ಮೈಸೂರು/ಮಡಿಕೇರಿ: ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಾದ ಕಬಿನಿ ಮತ್ತು ಹಾರಂಗಿ ಸಂಪೂರ್ಣ ಭರ್ತಿಯಾಗಿವೆ. ಸುರಕ್ಷತೆಯ ದೃಷ್ಟಿಯಿಂದ ಈ ಎರಡೂ ಅಣೆಕಟ್ಟುಗಳ ಕ್ರಸ್ಟ್ ಗೇಟ್‌ಗಳನ್ನು ತೆರೆದು ನದಿಗೆ ಭಾರಿ ಪ್ರಮಾಣದ ಹೆಚ್ಚುವರಿ ನೀರನ್ನು ಹರಿಸಲಾಗುತ್ತಿದೆ.
ಕಬಿನಿ ಜಲಾಶಯದ ಸ್ಥಿತಿ:
ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆಯ ಕಬಿನಿ ಜಲಾಶಯಕ್ಕೆ ಸದ್ಯ 16,000 ಕ್ಯೂಸೆಕ್ ಒಳಹರಿವು ಇದ್ದು, ಸುರಕ್ಷತೆಗಾಗಿ ಸುಮಾರು 10,000 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಗರಿಷ್ಠ 2,284 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 2,281 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಒಟ್ಟು 19.52 ಟಿಎಂಸಿ ಸಾಮರ್ಥ್ಯದಲ್ಲಿ ಈಗಾಗಲೇ 18 ಟಿಎಂಸಿ ಭರ್ತಿಯಾಗಿದೆ.
ಹಾರಂಗಿ ಜಲಾಶಯದ ಸ್ಥಿತಿ:
ಕೊಡಗಿನ ಹಾರಂಗಿ ಜಲಾಶಯವೂ ಸಹ ಭರ್ತಿಯಾಗಿದ್ದು, ಸದ್ಯ 9,896 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ನದಿಗೆ ಗರಿಷ್ಠ 20,000 ಕ್ಯೂಸೆಕ್ ವರೆಗೆ ನೀರನ್ನು ಹರಿಸಲಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಪ್ರಸ್ತುತ 2,857.83 ಅಡಿ ತಲುಪಿದೆ.
ಕೆಆರ್‌ಎಸ್ ಮತ್ತು ಹೇಮಾವತಿಗೂ ಜೀವಕಳೆ:
ಹಾರಂಗಿ ಮತ್ತು ಕಾವೇರಿ ನದಿ ಪಾತ್ರದಿಂದ ಹರಿದು ಬರುತ್ತಿರುವ ಅಪಾರ ನೀರಿನಿಂದಾಗಿ ಮಂಡ್ಯದ ಕೆಆರ್‌ಎಸ್ ಜಲಾಶಯದ ಒಳಹರಿವು 20,438 ಕ್ಯೂಸೆಕ್‌ಗೆ ಹೆಚ್ಚಾಗಿದೆ. ಇದರಿಂದಾಗಿ ಕೆಆರ್‌ಎಸ್ ನೀರಿನ ಮಟ್ಟ 95.57 ಅಡಿಗೆ ಏರಿಕೆ ಕಂಡಿದೆ. ಮತ್ತೊಂದೆಡೆ ಹಳೇ ಮೈಸೂರು ಭಾಗದ ಹೇಮಾವತಿ ಜಲಾಶಯಕ್ಕೂ 11,685 ಕ್ಯೂಸೆಕ್ ಒಳಹರಿವು ಬರುತ್ತಿದೆ.
ಪ್ರವಾಹದ ಮುನ್ನೆಚ್ಚರಿಕೆ:
ಜಲಾಶಯಗಳಿಂದ ನದಿಗೆ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಕಪಿಲಾ ಹಾಗೂ ಕಾವೇರಿ ನದಿ ಪಾತ್ರದ ತಗ್ಗು ಪ್ರದೇಶದ ಜನರಿಗೆ ಕಾವೇರಿ ನೀರಾವರಿ ನಿಗಮ ಮತ್ತು ಜಿಲ್ಲಾಡಳಿತಗಳು ಪ್ರವಾಹದ ಮುನ್ನೆಚ್ಚರಿಕೆ ನೀಡಿವೆ. ನದಿ ತೀರದ ನಿರಾಸ್ರಿತರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.
ವರುಣನ ಕೃಪೆಯಿಂದ ಜಲಾಶಯಗಳು ತುಂಬುತ್ತಿರುವುದು ಕಾವೇರಿ ಕೊಳ್ಳದ ರೈತರು ಹಾಗೂ ಸಾರ್ವಜನಿಕರಿಗೆ ಸದ್ಯ ದೊಡ್ಡ ನಿರಾಳತೆ ತಂದಿದೆ.

