Mon. Jul 27th, 2026

ಮೇಕೆದಾಟು ಯೋಜನೆಗೆ ಬಿಗ್ ರಿಲೀಫ್: ನೆರೆ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ

Share this with Friends

ನವದೆಹಲಿ: ಕರ್ನಾಟಕದ ಮಹತ್ವಾಕಾಂಕ್ಷಿ ಮೇಕೆದಾಟು ಕುಡಿಯುವ ನೀರು ಮತ್ತು ಜಲಾಶಯ ಯೋಜನೆಗೆ ಕೇಂದ್ರ ಸರ್ಕಾರದಿಂದ ಅತ್ಯಂತ ಪ್ರಮುಖ ಹಾಗೂ ಸಕಾರಾತ್ಮಕ ಬೆಂಬಲ ಸಿಕ್ಕಿದೆ. ಮೇಕೆದಾಟು ಆಣೆಕಟ್ಟು ನಿರ್ಮಾಣ ಮಾಡಲು ಕರ್ನಾಟಕ ಸರ್ಕಾರವು ತಮಿಳುನಾಡು, ಕೇರಳ ಅಥವಾ ಪುದುಚೆರಿಯಂತಹ ಯಾವುದೇ ನೆರೆ ರಾಜ್ಯಗಳಿಂದ ಸಮ್ಮತಿ ಅಥವಾ ಒಪ್ಪಿಗೆ ಪತ್ರ ಪಡೆಯುವ ಅಗತ್ಯವಿಲ್ಲ ಎಂದು ಕೇಂದ್ರ ಜಲಶಕ್ತಿ ಸಚಿವಾಲಯವು ಸಂಸತ್ತಿನಲ್ಲಿ ಮಹತ್ವದ ಘೋಷಣೆ ಮಾಡಿದೆ.

ರಾಜ್ಯಸಭೆಯಲ್ಲಿ ತಮಿಳುನಾಡು ಸಂಸದ ಡಾ. ಅನ್ಬುಮಣಿ ರಾಮದಾಸ್ ಅವರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಜಲಶಕ್ತಿ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ ಅವರು ಈ ಲಿಖಿತ ಉತ್ತರ ನೀಡಿದ್ದಾರೆ. ಕಾವೇರಿ ನದಿ ನೀರು ಹಂಚಿಕೆ ವಿವಾದದ ನಡುವೆಯೂ ಕರ್ನಾಟಕಕ್ಕೆ ತನ್ನ ವ್ಯಾಪ್ತಿಯಲ್ಲಿ ಯೋಜನೆ ಜಾರಿಗೊಳಿಸಲು ಈ ಸ್ಪಷ್ಟನೆಯು ದೊಡ್ಡ ಆನೆಬಲ ತಂದಂತಾಗಿದೆ.

ಕೇಂದ್ರ ಸರ್ಕಾರದ ಈ ಅಧಿಕೃತ ನಿಲುವಿನಿಂದಾಗಿ ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಸೃಷ್ಟಿಸುತ್ತಿದ್ದ ರಾಜಕೀಯ ಮತ್ತು ಕಾನೂನು ಅಡೆತಡೆಗಳಿಗೆ ಭಾರಿ ಹಿನ್ನಡೆಯಾದಂತಾಗಿದ್ದು, ಕಾವೇರಿ ಕೊಳ್ಳದ ಜನರಿಗೆ ಸಿಹಿ ಸುದ್ದಿ ಸಿಕ್ಕಿದೆ.

ಕೇಂದ್ರದ ಉತ್ತರದ ಪ್ರಮುಖ ಮುಖ್ಯಾಂಶಗಳು:

ನ್ಯಾಯಾಲಯದ ತೀರ್ಪಿನಲ್ಲಿ ಒಪ್ಪಿಗೆಯ ಉಲ್ಲೇಖವಿಲ್ಲ: 2018ರ ಫೆಬ್ರವರಿ 16 ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ, ಕರ್ನಾಟಕವು ಕಾವೇರಿ ನದಿಗೆ ಅಡ್ಡಲಾಗಿ ಯಾವುದೇ ರಚನೆಯನ್ನು ನಿರ್ಮಿಸಲು ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳ ಒಪ್ಪಿಗೆಯನ್ನು ಪಡೆಯಬೇಕು ಎಂದು ಎಲ್ಲೂ ಹೇಳಲಾಗಿಲ್ಲ.

ರಾಜ್ಯಗಳ ಹಕ್ಕು ಮುಕ್ತ: ಕಾವೇರಿ ನೀರು ವಿವಾದ ನ್ಯಾಯಾಧೀಕರಣದ (CWDT) 2007 ರ ಆದೇಶದ ನಿಯಮಗಳನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್, ನ್ಯಾಯಾಧೀಕರಣದ ಆದೇಶಕ್ಕೆ ಧಕ್ಕೆಯಾಗದಂತೆ ಯಾವುದೇ ರಾಜ್ಯವು ತನ್ನ ಗಡಿಯೊಳಗೆ ನೀರಿನ ಬಳಕೆಯನ್ನು ನಿಯಂತ್ರಿಸುವ ಅಥವಾ ಅದರ ಪ್ರಯೋಜನವನ್ನು ಪಡೆಯುವ ಹಕ್ಕನ್ನು ಹೊಂದಿದೆ ಎಂದು ಪುನರುಚ್ಚರಿಸಿದೆ.

ಮೇಕೆದಾಟು ಡಿಪಿಆರ್ ವಾಪಸ್: ಕರ್ನಾಟಕ ಸರ್ಕಾರವು 2019 ರಲ್ಲಿ ಸಲ್ಲಿಸಿದ್ದ ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರು ಯೋಜನೆಯ ವಿವರವಾದ ಯೋಜನಾ ವರದಿಯನ್ನು (DPR) ಕೇಂದ್ರ ಸರ್ಕಾರವು ವಾಪಸ್ ಕಳುಹಿಸಿದೆ. ಕಾವೇರಿ ನ್ಯಾಯಾಧೀಕರಣದ ತೀರ್ಪು ಮತ್ತು ಜಲ ಆಯೋಗದ (CWC) ಪ್ರಸ್ತುತ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪರಿಷ್ಕೃತ ವರದಿಯನ್ನು ಸಲ್ಲಿಸುವಂತೆ ಕರ್ನಾಟಕಕ್ಕೆ ಸೂಚಿಸಲಾಗಿದೆ.

ಕೇಂದ್ರ ಸರ್ಕಾರದ ಈ ಸ್ಪಷ್ಟನೆಯು ಮೇಕೆದಾಟು ಯೋಜನೆಗೆ ಕಾನೂನಾತ್ಮಕವಾಗಿ ಕರ್ನಾಟಕಕ್ಕೆ ದೊಡ್ಡ ಬಲ ತಂದಂತಾಗಿದ್ದರೂ, ತಾಂತ್ರಿಕ ಅನುಮತಿಗಾಗಿ ಪರಿಷ್ಕೃತ ವರದಿಯನ್ನು ಸಲ್ಲಿಸುವುದು ಈಗ ರಾಜ್ಯ ಸರ್ಕಾರದ ಮುಂದಿರುವ ಮುಖ್ಯ ಕೆಲಸವಾಗಿದೆ

 

 


Share this with Friends

Related Post