Thu. Jul 23rd, 2026

ತಿರುಮಲದಲ್ಲಿ ಮೈಸೂರು ಮಹಾರಾಜರ ‘ಪಲ್ಲವೋತ್ಸವ’ ವೈಭವ: ಶತಮಾನಗಳ ಸಂಪ್ರದಾಯ ಮುಂದುವರಿಸಿದ ಸಂಸದ ಯದುವೀರ್ ಒಡೆಯರ್

Share this with Friends

ಮೈಸೂರು/ತಿರುಪತಿ: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಮೈಸೂರು ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಲಿಯುಗದ ವೈಕುಂಠ ಎಂದೇ ಪ್ರಸಿದ್ಧಿಯಾದ ಆಂಧ್ರಪ್ರದೇಶದ ತಿರುಮಲ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀನಿವಾಸ ಸ್ವಾಮಿಯ ದರ್ಶನ ಪಡೆದಿದ್ದಾರೆ.

ಮೈಸೂರು ರಾಜಮನೆತನ ಹಾಗೂ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ಸನ್ನಿಧಿಯ ನಡುವಿನ 300 ವರ್ಷಗಳಿಗೂ ಹಳೆಯದಾದ ಧಾರ್ಮಿಕ ಬಾಂಧವ್ಯವನ್ನು ನೆನಪಿಸುವ ಐತಿಹಾಸಿಕ ‘ಪಲ್ಲವೋತ್ಸವ’ದ ವಿಶೇಷ ಸಂದರ್ಭದಲ್ಲಿ ಈ ಭೇಟಿ ನಡೆದಿದೆ.

ಮೈಸೂರು ಮಹಾರಾಜರ ಜನ್ಮ ನಕ್ಷತ್ರವಾದ ‘ಉತ್ತರಾಭಾದ್ರ’ ಸ್ಮರಣಾರ್ಥವಾಗಿ ತಿರುಮಲ ತಿರುಪತಿ ದೇವಸ್ಥಾನಂ (TTD) ವತಿಯಿಂದ ಪ್ರತಿ ವರ್ಷ ಜುಲೈ 22 ರಂದು ಈ ಸಾಂಪ್ರದಾಯಿಕ ಉತ್ಸವವನ್ನು ಆಚರಿಸಲಾಗುತ್ತದೆ. ಇದರ ಅಂಗವಾಗಿ ಸಹಸ್ರದೀಪಾಲಂಕಾರ ಸೇವೆಯ ನಂತರ, ಶ್ರೀದೇವಿ ಹಾಗೂ ಭೂದೇವಿ ಸಮೇತ ಶ್ರೀ ಮಲಯಪ್ಪ ಸ್ವಾಮಿಯ ಉತ್ಸವ ಮೂರ್ತಿಗಳನ್ನು ಭವ್ಯ ಮೆರವಣಿಗೆಯ ಮೂಲಕ ತಿರುಮಲದಲ್ಲಿರುವ ಕರ್ನಾಟಕ ಛತ್ರಕ್ಕೆ (Karnataka Choultry) ಕರೆತರಲಾಗುತ್ತದೆ. ಈ ಪವಿತ್ರ ವೇದಿಕೆಯಲ್ಲಿ ಮೈಸೂರು ರಾಜಮನೆತನದ ಪ್ರತಿನಿಧಿಯಾಗಿ ಪಾಲ್ಗೊಂಡ ಯದುವೀರ್ ಒಡೆಯರ್ ಮತ್ತು ಕರ್ನಾಟಕ ಸರ್ಕಾರದ ಅಧಿಕಾರಿಗಳು ಸ್ವಾಮಿಗೆ ಸಾಂಪ್ರದಾಯಿಕ ನೈವೇದ್ಯ ಮತ್ತು ವಿಶೇಷ ಮಂಗಳಾರತಿ ಸಮರ್ಪಿಸಿ ಭಕ್ತಿಭಾವ ಮೆರೆದರು.

ಅರಸು ಮನೆತನದ ಅನನ್ಯ ಕೊಡುಗೆ

ಮೈಸೂರು ಅರಸರು ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ತಿರುಮಲ ಕ್ಷೇತ್ರದ ಪರಮ ಭಕ್ತರಾಗಿದ್ದು, ದೇವಸ್ಥಾನಕ್ಕೆ ಅಪಾರ ಚಿನ್ನಾಭರಣ ಹಾಗೂ ಕಿರೀಟಗಳನ್ನು ಕಾಣಿಕೆಯಾಗಿ ನೀಡಿದ ಇತಿಹಾಸವಿದೆ. ಶ್ರೀ ಸನ್ನಿಧಿಯ ಗರ್ಭಗುಡಿಯಲ್ಲಿ ನಿರಂತರವಾಗಿ ಉರಿಯುವ ‘ಬ್ರಹ್ಮದೀಪ’ ಮತ್ತು ‘ಮಹಾರಾಜದೀಪ’ಗಳಿಗೆ ಮೈಸೂರು ಸಂಸ್ಥಾನದ ವತಿಯಿಂದ ಇಂದಿಗೂ ನಿತ್ಯ 5 ಕೆಜಿ ತುಪ್ಪವನ್ನು ಒದಗಿಸಲಾಗುತ್ತಿದೆ. ಅಲ್ಲದೆ, ಪ್ರತಿದಿನ ಸುಪ್ರಭಾತ ಸೇವೆಯ ಮುನ್ನ ಮೈಸೂರು ರಾಜಮನೆತನದ ಹೆಸರಿನಲ್ಲಿ ‘ನವನೀತ ಆರತಿ’ (ಬೆಣ್ಣೆ ಆರತಿ) ನೆರವೇರಿಸುವ ವಿಶಿಷ್ಟ ಪದ್ಧತಿ ಇಂದಿಗೂ ಜೀವಂತವಾಗಿದೆ. ಇಂತಹ ಐತಿಹಾಸಿಕ ಧಾರ್ಮಿಕ ಸಂಪ್ರದಾಯವನ್ನು ಯಶಸ್ವಿಯಾಗಿ ಮುಂದುವರಿಸಿರುವ ಯದುವೀರ್ ಒಡೆಯರ್ ಅವರು, ಪವಿತ್ರ ಸನ್ನಿಧಿಯಲ್ಲಿ ಕರ್ನಾಟಕದ ಸಮಸ್ತ ಜನತೆಯ ಸುಖ, ಶಾಂತಿ ಹಾಗೂ ನಾಡಿನ ಸಮಗ್ರ ಒಳಿತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 

 


Share this with Friends

Related Post