ್ಥೆಯನ್ನು ಭದ್ರತಾ ಅಧಿಕಾರಿಗಳಿಗೆ ನೀಡಲಾಗಿದೆ.
ಸುಳ್ಳು ಆರೋಪಗಳಿಗೆ ಭಕ್ತರು ತಲೆಕೆಡಿಸಿಕೊಂಡಿಲ್ಲ:
ಇತ್ತೀಚೆಗೆ ಮಂದಿರದ ವಿರುದ್ಧ ಕೇಳಿಬಂದ ಕೆಲವು ಆಧಾರರಹಿತ ಮತ್ತು ದಾರಿ ತಪ್ಪಿಸುವ ಆರೋಪಗಳ ಹೊರತಾಗಿಯೂ, ಅಯೋಧ್ಯೆಗೆ ಬರುತ್ತಿರುವ ರಾಮಭಕ್ತರ ಸಂಖ್ಯೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ. ಕೋಟ್ಯಂತರ ಭಕ್ತರ ನಂಬಿಕೆ ಮತ್ತು ವಿಶ್ವಾಸ ಅಚಲವಾಗಿದೆ ಎಂದು ಟ್ರಸ್ಟ್ ಹೇಳಿದೆ. ಇದೇ ವೇಳೆ ಸಾರ್ವಜನಿಕರು ಮತ್ತು ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು ಅಧಿಕೃತ ‘ಪ್ರವಕ್ತ’ರನ್ನು (ಮಾಧ್ಯಮ ವಕ್ತಾರರು) ನೇಮಕ ಮಾಡಲು ಟ್ರಸ್ಟ್ ನಿರ್ಧರಿಸಿದೆ.

