Sat. Aug 1st, 2026

ಜೀವಾವಧಿ ಶಿಕ್ಷೆಗೆ ತಡೆ, ಜೈಲಿನಿಂದ ಹೊರಬರುತ್ತಿದ್ದಂತೆ ಕುಟುಂಬ ಸಮೇತ ಸಿಎಂ ಭೇಟಿಯಾದ ಶಾಸಕ ವಿನಯ್ ಕುಲಕರ್ಣಿ!

Share this with Friends

ಬೆಂಗಳೂರು: ಕೊಲೆ ಪ್ರಕರಣವೊಂದರಲ್ಲಿ ಸದ್ಯಕ್ಕೆ ದೊಡ್ಡ ಕಾನೂನು ನಿರಾಳತೆ ಪಡೆದಿರುವ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರು ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.

ಕೆಳ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯ ತೀರ್ಪಿಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿ, ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಜಾಮೀನು ಪ್ರಕ್ರಿಯೆ ಮುಗಿದು ಜೈಲಿನಿಂದ ಮುಕ್ತರಾಗುತ್ತಿದ್ದಂತೆ ಶಾಸಕ ವಿನಯ್ ಕುಲಕರ್ಣಿ ಅವರು ಬೆಂಗಳೂರಿನ ಸದಾಶಿವನಗರದಲ್ಲಿರುವ ಸಿಎಂ ನಿವಾಸಕ್ಕೆ ಧಾವಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಕುಟುಂಬ ಸಮೇತ ಸಿಎಂ ನಿವಾಸಕ್ಕೆ ದೌಡು!

ಕಾನೂನು ಹೋರಾಟದ ಹಿನ್ನೆಲೆಯಲ್ಲಿ ಜೈಲು ವಾಸ ಅನುಭವಿಸುತ್ತಿದ್ದ ವಿನಯ್ ಕುಲಕರ್ಣಿ ಅವರು ಬಿಡುಗಡೆಯಾದ ತಕ್ಷಣ ತಮ್ಮ ಪತ್ನಿ ಶಿವಲೀಲಾ ಮತ್ತು ಪುತ್ರಿ ವೈಶಾಲಿ ಅವರೊಂದಿಗೆ ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದರು. ಕಷ್ಟದ ಸಮಯದಲ್ಲಿ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ರಾಜಕೀಯವಾಗಿ ಮತ್ತು ನೈತಿಕವಾಗಿ ಬೆಂಬಲ ನೀಡಿದ ನಾಯಕನಿಗೆ ಹೂಗುಚ್ಛ ನೀಡಿ ಕೃತಜ್ಞತೆ ಸಲ್ಲಿಸಿದರು. ಅಲ್ಲದೆ ಕೆಲಕಾಲ ಉಭಯ ಕುಶಲೋಪರಿ ವಿಚಾರಿಸಿದರು.

ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ!

ಸಿಎಂ ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ವಿನಯ್ ಕುಲಕರ್ಣಿ, “ಇದು ಕೇವಲ ಸೌಜನ್ಯದ ಭೇಟಿಯಷ್ಟೇ ಆಗಿದ್ದು, ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ನನಗೆ ನ್ಯಾಯ ಒದಗಿಸಿದ ನ್ಯಾಯಾಲಯಕ್ಕೆ ಹಾಗೂ ನನ್ನ ಬೆಂಬಲಕ್ಕೆ ನಿಂತ ಕ್ಷೇತ್ರದ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ. ಸದ್ಯಕ್ಕೆ ನಾನು ಯಾವುದೇ ಸಚಿವ ಸ್ಥಾನದ ಆಕಾಂಕ್ಷಿಯಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಹೈಕೋರ್ಟ್‌ ಜೀವಾವಧಿ ಶಿಕ್ಷೆಯ ತೀರ್ಪನ್ನು ಅಮಾನತುಗೊಳಿಸಿರುವುದರಿಂದ ವಿನಯ್ ಕುಲಕರ್ಣಿ ಅವರಿಗೆ ಎದುರಾಗಿದ್ದ ಶಾಸಕ ಸ್ಥಾನದ ಅನರ್ಹತೆಯ ಭೀತಿ ಸದ್ಯಕ್ಕೆ ದೂರಾಗಿದೆ. ಜೈಲಿನಿಂದ ಹೊರಬಂದ ತಕ್ಷಣವೇ ಅವರು ಸಿಎಂ ಭೇಟಿಯಾಗಿರುವುದು ಉತ್ತರ ಕರ್ನಾಟಕದ ರಾಜಕೀಯದಲ್ಲಿ ಹೊಸ ಲೆಕ್ಕಾಚಾರಗಳಿಗೆ ಕಾರಣವಾಗಿದೆ.

 

 


Share this with Friends

Related Post