ಬೆಂಗಳೂರು: ರಾಜ್ಯದ ನಿರುದ್ಯೋಗಿ ಯುವಜನತೆಗೆ ಸರ್ಕಾರವು ಭಾರಿ ಉದ್ಯೋಗದ ಬಂಪರ್ ಕೊಡುಗೆ ನೀಡಲು ಸಜ್ಜಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 70 ಸಾವಿರಕ್ಕೂ ಅಧಿಕ ಹುದ್ದೆಗಳ ಬೃಹತ್ ನೇಮಕಾತಿಗೆ ಅಧಿಕೃತ ಸಿದ್ಧತೆಗಳನ್ನು ಕೈಗೊಳ್ಳಲಾಗಿದು, ಪರೀಕ್ಷಾ ಅಕ್ರಮ ನಡೆದರೆ ಹಿರಿಯ ಅಧಿಕಾರಿಗಳೇ ನೇರ ಹೊಣೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ ಜತೆಗೆ ಯುಪಿಎಸ್‌ಸಿ ಮಾದರಿ ಅಳವಡಿಕೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಹಿರಿಯ ಅಧಿಕಾರಿಗಳ ಮಹತ್ವದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸಂಪೂರ್ಣ ಭರ್ತಿ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ಯಾವುದೇ ಲೋಪದೋಷಗಳಿಲ್ಲದೆ ಕಟ್ಟುನಿಟ್ಟಾಗಿ ನಡೆಸಲು ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
“70 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ ಮಾಡುವ ಈ ಬೃಹತ್ ಜವಾಬ್ದಾರಿಯನ್ನು ನಾವು ಅತ್ಯಂತ ವೃತ್ತಿಪರವಾಗಿ ನಿಭಾಯಿಸಬೇಕಿದೆ. ಇಡೀ ನೇಮಕಾತಿ ಪ್ರಕ್ರಿಯೆಯನ್ನು ದೇಶಕ್ಕೇ ಮಾದರಿಯಾಗುವಂತಹ ಅತ್ಯುನ್ನತ ಪಾರದರ್ಶಕತೆಯೊಂದಿಗೆ ಪೂರ್ಣಗೊಳಿಸಬೇಕಾಗಿದೆ”.ಪರೀಕ್ಷಾ ಪ್ರಕ್ರಿಯೆಯನ್ನು ಇನ್ನಷ್ಟು ಸುಧಾರಿಸಲು ಮತ್ತು ಅಕ್ರಮಗಳಿಗೆ ಸಂಪೂರ್ಣ ಬ್ರೇಕ್ ಹಾಕಲು ಕೇಂದ್ರ ಲೋಕಸೇವಾ ಆಯೋಗ (UPSC) ಅನುಸರಿಸುವ ಅತ್ಯುತ್ತಮ ತಾಂತ್ರಿಕ ಮತ್ತು ಆಡಳಿತಾತ್ಮಕ ಅಂಶಗಳನ್ನು ರಾಜ್ಯದಲ್ಲೂ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಹೆಗಲಿಗೆ ಸಂಪೂರ್ಣ ಜವಾಬ್ದಾರಿ:
ಜಿಲ್ಲಾ ಮಟ್ಟದಲ್ಲಿ ಪರೀಕ್ಷೆಗಳನ್ನು ಯಾವುದೇ ಲೋಪದೋಷಗಳಿಲ್ಲದೆ ಪಾರದರ್ಶಕವಾಗಿ ನಡೆಸುವುದು ಆಯಾ ಜಿಲ್ಲೆಯ ಹಿರಿಯ ಅಧಿಕಾರಿಗಳ ನೇರ ಜವಾಬ್ದಾರಿಯಾಗಿದೆ. ಜಿಲ್ಲಾಧಿಕಾರಿಗಳು (DC), ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP) ಮತ್ತು ಶಿಕ್ಷಣ ಇಲಾಖೆಯ ಮುಖ್ಯಸ್ಥರು ಸಂಪೂರ್ಣ ಜವಾಬ್ದಾರಿಯಿಂದ ಜಂಟಿಯಾಗಿ ಕಾರ್ಯ ನಿರ್ವಹಿಸಬೇಕು.
ಪರೀಕ್ಷಾ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ಗರಿಷ್ಠ ಎಚ್ಚರಿಕೆ ವಹಿಸಬೇಕಾಗಿದ್ದು, ಪ್ರಶ್ನೆಪತ್ರಿಕೆ ವಿತರಣೆಯಿಂದ ಹಿಡಿದು ಓಎಂಆರ್ ಶೀಟ್ ಕಳುಹಿಸುವವರೆಗಿನ ಪ್ರತಿ ಹಂತವನ್ನೂ ಕಡ್ಡಾಯವಾಗಿ ವಿಡಿಯೋ ಚಿತ್ರೀಕರಣ (Video Recording) ಮಾಡಬೇಕು. ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗಳು ಅಥವಾ ಮ್ಯಾನೇಜ್‌ಮೆಂಟ್‌ಗಳು ಪರೀಕ್ಷಾ ಅಕ್ರಮ ನಡೆಸದಂತೆ ಕಟ್ಟುನಿಟ್ಟಿನ ಕಟ್ಟೆಚ್ಚರ ವಹಿಸಬೇಕು. ಪರೀಕ್ಷಾ ಕರ್ತವ್ಯದಲ್ಲಿರುವ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ಬಳಿ ಮೊಬೈಲ್ ಫೋನ್ ಇರಬಾರದು ಎಂದು ನಿಯಮ ರೂಪಿಸಲಾಗಿದೆ ಎಂದರು.
ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ಮತ್ತು ತಜ್ಞರ ಸಮಿತಿ ರಚನೆ:
ಪರೀಕ್ಷೆ ಬರೆಯಲು ಪ್ರಾರಂಭಿಸುವ ಮೊದಲು ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಸ್ಪಷ್ಟವಾದ ಮಾರ್ಗಸೂಚಿಗಳಿದ್ದು, ಇವುಗಳಲ್ಲಿ ಸಣ್ಣ ಲೋಪವಾದರೂ ಸಹ ಹಿರಿಯ ಅಧಿಕಾರಿಗಳನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಿ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮುಂದಿನ ಆರು ತಿಂಗಳ ಅಲ್ಪಾವಧಿಯಲ್ಲೇ ಮೊದಲ ಹಂತವಾಗಿ 36,773 ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗ (KPSC) ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಗಳು (KEA) ಈಗಾಗಲೇ ಅಧಿಕೃತ ಪರೀಕ್ಷಾ ವೇಳಾಪಟ್ಟಿಯನ್ನು ಹೊರಡಿಸಿದ್ದು, ಸುಮಾರು 35 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಸಜ್ಜಾಗುತ್ತಿದ್ದಾರೆ. ಈ ಇಡೀ ನೇಮಕಾತಿ ಸಿದ್ಧತೆಗಳನ್ನು ನಿರಂತರವಾಗಿ ಪರಿಶೀಲಿಸಲು ಹಿರಿಯ ಅಧಿಕಾರಿಗಳನ್ನು ಒಳಗೊಂಡ “ವಿಶೇಷ ತಜ್ಞರ ಸಮಿತಿ”ಯನ್ನು ರಚಿಸಲು ಆದೇಶಿಸಿದರು.

