ನವದೆಹಲಿ: ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿ ವ್ಯಾಪಕ ಸುಧಾರಣೆ ತರುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ. ಇನ್ಫೋಸಿಸ್ ಸಹ-ಸ್ಥಾಪಕ ಹಾಗೂ ಆಧಾರ್ ಕಾರ್ಡ್ ಯೋಜನೆಯ ರೂವಾರಿ ನಂದನ್ ನಿಲೇಕಣಿ ಅವರ ನೇತೃತ್ವದಲ್ಲಿ ‘ಹೈ-ಪವರ್ಡ್ ಟಾಸ್ಕ್ ಫೋರ್ಸ್’ (ಉನ್ನತ ಮಟ್ಟದ ಕಾರ್ಯಪಡೆ) ಅನ್ನು ರಚಿಸಲಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಮತ್ತೊಂದು ಸೆಲ್ಫಿ ವೀಡಿಯೋವನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, ರಾಷ್ಟ್ರೀಯ ಮಟ್ಟದ ಪರೀಕ್ಷೆಗಳ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ತಂತ್ರಜ್ಞಾನ ಆಧಾರಿತ ಸುಧಾರಣೆಗೆ ಒತ್ತು
ಇತ್ತೀಚಿನ ದಿನಗಳಲ್ಲಿ ದೇಶದ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿಬಂದಿರುವ ಲೋಪದೋಷಗಳು ಹಾಗೂ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ಈ ಹೈ-ಪವರ್ ಟಾಸ್ಕ್ ಫೋರ್ಸ್ ರಚನೆ ಅತ್ಯಂತ ನಿರ್ಣಾಯಕವೆಂದು ಪರಿಗಣಿಸಲಾಗಿದೆ. ನಂದನ್ ನಿಲೇಕಣಿ ಅವರ ತಾಂತ್ರಿಕ ನೈಪುಣ್ಯತೆಯನ್ನು ಬಳಸಿಕೊಂಡು, ಪರೀಕ್ಷಾ ಪ್ರಕ್ರಿಯೆಗಳಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ, ಸುರಕ್ಷಿತ ಪ್ರಶ್ನೆಪತ್ರಿಕೆ ವಿತರಣೆ ಮತ್ತು ದೋಷಮುಕ್ತ ಮೌಲ್ಯಮಾಪನ ವ್ಯವಸ್ಥೆಯನ್ನು ರೂಪಿಸುವುದು ಈ ಕಾರ್ಯಪಡೆಯ ಮುಖ್ಯ ಉದ್ದೇಶವಾಗಿದೆ.
ಪ್ರಧಾನಿ ಮೋದಿ ಅವರು ತಮ್ಮ ವೀಡಿಯೋ ಸಂದೇಶದಲ್ಲಿ, “ವಿದ್ಯಾರ್ಥಿಗಳ ಭವಿಷ್ಯ ಮತ್ತು ಅವರ ಪರಿಶ್ರಮಕ್ಕೆ ಯಾವುದೇ ಧಕ್ಕೆಯಾಗದಂತೆ ತಡೆಯುವುದು ನಮ್ಮ ಮೊದಲ ಆದ್ಯತೆಯಾಗಿದೆ. ನಂದನ್ ನಿಲೇಕಣಿ ಅವರ ನೇತೃತ್ವದ ಈ ಸಮಿತಿಯು ಇಡೀ ವ್ಯವಸ್ಥೆಯನ್ನು ಮತ್ತಷ್ಟು ಸದೃಢ ಹಾಗೂ ಪಾರದರ್ಶಕಗೊಳಿಸಲಿದೆ” ಎಂದು ಆಶಯ ವ್ಯಕ್ತಪಡಿಸಿದ್ದಾರೆ.

