Wed. Jul 29th, 2026

ಕಾವೇರಿ ನೀರು ಬಿಡುಗಡೆ ಆದೇಶದ ವಿರುದ್ಧ ಪ್ರಾಧಿಕಾರಕ್ಕೆ ಇಂದೇ ಕರ್ನಾಟಕದಿಂದ ಅಧಿಕೃತ ಮೇಲ್ಮನವಿ: ರಾಮಲಿಂಗಾರೆಡ್ಡಿ

Ramalinga Reddy
Share this with Friends

ಬೆಂಗಳೂರು: ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯುಸೆಕ್ ಕಾವೇರಿ ನೀರನ್ನು ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿರುವ ಆದೇಶದ ವಿರುದ್ಧ ಕರ್ನಾಟಕ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (CWMA) ಇಂದೇ ಅಧಿಕೃತವಾಗಿ ಮೇಲ್ಮನವಿ ಸಲ್ಲಿಸಲಿದೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಜಲಾಶಯಗಳಲ್ಲಿ ಮಳೆಯಿಲ್ಲದೆ ನೀರಿನ ಸಂಗ್ರಹ ಸಂಪೂರ್ಣ ಕುಸಿದಿರುವುದರಿಂದ ಯಾವುದೇ ಕಾರಣಕ್ಕೂ ನೆರೆ ರಾಜ್ಯಕ್ಕೆ ನೀರು ಬಿಡಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ರಾಜ್ಯದಲ್ಲಿನ ಮಳೆ ಕೊರತೆಯ ಆತಂಕಕಾರಿ ಅಂಕಿಅಂಶಗಳನ್ನು ಬಿಚ್ಚಿಟ್ಟ ಸಚಿವರು, ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ 30 ವರ್ಷಗಳ ಸರಾಸರಿಗೆ ಹೋಲಿಸಿದರೆ ಈ ಬಾರಿ ಕೇವಲ ಮೂರರಷ್ಟು ಮಾತ್ರ ಮಳೆಯಾಗಿದೆ. ಕಾವೇರಿ ವ್ಯಾಪ್ತಿಯ ಒಟ್ಟು ನಾಲ್ಕು ಜಲಾಶಯಗಳಲ್ಲಿ ಸದ್ಯ ಡೆಡ್ ಸ್ಟೋರೇಜ್ (ಬಳಕೆಗೆ ಬಾರದ ಸಂಗ್ರಹ) ಸೇರಿ ಕೇವಲ 46 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಕೊಡಗಿನಿಂದ ಹಿಡಿದು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 10 ರಿಂದ 12 ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಒದಗಿಸಲು ಹಾಗೂ ನದಿ ಪಾತ್ರದ ಅಗತ್ಯಗಳಿಗಾಗಿ ಪ್ರತಿ ತಿಂಗಳು ಕನಿಷ್ಠ ಮೂರೂವರೆ ಟಿಎಂಸಿ ನೀರು ಬೇಕಾಗುತ್ತದೆ. ನಮ್ಮ ಜನರಿಗೇ ಕುಡಿಯಲು ನೀರಿಲ್ಲದ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸಮಿತಿಯ ಆದೇಶವನ್ನು ಯಥಾವತ್ತಾಗಿ ಪಾಲಿಸುವುದು ಕಷ್ಟಸಾಧ್ಯ ಎಂದು ಅವರು ವಿವರಿಸಿದ್ದಾರೆ.

ಇದೇ ವೇಳೆ, ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಸರಿಯಾಗಿ ವಾದ ಮಂಡಿಸಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾಡಿರುವ ಆರೋಪಕ್ಕೆ ಸಚಿವರು ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಕಾವೇರಿ ವಿವಾದದ ಕಾನೂನು ಹೋರಾಟದಲ್ಲಿ ಕಳೆದ 25-30 ವರ್ಷಗಳಿಂದಲೂ ಶ್ರೀರಾಮಯ್ಯ ಅವರೇ ನಮ್ಮ ಇಲಾಖೆಗೆ ಮುಖ್ಯ ಕಾನೂನು ಸಲಹೆಗಾರರಾಗಿದ್ದಾರೆ. ಹಿಂದೆ ಬಿಜೆಪಿ ಸರ್ಕಾರವಿದ್ದಾಗಲೂ ಅವರೇ ಅಡ್ವೈಸರ್ ಆಗಿದ್ದರು, ಈಗ ನಮ್ಮ ಸರ್ಕಾರದಲ್ಲೂ ಅವರೇ ಮುಂದುವರಿದಿದ್ದಾರೆ. ಅದರಂತೆ ಹಿರಿಯ ವಕೀಲ ಮೋಹನ್ ಕಾತರಕಿ ಕೂಡ ಹಲವು ದಶಕಗಳಿಂದ ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕದ ಪರವಾಗಿ ಸಮರ್ಥವಾಗಿ ವಾದ ಮಂಡಿಸುತ್ತ ಬಂದಿದ್ದಾರೆ. ಹೀಗಾಗಿ ಸರ್ಕಾರದ ವಾದ ಮಂಡನೆಯಲ್ಲಿ ಯಾವುದೇ ಲೋಪವಾಗಿಲ್ಲ ಎಂದು ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

 

 


Share this with Friends

Related Post