ಮಂಡ್ಯ: ಸಾಲಬಾಧೆ ಹಾಗೂ ಬೆಳೆ ನಷ್ಟದ ಕಾರಣದಿಂದಾಗಿ ಮಂಡ್ಯ ತಾಲ್ಲೂಕಿನ ಹಟ್ನ ಬೇವುಕಲ್ಲು ಗ್ರಾಮದಲ್ಲಿ ರೈತ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾರಿ ಆಘಾತ ಮೂಡಿಸಿದೆ. ಈ ಕರುಣಾಜನಕ ವಿಷಯ ತಿಳಿಯುತ್ತಿದ್ದಂತೆಯೇ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ಮೃತರ ಮನೆಗೆ ಖುದ್ದಾಗಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ಶಾಸಕ ಸುರೇಶ್ ಬಾಬು ಸೇರಿದಂತೆ ಪ್ರಮುಖ ರಾಜಕೀಯ ಮುಖಂಡರೊಂದಿಗೆ ಗ್ರಾಮಕ್ಕೆ ಆಗಮಿಸಿದ ಸಚಿವರು, ಆತ್ಮಹತ್ಯೆಗೆ ಶರಣಾದ ಪುಟ್ಟಸ್ವಾಮಿ ಮತ್ತು ನಾಗಮ್ಮ ದಂಪತಿಯ ವೃದ್ಧ ತಾಯಿ, ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಧೈರ್ಯ ತುಂಬಿದರು.
ಘಟನೆಯ ಹಿನ್ನೆಲೆ:
ಮೃತ ಪುಟ್ಟಸ್ವಾಮಿ ಅವರು ಕೃಷಿ ಚಟುವಟಿಕೆಗಳಿಗಾಗಿ ಬ್ಯಾಂಕ್ ಹಾಗೂ ವಿವಿಧ ಖಾಸಗಿ ಮೂಲಗಳಿಂದ ಭಾರಿ ಪ್ರಮಾಣದ ಸಾಲ ಮಾಡಿದ್ದರು ಎನ್ನಲಾಗಿದೆ. ಆದರೆ ಈ ಬಾರಿ ಸರಿಯಾಗಿ ಮಳೆ ಬಾರದ ಕಾರಣ ತೀವ್ರ ಬೆಳೆ ನಷ್ಟ ಉಂಟಾಗಿತ್ತು. ಒಂದೆಡೆ ಕೈಗೆ ಬಾರದ ಬೆಳೆ, ಮತ್ತೊಂದೆಡೆ ಸಾಲಗಾರರ ಒತ್ತಡದಿಂದ ತೀವ್ರ ಕಂಗೆಟ್ಟಿದ್ದ ದಂಪತಿ ಗುರುವಾರ ನೇಣಿಗೆ ಶರಣಾಗಿದ್ದರು.
ಹಾಸನದಿಂದ ನೇರವಾಗಿ ಹಟ್ನ ಬೇವುಕಲ್ಲು ಗ್ರಾಮಕ್ಕೆ ಆಗಮಿಸಿದ ಕೇಂದ್ರ ಸಚಿವರು, ಮೃತರ ವೃದ್ಧ ತಾಯಿಯವರ ಕೈಹಿಡಿದು ಧೈರ್ಯ ತುಂಬಿದರು. ಅವರ ಪುತ್ರ ಸ್ವಾಮಿ ಮತ್ತು ಇಡೀ ಕುಟುಂಬಕ್ಕೆ “ಯಾವುದೇ ಕಾರಣಕ್ಕೂ ಎದೆಗುಂದಬೇಡಿ, ನಿಮ್ಮ ಜೊತೆ ನಾನಿದ್ದೇನೆ” ಎಂದು ಭರವಸೆ ನೀಡಿದರು. ಅಲ್ಲದೆ, ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಕುಟುಂಬಕ್ಕೆ ಅಗತ್ಯವಿರುವ ಆರ್ಥಿಕ ಹಾಗೂ ಸಾಮಾಜಿಕ ನೆರವು ಒದಗಿಸುವ ಸಂಬಂಧ ಸ್ಥಳೀಯ ಮುಖಂಡರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.
ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ:
ದಂಪತಿಯ ಸಾವಿಗೆ ಕಾರಣವಾದ ಸಾಲದ ವಿವರಗಳ ಬಗ್ಗೆ ಮೃತರ ಮಗನಿಂದ ಮಾಹಿತಿ ಪಡೆದುಕೊಂಡ ಸಚಿವರು, ಸ್ಥಳದಲ್ಲಿದ್ದ ಕಂದಾಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ದುಃಖತಪ್ತ ಕುಟುಂಬಕ್ಕೆ ಸರ್ಕಾರದ ನಿಯಮಾವಳಿಗಳ ಪ್ರಕಾರ ಸಿಗಬೇಕಾದ ಎಲ್ಲಾ ರೀತಿಯ ಪರಿಹಾರ ಧನ ಹಾಗೂ ಸೌಲಭ್ಯಗಳನ್ನು ತಕ್ಷಣವೇ ಒದಗಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮೃತ ದಂಪತಿ ಸುಮಾರು ಐದು ಎಕರೆ ಜಮೀನು ಹೊಂದಿದ್ದು, ಕೃಷಿಗಾಗಿಯೇ ಕೈಸಾಲ ಮಾಡಿಕೊಂಡಿದ್ದರು ಎಂದು ಗ್ರಾಮಸ್ಥರು ಸಚಿವರಿಗೆ ವಿವರಿಸಿದರು. ವೃದ್ಧ ಅಜ್ಜಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಮಗನಿಗೆ ತಿಳಿಸಿದ ಸಚಿವರು, ಮುಂದಿನ ದಿನಗಳಲ್ಲಿ ಏನೇ ತೊಂದರೆ ಬಂದರೂ ತಮ್ಮನ್ನು ನೇರವಾಗಿ ಭೇಟಿಯಾಗುವಂತೆ ತಿಳಿಸಿ ನೆರವಿನ ಹಸ್ತ ಚಾಚಿದರು.
ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ಹೋಗಬಾರದು. ಏನೇ ಸಮಸ್ಯೆ ಬಂದರೂ ಧೈರ್ಯವಾಗಿ ಎದುರಿಸಬೇಕು. ತಮ್ಮನ್ನು ನಂಬಿದ ಜನ ಇರುತ್ತಾರೆ ಎನ್ನುವುದು ಮರೆಯಬಾರದು ಎಂದು ಸಚಿವರು ಮನವಿ ಮಾಡಿದರು.

