ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಿವೇಶನ (Site) ಖರೀದಿಸಿ, ಮನೆ ಕಟ್ಟದೆ ಖಾಲಿ ಬಿಟ್ಟಿರುವ ಮಾಲೀಕರಿಗೆ ಸರ್ಕಾರ ಭರ್ಜರಿ ಶಾಕ್ ನೀಡಿದೆ. ಬಿಡಿಎ ಅಥವಾ ಕಾರ್ಪೊರೇಷನ್ ಜಾಗ ಪಡೆದ 5 ವರ್ಷಗಳೊಳಗೆ ಮನೆ ನಿರ್ಮಾಣ ಮಾಡದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದ ಹೆಬ್ಬಾಳ ಜಂಕ್ಷನ್ ಬಳಿ ಹಮ್ಮಿಕೊಳ್ಳಲಾಗಿದ್ದ “ತ್ಯಾಜ್ಯದಿಂದ ಸ್ವಾತಂತ್ರ್ಯ” ವಿಶೇಷ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಖಾಲಿ ಸೈಟ್‌ಗಳನ್ನು ಹಾಗೇ ಬಿಡುವುದರಿಂದ ನಗರದಲ್ಲಿ ಕಸದ ಸಮಸ್ಯೆ ಮತ್ತು ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ನಿಯಮ ಜಾರಿಗೆ ತರಲು ಮುಂದಾಗಿದೆ.”ನಾವು ನಿವೇಶನ ನೀಡುವುದು ಜನರು ಮನೆ ಕಟ್ಟಿಕೊಂಡು ವಾಸಿಸಲಿ ಎಂದು. ಆದರೆ ಕೆಲವರು ಬಿಡಿಎ, ಸಿಐಟಿಬಿ (CITB) ಅಥವಾ ವಿವಿಧ ಸೊಸೈಟಿಗಳಿಂದ ಸೈಟ್ ಪಡೆದು 20 ರಿಂದ 40 ವರ್ಷಗಳಾಗಿದ್ದರೂ ಮನೆ ಕಟ್ಟಿಲ್ಲ. ಇನ್ಮುಂದೆ ಅಂತಹ ಜಾಗಗಳನ್ನು ಸರ್ಕಾರವೇ ಮುಟ್ಟುಗೋಲು ಹಾಕಿಕೊಳ್ಳಲಿದೆ. ಮಾಲೀಕರು ಸೈಟ್‌ಗೆ ಪಾವತಿಸಿದ್ದ ಹಣವನ್ನು ಬಡ್ಡಿ ಸಮೇತ ವಾಪಸ್ ನೀಡಿ ನಿವೇಶನವನ್ನು ಹಿಂಪಡೆಯಲಾಗುವುದು” ಎಂದು ಸಿಎಂ ಸ್ಪಷ್ಟಪಡಿಸಿದರು.
ಒಂದು ವೇಳೆ ನಿವೇಶನ ಮುಟ್ಟುಗೋಲು ಹಾಕಿಕೊಳ್ಳದಿದ್ದರೆ, ಅಂತಹ ಖಾಲಿ ಜಾಗಗಳಿಗೆ ದುಪ್ಪಟ್ಟು (Double) ಆಸ್ತಿ ತೆರಿಗೆ ವಿಧಿಸಲು ತೀರ್ಮಾನಿಸಲಾಗಿದೆ ಎಂದರು.
ಕಾಂಪೌಂಡ್ ಹಾಕದಿದ್ದರೆ ಮಾಲೀಕರೇ ಜವಾಬ್ದಾರರು!
“ಸೈಟ್ ಪಡೆದ ಮೇಲೆ ಅದಕ್ಕೆ ಕಾಂಪೌಂಡ್ ಹಾಕಿ ರಕ್ಷಿಸಿಕೊಳ್ಳುವುದು ಮಾಲೀಕರ ಕರ್ತವ್ಯ. ಅಲ್ಲಿ ಬೇರೆಯವರು ಬಂದು ಕಸ ಹಾಕಲು ಅವಕಾಶ ಮಾಡಿಕೊಟ್ಟರೆ ಹೇಗೆ? ನಿಮ್ಮ ಜಾಗದಲ್ಲಿ ನೀವು ಕಸ ಹಾಕದೇ ಇದ್ದರೂ, ಆ ಜಾಗ ಬೇರೆಯವರಿಂದ ಕಸದ ತೊಟ್ಟಿಯಾಗದಂತೆ ನೋಡಿಕೊಳ್ಳುವುದು ನಿಮ್ಮದೇ ಜವಾಬ್ದಾರಿ” ಎಂದು ಜಾಗದ ಮಾಲೀಕರಿಗೆ ಕಿವಿಮಾತು ಹೇಳಿದರು. ಮಹಾತ್ಮಾ ಗಾಂಧೀಜಿ ಹಾಗೂ ರಾಜೀವ್ ಗಾಂಧಿ ಅವರ ಸ್ವಚ್ಛತೆಯ ತತ್ವಗಳನ್ನು ಈ ವೇಳೆ ಅವರು ಸ್ಮರಿಸಿದರು.
ಎಲ್ಲೆಂದರಲ್ಲಿ ಕಸ ಹಾಕುವ ವಾಹನಗಳು ಸೀಜ್! ಪೊಲೀಸರಿಗೆ ಮುಕ್ತ ಅವಕಾಶ!
ನಗರದ ಸ್ವಚ್ಛತೆ ಕೆಡಿಸುವವರ ವಿರುದ್ಧವೂ ಸಿಎಂ ಕೆಂಡಾಮಂಡಲವಾಗಿದ್ದಾರೆ. ರಸ್ತೆ ಬದಿ ಹಾಗೂ ಖಾಲಿ ಜಾಗಗಳಲ್ಲಿ ಅಕ್ರಮವಾಗಿ ಕಸ ಸುರಿಯುವ ವಾಹನಗಳನ್ನು ಯಾವುದೇ ಮುಲಾಜಿಲ್ಲದೆ ಜಪ್ತಿ (Seize) ಮಾಡಲು ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಈ ಹಿಂದೆ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇಟ್ಟು, ನೋಟಿಸ್ ನೀಡಲಾಗಿದ್ದರೂ ಕೆಲವರು ಕಸ ಸುರಿಯುವುದನ್ನು ನಿಲ್ಲಿಸಿಲ್ಲ. ಹೀಗಾಗಿ ಇನ್ಮುಂದೆ ಕಾನೂನು ಬಾಹಿರವಾಗಿ ತ್ಯಾಜ್ಯ ವಿಲೇವಾರಿ ಮಾಡುವ ಗಾಡಿಗಳನ್ನು ಪೊಲೀಸರು ನೇರವಾಗಿ ವಶಕ್ಕೆ ಪಡೆಯಲಿದ್ದಾರೆ.
“ಬೆಂಗಳೂರು ಸರ್ಕಾರದ ಆಸ್ತಿಯಲ್ಲ, ಅದು ಸಾರ್ವಜನಿಕರ ಆಸ್ತಿ. ನಮ್ಮ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ” ಎಂದು ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.
ಬೆಂಗಳೂರು ಹಸಿರೀಕರಣಕ್ಕೆ ಡಿಕೆಶಿ ಮಾಸ್ಟರ್ ಪ್ಲಾನ್:
ರಾಜಧಾನಿ ಬೆಂಗಳೂರಿನ ಸೌಂದರ್ಯ ಮತ್ತು ಸ್ವಚ್ಛತೆಯನ್ನು ಹೆಚ್ಚಿಸಲು ಸಿಎಂ ಡಿ.ಕೆ. ಶಿವಕುಮಾರ್ ಅವರು ಹಸಿರೀಕರಣದ ಹೊಸ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ್ದಾರೆ. ಇದನ್ನು ಸರ್ಕಾರದ 100 ದಿನಗಳ ಕಾರ್ಯಕ್ರಮದ ವೇಳೆ ಅಧಿಕೃತವಾಗಿ ಘೋಷಿಸುವುದಾಗಿ ಅವರು ಪ್ರಕಟಿಸಿದ್ದಾರೆ.
ಅಧಿಕಾರಿಗಳ ಮೇಲಿನ ದಾಳಿ ಸರ್ಕಾರದ ಮೇಲಿನ ದಾಳಿ!
ಶಿವಾಜಿನಗರದಲ್ಲಿ ಪಾದಚಾರಿ ಮಾರ್ಗ (Footpath) ಒತ್ತುವರಿ ತೆರವುಗೊಳಿಸುವ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳ ಮೇಲೆ ನಡೆದಿರುವ ದಾಳಿಯ ಕುರಿತು ಸಿಎಂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇದು ಕೇವಲ ಅಧಿಕಾರಿಗಳ ಮೇಲಿನ ದಾಳಿಯಲ್ಲ, ಬದಲಿಗೆ ಸರ್ಕಾರ ಮತ್ತು ಸಚಿವರ ಮೇಲಿನ ದಾಳಿ ಎಂದು ಭಾವಿಸುತ್ತೇವೆ. ಒತ್ತುವರಿ ತೆರವು ಕಾರ್ಯವನ್ನು ಎಲ್ಲಾ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ಪಡೆದೇ ಮಾಡಲಾಗುತ್ತಿದೆ” ಎಂದು ಎಚ್ಚರಿಸಿದ್ದಾರೆ.
ಬೀದಿ ವ್ಯಾಪಾರಿಗಳಿಗೆ ಪರ್ಯಾಯ ಜಾಗ:
ಪಾದಚಾರಿಗಳಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆ ಕೊಟ್ಟು ಬೀದಿ ಬದಿಯಲ್ಲಿ ವ್ಯಾಪಾರ ಮಾಡಲು ಯಾರಿಗೂ ಅವಕಾಶವಿಲ್ಲ. ಆದರೆ ಬೀದಿ ವ್ಯಾಪಾರಿಗಳ ಹಿತದೃಷ್ಟಿಯಿಂದ ಅವರಿಗೆ ವ್ಯಾಪಾರ ಮಾಡಿಕೊಳ್ಳಲು ಬೇರೆ ಸೂಕ್ತ ಜಾಗಗಳನ್ನು ಗುರುತಿಸಿ ಒದಗಿಸಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ನಾಲ್ಕೈದು ರಸ್ತೆಗಳ ಜವಾಬ್ದಾರಿ ತೆಗೆದುಕೊಳ್ಳಿ:
ಬೆಂಗಳೂರನ್ನು ಕಸ ಮುಕ್ತವಾಗಿಸಲು ಸಾರ್ವಜನಿಕರು ಮತ್ತು ಎನ್‌ಜಿಒಗಳ (NGOs) ಸಹಕಾರ ಅಗತ್ಯವಿದೆ. ಸ್ವಯಂಸೇವಾ ಸಂಸ್ಥೆಗಳು ಕನಿಷ್ಠ ನಾಲ್ಕೈದು ರಸ್ತೆಗಳ ಅಥವಾ ಒಂದು ನಿರ್ದಿಷ್ಟ ಲೊಕೇಶನ್‌ನ ಸ್ವಚ್ಛತೆಯ ಹೊಣೆ ಹೊತ್ತುಕೊಂಡರೆ ಸರ್ಕಾರ ಅದನ್ನು ಸ್ವಾಗತಿಸುತ್ತದೆ ಎಂದು ಅವರು ಕರೆ ನೀಡಿದ್ದಾರೆ.

