Wed. Jul 29th, 2026

ಕಾವೇರಿ ವಾಸ್ತವ ಸ್ಥಿತಿ ನೋಡಲು ತಮಿಳುನಾಡು ಸಿಎಂ ವಿಜಯ್‌ ಒಪ್ಪಿದರೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡುತ್ತೇವೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

Share this with Friends

ನವದೆಹಲಿ: ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದಲ್ಲಿ ತಲೆದೋರಿರುವ ತೀವ್ರ ಜಲಕ್ಷಾಮ ಮತ್ತು ವಾಸ್ತವ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸುವಂತೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರಿಗೆ ಆಹ್ವಾನ ನೀಡಲಾಗಿದ್ದು, ಪರಿಸ್ಥಿತಿ ವೀಕ್ಷಣೆಗೆ ಅಗತ್ಯವಿದ್ದರೆ ಹೆಲಿಕಾಪ್ಟರ್ ವ್ಯವಸ್ಥೆಯನ್ನು ಮಾಡಿಕೊಡಲು ನಮ್ಮ ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ದೆಹಲಿಯ ಕರ್ನಾಟಕ ಭವನದ ಬಳಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೆರೆ ರಾಜ್ಯದ ಸಿಎಂ ಅವರಿಗೂ ನಮ್ಮಲ್ಲಿನ ವಾಸ್ತವ ಸ್ಥಿತಿಯ ಅನುಭವ ಆಗಬೇಕಿದೆ. ಚರ್ಚೆ ನಡೆಸಲು ಇಂಗಿತ ವ್ಯಕ್ತಪಡಿಸಿ ಅವರು ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ದೂರವಾಣಿ ಮೂಲಕವೂ ಮಾತನಾಡಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ರಾಜ್ಯಕ್ಕೆ ಬರುವ ಅತಿಥಿಗಳನ್ನು ಗೌರವದಿಂದ ಸ್ವೀಕರಿಸುವುದು ನಮ್ಮ ಕರ್ತವ್ಯವಾಗಿದ್ದು, ಸಭೆಗೆ ಬರುವಂತೆ ಅವರಿಗೆ ತಿಳಿಸಲಾಗಿದೆ ಮತ್ತು ಅದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.

ಇದೇ ವೇಳೆ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿರುವ ಆದೇಶದ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (CWMA) ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ಸ್ಪಷ್ಟಪಡಿಸಿದರು. ಈ ನಿಟ್ಟಿನಲ್ಲಿ ನವದೆಹಲಿಯಲ್ಲಿ ಅಡ್ವೊಕೇಟ್ ಜನರಲ್, ಕಾನೂನು ತಜ್ಞರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಾಗಿದ್ದು, ಮೇಲ್ಮನವಿ ಸಲ್ಲಿಸಲು ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಈ ಬಾರಿ ರಾಜ್ಯದಲ್ಲಿ ವರುಣನ ಕೃಪೆ ಇಲ್ಲದೆ ಬರ ಪರಿಸ್ಥಿತಿ ಎದುರಾಗಿದೆ. ತಮಿಳುನಾಡಿನ ನೀರು ಬಿಡುಗಡೆ ಮನವಿಯನ್ನು ಈ ಹಿಂದೆ ಎರಡು ಬಾರಿ ತಿರಸ್ಕರಿಸಿದ್ದ ಸಮಿತಿಯು, ಈ ಬಾರಿ ನೀರು ಹರಿಸಲು ಸೂಚನೆ ನೀಡಿದೆ. ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಕುರಿತು ಸಚಿವ ರಾಮಲಿಂಗಾರೆಡ್ಡಿ ಹಾಗೂ ಅಧಿಕಾರಿಗಳ ಜೊತೆ ಈಗಾಗಲೇ ಚರ್ಚಿಸಲಾಗಿದೆ. ಬೆಂಗಳೂರಿಗೆ ಮರಳಿದ ನಂತರ ವಿರೋಧ ಪಕ್ಷದ ನಾಯಕರೊಂದಿಗೂ ಈ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಪ್ರಯೋಗ: ಸಂಸತ್ತಿನಲ್ಲಿ ರಾಹುಲ್ ಗಾಂಧಿ ಅವರು ಎತ್ತಿರುವ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದಾಳಿಯ ವಿಷಯವು ಇಡೀ ದೇಶದ ಗಂಭೀರ ಪ್ರಶ್ನೆಯಾಗಿದ್ದು, ಈ ಬಗ್ಗೆ ಕೇಂದ್ರ ಗೃಹ ಸಚಿವರು ದೇಶಕ್ಕೆ ಸ್ಪಷ್ಟನೆ ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲು ಅನುಮತಿ ನೀಡಿದವರು ಯಾರು ಎಂದು ಪ್ರಶ್ನಿಸಿದರು. ದೆಹಲಿ ಪೊಲೀಸ್ ಇಲಾಖೆಯು ನೇರವಾಗಿ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವುದರಿಂದ, ಇಂತಹ ಪರಿಸ್ಥಿತಿಯಲ್ಲಿ ಮೂಲಭೂತ ಪ್ರಶ್ನೆಗಳನ್ನು ಕೇಳುವುದು ವಿರೋಧ ಪಕ್ಷದ ನಾಯಕರ ಹಾಗೂ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ತಮ್ಮ ಸುದೀರ್ಘ ರಾಜಕೀಯ ಇತಿಹಾಸದಲ್ಲೇ ಇಲಾಖೆಯು ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಪ್ರಯೋಗಿಸಿರುವುದನ್ನು ಇದೇ ಮೊದಲು ನೋಡುತ್ತಿರುವುದಾಗಿ ಆತಂಕ ವ್ಯಕ್ತಪಡಿಸಿದ ಸಿಎಂ, ಗೃಹ ಸಚಿವರು ಈ ಘಟನೆಗೆ ಹೊಣೆ ಹೊರಬೇಕು ಎಂದಿದ್ದಾರೆ.

ಇದೇ ವೇಳೆ ರಾಜ್ಯದ ಸಚಿವ ಸಂಪುಟ ವಿಸ್ತರಣೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ಈ ಬಗ್ಗೆ ಈಗಾಗಲೇ ಹಿರಿಯ ನಾಯಕರೊಂದಿಗೆ ಪ್ರಾಥಮಿಕ ಚರ್ಚೆಗಳು ನಡೆದಿವೆ ಎಂದು ತಿಳಿಸಿದರು. ಹೈಕಮಾಂಡ್ ನಾಯಕರ ಜೊತೆ ಅಂತಿಮ ಸುತ್ತಿನ ಮಾತುಕತೆ ನಡೆಸುವುದು ಮಾತ್ರ ಬಾಕಿ ಉಳಿದಿದ್ದು, ಶೀಘ್ರದಲ್ಲೇ ದೆಹಲಿಗೆ ಬಂದು ಚರ್ಚೆ ನಡೆಸುವಂತೆ ಪಕ್ಷದ ವರಿಷ್ಠರು ತಿಳಿಸಿದ್ದಾರೆ ಎಂದು ಸಂಪುಟ ಕಸರತ್ತಿನ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

 


Share this with Friends

Related Post