Wed. Jul 29th, 2026

ಕಾವೇರಿ ಹಂಚಿಕೆ ಆದೇಶಕ್ಕೆ ಡಿಸಿಎಂ ಆಕ್ಷೇಪ: “ಕುಡಿಯಲು ನೀರಿಲ್ಲದಾಗ ತಮಿಳುನಾಡಿಗೆ ಹರಿಸುವುದು ಹೇಗೆ?”

Share this with Friends

ಬೆಂಗಳೂರು:ರಾಜ್ಯದಲ್ಲಿ ಮುಂಗಾರು ಕೈಕೊಟ್ಟು ಬರದ ಆತಂಕ ಸೃಷ್ಟಿಯಾಗಿರುವ ಬೆನ್ನಲ್ಲೇ, ಕಾವೇರಿ ನದಿ ನೀರು ಹಂಚಿಕೆ ವಿವಾದ ಮತ್ತೆ ಮುಂಚೂಣಿಗೆ ಬಂದಿದೆ. ತಮಿಳುನಾಡಿಗೆ ಪ್ರತಿದಿನ 3,500 ಕ್ಯುಸೆಕ್ ನೀರು ಬಿಡುಗಡೆ ಮಾಡಬೇಕು ಎಂಬ ಆದೇಶಕ್ಕೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ರಾಜ್ಯದ ಜನರಿಗೆ ಕುಡಿಯುವ ನೀರಿಗೇ ತತ್ವಾರ ಇರುವಾಗ ನೆರೆ ರಾಜ್ಯಕ್ಕೆ ನೀರು ಹರಿಸುವಂತೆ ಒತ್ತಾಯಿಸುವುದು ಎಷ್ಟು ಸರಿ?” ಎಂದು ಪ್ರಶ್ನಿಸಿದ್ದಾರೆ. ಕರ್ನಾಟಕದಲ್ಲಿ ಸದ್ಯ ಕಠಿಣ ಪರಿಸ್ಥಿತಿ ಇದ್ದು, ಕುಡಿಯುವ ನೀರನ್ನು ಉಳಿಸಿಕೊಳ್ಳುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ. ಈ ಹಿಂದೆ ಜಲಾಶಯಗಳಲ್ಲಿ ಹೆಚ್ಚುವರಿ ನೀರಿದ್ದಾಗ, ತಮಿಳುನಾಡು ಕೇಳದಿದ್ದರೂ ನಿಗದಿಗಿಂತ ಹೆಚ್ಚಿನ ನೀರನ್ನು ಸೌಜನ್ಯದಿಂದ ಹರಿಸಲಾಗಿತ್ತು. ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಆಗಸ್ಟ್ 3ರಂದು ತಮಿಳುನಾಡು ಮುಖ್ಯಮಂತ್ರಿಗಳು ಬೆಂಗಳೂರಿಗೆ ಆಗಮಿಸುವ ಸಾಧ್ಯತೆಯಿದ್ದು, ಭೇಟಿ ಖಚಿತವಾದರೆ ಕಾವೇರಿ ಬಿಕ್ಕಟ್ಟಿನ ಕುರಿತು ನೇರ ಮಾತುಕತೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದರು.

ದೆಹಲಿಯಲ್ಲಿ ಸಿಎಂ ಕಾನೂನು ತಾಲೀಮು

ಕಾವೇರಿ ಬಿಕ್ಕಟ್ಟಿಗೆ ತಕ್ಷಣದ ಕಾನೂನು ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿಗಳು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರು ಹಾಗೂ ಕಾನೂನು ತಜ್ಞರೊಂದಿಗೆ ಸಿಎಂ ಸಭೆ ನಡೆಸುತ್ತಿದ್ದು, ರಾಜ್ಯದ ಪರವಾಗಿ ಬಲವಾದ ವಾದ ಮಂಡಿಸಲು ತಂತ್ರ ರೂಪಿಸುತ್ತಿದ್ದಾರೆ. ಇದರೊಂದಿಗೆ, ರಾಜ್ಯದ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಶೀಘ್ರದಲ್ಲೇ ಸರ್ವಪಕ್ಷ ಸಭೆಯನ್ನು ಕರೆಯಲಾಗುವುದು ಎಂದು ಪರಮೇಶ್ವರ್ ತಿಳಿಸಿದ್ದಾರೆ.

ರೈತರ ಹೋರಾಟಕ್ಕೆ ಡಿಸಿಎಂ ಬೆಂಬಲ

ಮಂಡ್ಯ ಮತ್ತು ಕಾವೇರಿ ಜಲಾನಯನ ಪ್ರದೇಶಗಳಲ್ಲಿ ರೈತರು ಹಾಗೂ ಕನ್ನಡಪರ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಡಿಸಿಎಂ ಸಮರ್ಥಿಸಿಕೊಂಡಿದ್ದಾರೆ. “ನಮ್ಮಲ್ಲಿ ನೀರಿಲ್ಲ ಎಂಬ ಸತ್ಯ ಜನರಿಗೂ ಗೊತ್ತು. ಆದರೆ ಸರ್ಕಾರ ಎಲ್ಲಾದರೂ ನೀರನ್ನು ತಮಿಳುನಾಡಿಗೆ ಬಿಟ್ಟುಬಿಡುತ್ತದೆಯೋ ಎಂಬ ಆತಂಕ ಮತ್ತು ಮುನ್ನೆಚ್ಚರಿಕೆಯಿಂದ ರೈತರು ಬೀದಿಗಿಳಿದು ಹೋರಾಡುತ್ತಿದ್ದಾರೆ, ಇದು ಸಹಜ” ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ

“ಮೇಕೆದಾಟು ಯೋಜನೆಗೆ ತಮಿಳುನಾಡಿನ ಒಪ್ಪಿಗೆ ಬೇಕಿಲ್ಲ, ಕೋರ್ಟ್ ತೀರ್ಪೇ ಅಂತಿಮ”:

ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿ ಕೇಂದ್ರಕ್ಕೆ ಪತ್ರ ಬರೆದಿರುವ ನಡೆಗೆ ಕರ್ನಾಟಕ ಸರ್ಕಾರ ತೀವ್ರ ಪ್ರತ್ಯುತ್ತರ ನೀಡಿದೆ. ಮೇಕೆದಾಟು ವಿಚಾರದಲ್ಲಿ ಕರ್ನಾಟಕಕ್ಕೆ ಸಂಪೂರ್ಣ ಕಾನೂನುಬದ್ಧ ಹಕ್ಕಿದೆ ಎಂದು ನ್ಯಾಯಾಲಯವೇ ಹೇಳಿರುವುದರಿಂದ, ಈ ಯೋಜನೆಗೆ ನೆರೆ ರಾಜ್ಯದ ಸಮ್ಮತಿಯ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.”ತಮಿಳುನಾಡು ಸರ್ಕಾರ ಕೇಂದ್ರಕ್ಕೆ ಪತ್ರ ಬರೆಯಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ದೇಶದ ಪ್ರಧಾನ ಮಂತ್ರಿಗಳು ಕೂಡ ನ್ಯಾಯಾಲಯಕ್ಕಿಂತ ಮಿಗಿಲಲ್ಲ. ಕೋರ್ಟ್ ನೀಡುವ ತೀರ್ಪೇ ಈ ವಿಷಯದಲ್ಲಿ ಅಂತಿಮ” ಎಂದು ಪ್ರತಿಪಾದಿಸಿದರು.

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕರ್ನಾಟಕಕ್ಕೆ ಕಾನೂನಾತ್ಮಕ ಹಕ್ಕುಗಳಿದ್ದು, ತಮಿಳುನಾಡಿನ ಅನುಮತಿ ಕಡ್ಡಾಯವಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಅಕ್ಕಪಕ್ಕದ ರಾಜ್ಯಗಳ ನಡುವೆ ನೀರಿನ ಸಮಸ್ಯೆಗಳು ಇರುವುದು ಸಹಜ. ಆದರೆ ಒಕ್ಕೂಟ ವ್ಯವಸ್ಥೆಯಲ್ಲಿ ಇವುಗಳನ್ನು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವಿದೆ ಎಂದರು.

ಬಿಜೆಪಿ ನೀತಿಗೆ ಆಕ್ಷೇಪ: ನೆರೆ ರಾಜ್ಯಗಳೊಂದಿಗೆ ಸೌಹಾರ್ದತೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳುವುದನ್ನು ವಿರೋಧಿಸುತ್ತಿರುವ ಬಿಜೆಪಿಯ ನಿಲುವನ್ನು ಡಿಸಿಎಂ ಪ್ರಶ್ನಿಸಿದ್ದಾರೆ.

ತುಂಗಭದ್ರಾ ಸಭೆಯ ಉದಾಹರಣೆ ನೀಡಿದ ಡಿಸಿಎಂ

ಇತ್ತೀಚೆಗೆ ತುಂಗಭದ್ರಾ ಜಲಾಶಯದ ನೂತನ ಗೇಟ್‌ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ದು, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳು ಭಾಗವಹಿಸಿದ್ದನ್ನು ಡಿಸಿಎಂ ನೆನಪಿಸಿದರು. ಆ ಸಭೆಯಲ್ಲಿ ನದಿ ಜೋಡಣೆ ಮತ್ತು ನೀರಿನ ಹಂಚಿಕೆಯಂತಹ ಸೂಕ್ಷ್ಮ ವಿಷಯಗಳನ್ನು ರಾಜ್ಯಗಳೇ ಒಟ್ಟಾಗಿ ಬಗೆಹರಿಸಿಕೊಳ್ಳುವ ಕುರಿತು ಸಕಾರಾತ್ಮಕ ಚರ್ಚೆ ನಡೆದಿತ್ತು. ಅಷ್ಟೇ ಅಲ್ಲದೆ, ಮತ್ತೊಂದು ಜಲಾಶಯ ನಿರ್ಮಾಣದ ಪ್ರಸ್ತಾಪಕ್ಕೆ ಕೇಂದ್ರ ನೀರಾವರಿ ಸಚಿವರು ಶೇ. 90 ರಷ್ಟು ಧನಸಹಾಯ ನೀಡುವ ಭರವಸೆಯನ್ನೂ ಕೊಟ್ಟಿದ್ದರು ಎಂದು ಅವರು ವಿವರಿಸಿದರು.

 “ರಾಜ್ಯಗಳು ಸದಾ ಜಗಳ ಆಡುತ್ತಲೇ ಇರಬೇಕಾ?”

ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ತಮಿಳುನಾಡಿನ ನಟ, ರಾಜಕಾರಣಿ ವಿಜಯ್ ಅವರ ಕರ್ನಾಟಕ ಭೇಟಿಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸುತ್ತಿರುವುದನ್ನು ಉಪಮುಖ್ಯಮಂತ್ರಿಗಳು ಖಂಡಿಸಿದರು. “ರಾಜ್ಯಗಳು ಸದಾ ಜಗಳ ಆಡುತ್ತಲೇ ಇರಬೇಕು, ಹೊಂದಾಣಿಕೆಯಿಂದ ಇರಬಾರದು ಎನ್ನುವುದು ಬಿಜೆಪಿಯ ನೀತಿಯಂತಿದೆ. ಅಕ್ಕಪಕ್ಕದ ರಾಜ್ಯಗಳು ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳುವುದರಲ್ಲಿ ತಪ್ಪೇನಿದೆ?” ಎಂದು ಅವರು ಪ್ರಶ್ನಿಸಿದ್ದಾರೆ.

“ಕೇಂದ್ರದ ಬರ ಮಾನದಂಡ ಸಡಿಲಿಕೆಗೆ ಆಗ್ರಹ: ಆಗಸ್ಟ್ ಅಂತ್ಯಕ್ಕೆ ರಾಜ್ಯದಿಂದ ಮತ್ತೊಂದು ಸಮಗ್ರ ವರದಿ”

ಕರ್ನಾಟಕದಲ್ಲಿ ತಲೆದೋರಿರುವ ತೀವ್ರ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ. ಇದರ ಬೆನ್ನಲ್ಲೇ, ಆಗಸ್ಟ್ ತಿಂಗಳ ಅಂತ್ಯದವರೆಗಿನ ಮಳೆ ಮತ್ತು ಬೆಳೆ ಪರಿಸ್ಥಿತಿಯನ್ನು ಅವಲೋಕಿಸಿ ಕೇಂದ್ರಕ್ಕೆ ಮತ್ತೊಂದು ಪೂರಕ ವರದಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಡಿಸಿಎಂ ತಿಳಿಸಿದರು.

ಆಗಸ್ಟ್ ಅಂತ್ಯಕ್ಕೆ ಮರುಪರಿಶೀಲನೆ: ಆಗಸ್ಟ್ ತಿಂಗಳ ಕೊನೆಯವರೆಗಿನ ಮಳೆ ಕೊರತೆಯ ಸಂಪೂರ್ಣ ಚಿತ್ರಣವನ್ನು ಆಧರಿಸಿ ಕೇಂದ್ರ ಸರ್ಕಾರಕ್ಕೆ ದ್ವಿತೀಯ ವರದಿ ಸಲ್ಲಿಕೆಯಾಗಲಿದೆ.

ಕೇಂದ್ರ ತಂಡದ ಭೇಟಿ: ರಾಜ್ಯದ ವರದಿ ಸಲ್ಲಿಕೆಯಾದ ನಂತರ, ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಕೇಂದ್ರದ ಉನ್ನತ ಮಟ್ಟದ ಅಧ್ಯಯನ ತಂಡವು ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜಂಟಿ ಪರಿಶೀಲನೆ ನಡೆಸಲಿದೆ.

ಅನುದಾನದ ಹಂಚಿಕೆ: ಕೇಂದ್ರ ತಂಡವು ಸ್ಥಳೀಯ ಪರಿಸ್ಥಿತಿಯನ್ನು ಅವಲೋಕಿಸಿ ನೀಡುವ ವರದಿಯ ಆಧಾರದ ಮೇಲೆಯೇ ರಾಜ್ಯಕ್ಕೆ ಎಷ್ಟು ಬರ ಪರಿಹಾರದ ಧನಸಹಾಯ ಸಿಗಲಿದೆ ಎಂಬುದು ನಿರ್ಧಾರವಾಗುತ್ತದೆ.

“ಶೇ. 80 ರಷ್ಟು ಮಳೆ ಕೊರತೆಯಿದ್ದರೂ ಬರ ಘೋಷಣೆ ಸಾಧ್ಯವಾಗುತ್ತಿಲ್ಲ!”

ಪ್ರಸ್ತುತ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಬರ ಘೋಷಣೆಯ ಕಠಿಣ ನಿಯಮಾವಳಿಗಳ ಬಗ್ಗೆ ಡಿಸಿಎಂ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. “ಕೇಂದ್ರದ ಈಗಿನ ಮಾನದಂಡಗಳ ಕಾರಣದಿಂದಾಗಿ ಶೇ. 80 ರಷ್ಟು ಮಳೆ ಕೊರತೆಯನ್ನು ಎದುರಿಸುತ್ತಿರುವ ದೇಶದ ಕೆಲವು ಪ್ರಮುಖ ತಾಲೂಕುಗಳನ್ನು ಅಧಿಕೃತವಾಗಿ ‘ಬರಪೀಡಿತ’ ಎಂದು ಘೋಷಿಸಲು ತಾಂತ್ರಿಕ ತೊಂದರೆ ಎದುರಾಗುತ್ತಿದೆ” ಎಂದು ಅವರು ಪರಿಸ್ಥಿತಿಯನ್ನು ವಿವರಿಸಿದರು.

ನಿಯಮ ಸಡಿಲಿಕೆಗೆ ಜಿ. ಪರಮೇಶ್ವರ್ ಮನವಿ

ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಸಲ್ಲಿಸಿರುವ ಸಮಗ್ರ ಮನವಿಯಲ್ಲಿ, ಕರ್ನಾಟಕದ ಬಾಧಿತ ಪ್ರದೇಶಗಳನ್ನು ತಕ್ಷಣವೇ ಪ್ರಕೃತಿ ವಿಕೋಪ ಪೀಡಿತ ವಲಯ ಎಂದು ಘೋಷಿಸುವಂತೆ ಕೋರಲಾಗಿದೆ. ಇದರೊಂದಿಗೆ, ವಾಸ್ತವ ಪರಿಸ್ಥಿತಿಗೆ ತಕ್ಕಂತೆ ಬರ ಘೋಷಣೆಯ ಮಾನದಂಡಗಳನ್ನು ಸಡಿಲಗೊಳಿಸಬೇಕು ಎಂದು ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಿದೆ ಎಂದರು.


Share this with Friends

Related Post