Sun. Jul 26th, 2026

ಆಗಸ್ಟ್ 1 ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ; ಐತಿಹಾಸಿಕ ‘ವಿವೇಕ ಸ್ಮಾರಕ’ ಲೋಕಾರ್ಪಣೆ

Share this with Friends

ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಸ್ಟ್ 1ರಂದು ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡಲಿದ್ದು, ಶ್ರೀ ರಾಮಕೃಷ್ಣ ಆಶ್ರಮದ ವತಿಯಿಂದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ಭವ್ಯವಾಗಿ ನಿರ್ಮಿಸಲಾಗಿರುವ ‘ವಿವೇಕ ಸ್ಮಾರಕ’ (ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ) ವನ್ನು ದೇಶಕ್ಕೆ ಲೋಕಾರ್ಪಣೆಗೊಳಿಸಲಿದ್ದಾರೆ. 1892 ರಲ್ಲಿ ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ್ದಾಗ ತಂಗಿದ್ದ ಐತಿಹಾಸಿಕ ನಿರಂಜನ ಮಠದ ಜಾಗದಲ್ಲೇ ಸುಮಾರು ₹35 ಕೋಟಿ ವೆಚ್ಚದಲ್ಲಿ ಈ ಭವ್ಯ ಸ್ಮಾರಕವನ್ನು ಮರುನಿರ್ಮಾಣ ಮಾಡಲಾಗಿದೆ.

ಪ್ರಧಾನಿ ಮೋದಿ ಅವರ ಮೈಸೂರು ಪ್ರವಾಸದ ಪ್ರಮುಖ ಕಾರ್ಯಕ್ರಮಗಳು ಮತ್ತು ನಿಮಿಷ-ನಿಮಿಷದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ:

ಪ್ರಧಾನಿಯವರ ಪ್ರಮುಖ ಕಾರ್ಯಕ್ರಮಗಳು:

ವಿವೇಕ ಸ್ಮಾರಕ ಉದ್ಘಾಟನೆ: ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ನೂತನ ಯುವ ಕೌಶಲಾಭಿವೃದ್ಧಿ, ಯೋಗಧ್ಯಾನ, ವಸ್ತುಸಂಗ್ರಹಾಲಯ ಹಾಗೂ ಗ್ರಂಥಾಲಯ ಒಳಗೊಂಡ ಕೇಂದ್ರದ ಲೋಕಾರ್ಪಣೆ.

ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣ: ರಾಮಕೃಷ್ಣ ಆಶ್ರಮದ ಆವರಣದಲ್ಲಿ ಸ್ವಾಮಿ ವಿವೇಕಾನಂದರ ಭವ್ಯ ಪ್ರತಿಮೆಯನ್ನು ಪ್ರಧಾನಿ ಅನಾವರಣಗೊಳಿಸಲಿದ್ದಾರೆ.

ಬೃಹತ್ ಸಾರ್ವಜನಿಕ ಸಭೆ: ಉದ್ಘಾಟನಾ ನೆರವೇರಿದ ಬಳಿಕ ಆಶ್ರಮದ ಮುಕ್ತ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ.

ಪ್ರಧಾನಿ ಮೋದಿ ಪ್ರವಾಸದ ಸಂಪೂರ್ಣ ವೇಳಾಪಟ್ಟಿ:

ಮಧ್ಯಾಹ್ನ 2.55: ನವದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಆಗಮನ.

ಮಧ್ಯಾಹ್ನ 3.15: ವಿಮಾನ ನಿಲ್ದಾಣದಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ನಗರದ ಓವಲ್ ಮೈದಾನಕ್ಕೆ ತಲುಪಲಿರುವ ಮೋದಿ.

ಮಧ್ಯಾಹ್ನ 3.25: ಓವಲ್ ಮೈದಾನದಿಂದ ಬಿಗಿ ಪೊಲೀಸ್ ಭದ್ರತೆಯ ರಸ್ತೆ ಮಾರ್ಗದ (ಕಾನ್ವಾಯ್) ಮೂಲಕ ವಿವೇಕ ಸ್ಮಾರಕಕ್ಕೆ ಪ್ರಯಾಣ.

ಮಧ್ಯಾಹ್ನ 3.30 ರಿಂದ ಸಂಜೆ 5.15: ರಾಮಕೃಷ್ಣ ಆಶ್ರಮದಲ್ಲಿ ಆಯೋಜಿಸಿರುವ ವೇದಿಕೆ ಕಾರ್ಯಕ್ರಮ ಹಾಗೂ ‘ವಿವೇಕ ಸ್ಮಾರಕ’ ಉದ್ಘಾಟನಾ ಸಮಾರಂಭದಲ್ಲಿ ಭಾಗಿ.

ಸಂಜೆ 5.20: ರಾಮಕೃಷ್ಣ ಆಶ್ರಮದ ಶಾಲೆಗೆ ಪ್ರಧಾನಿ ಮೋದಿ ಭೇಟಿ.

ಸಂಜೆ 5.30: ಓವಲ್ ಮೈದಾನಕ್ಕೆ ವಾಪಸ್ ಆಗಿ, ಅಲ್ಲಿಂದ ಮೈಸೂರು ವಿಮಾನ ನಿಲ್ದಾಣದತ್ತ ಪ್ರಯಾಣ.

ಸಂಜೆ 5.55: ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಮರಳಿ ದೆಹಲಿಗೆ ಪ್ರಯಾಣ.

ಪ್ರಧಾನಿಯವರ ಭೇಟಿಯ ಹಿನ್ನೆಲೆಯಲ್ಲಿ ವಿಶೇಷ ಭದ್ರತಾ ಪಡೆ (SPG), ಮೈಸೂರು ಜಿಲ್ಲಾಡಳಿತ ಹಾಗೂ ನಗರ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಓವಲ್ ಮೈದಾನ ಮತ್ತು ಸಂಚಾರ ಮಾರ್ಗಗಳಲ್ಲಿ ಈಗಾಗಲೇ ಕಟ್ಟುನಿಟ್ಟಿನ ಪರಿಶೀಲನೆ ಹಾಗೂ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

 


Share this with Friends

Related Post