ಬೆಂಗಳೂರು: ಕರ್ನಾಟಕದ ಸರ್ಕಾರಿ ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ರಾಜ್ಯದ 500 ಸರ್ಕಾರಿ ಶಾಲೆಗಳನ್ನು ಅತ್ಯಾಧುನಿಕ ‘ಕರ್ನಾಟಕ ಪಬ್ಲಿಕ್ ಶಾಲೆ’ (KPS) ಗಳಾಗಿ ಪರಿವರ್ತಿಸಲು ಬೃಹತ್ ಆರ್ಥಿಕ ನೆರವು ಘೋಷಿಸಿರುವ ʻಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB)ʼನ ಉನ್ನತ ಅಧಿಕಾರಿಗಳ ನಿಯೋಗವು ಬೆಂಗಳೂರಿನಲ್ಲಿ ಜುಲೈ 25 ರಂದು ಮಹತ್ವದ ಭೇಟಿ ನೀಡಿದೆ.
ಮಲ್ಲೇಶ್ವರಂನ 18ನೇ ಕ್ರಾಸ್‌ನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದ ವಿದೇಶಿ ನಿಯೋಗವು, ವಿದ್ಯಾರ್ಥಿಗಳ ನಿಖರ ಹಾಜರಾತಿಗಾಗಿ ಶಿಕ್ಷಣ ಇಲಾಖೆ ಜಾರಿಗೆ ತಂದಿರುವ ʻನಿರಂತರʼ (Niranthara – Facial Attendance System) ಯೋಜನೆಯ ಕಾರ್ಯವೈಖರಿಯನ್ನು ಖುದ್ದಾಗಿ ಪರಿಶೀಲಿಸಿತು.
ಎಐ ತಂತ್ರಜ್ಞಾನದ ಲೈವ್ ಡೆಮೊ
ʻನಿರಂತರʼ ಯೋಜನೆಯಡಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಮುಖ ಚಹರೆ ಗುರುತಿಸುವ (Facial Recognition) ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳ ಹಾಜರಾತಿಯನ್ನು ದಾಖಲಿಸಲಾಗುತ್ತಿದೆ. ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳ ಡಿಜಿಟಲ್ ಹಾಜರಾತಿಯನ್ನು ಪಡೆಯುವ ಮೂಲಕ ಎಡಿಬಿ ನಿಯೋಗಕ್ಕೆ ನೇರ ಪ್ರಾತ್ಯಕ್ಷಿಕೆ (Live Demo) ನೀಡಿದರು. ತಂತ್ರಜ್ಞಾನದ ನೆರವಿನಿಂದ ಸಮಯ ಉಳಿತಾಯವಾಗುವ ವಿಧಾನ, ಅನುಷ್ಠಾನ ಪ್ರಕ್ರಿಯೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳುವ ಕುರಿತು ನಿಯೋಗಕ್ಕೆ ಸಂಪೂರ್ಣ ವಿವರಣೆ ನೀಡಲಾಯಿತು.
ಭೇಟಿ ನೀಡಿದ ಹಿರಿಯ ಅಧಿಕಾರಿಗಳು:
ಶಿಕ್ಷಣ ಕ್ಷೇತ್ರದಲ್ಲಿನ ಈ ಡಿಜಿಟಲ್ ಕ್ರಾಂತಿಯನ್ನು ವೀಕ್ಷಿಸಲು ಬಂದಿದ್ದ ಈ ಉನ್ನತ ಮಟ್ಟದ ನಿಯೋಗದಲ್ಲಿ ಎಡಿಬಿ ಬ್ಯಾಂಕಿನ ಹಿರಿಯ ಪ್ರಾಜೆಕ್ಟ್ ಆಫೀಸರ್ (ಶಿಕ್ಷಣ) ಪೂನಂ ಎಸ್. ಭಾಂಬ್ರಿ, ಹಿರಿಯ ಅಧಿಕಾರಿಗಳಾದ ಖುಷ್ಬೂ ಚೌಧರಿ ಮತ್ತು ಸಂಗೀತಾ ಡೇ ಇದ್ದರು.
ರಾಜ್ಯದ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಎಡಿಬಿ ಬ್ಯಾಂಕ್ ಒದಗಿಸುತ್ತಿರುವ ಆರ್ಥಿಕ ನೆರವು ಮುಂಬರುವ ದಿನಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

