ಬೆಂಗಳೂರು: ರಾಜಧಾನಿಯಲ್ಲಿ ನಡೆದ 14ನೇ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನದ ಆವರಣ ಇಂದು ಒಂದು ಅಪರೂಪದ ಮತ್ತು ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು.
ಕೃಷಿ ಅಧಿಕಾರಿ (AO) ಹಾಗೂ ಸಹಾಯಕ ಕೃಷಿ ಅಧಿಕಾರಿ (AAO) ನೇಮಕಾತಿ ಗೊಂದಲದ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮಧ್ಯಾಹ್ನದ ಕಡು ಬಿಸಿಲಿನಲ್ಲಿ ಕಾದು ನಿಂತಿದ್ದರು. ಸಮ್ಮೇಳನ ಮುಗಿಸಿ ಹೊರಬಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬಿಸಿಲಿನಲ್ಲಿ ಕಾಯುತ್ತಿದ್ದ ಯುವಕರನ್ನು ಗಮನಿಸಿದ ತಕ್ಷಣ ತಮ್ಮ ಭದ್ರತಾ ಸಿಬ್ಬಂದಿಯನ್ನು ಬದಿಗಿಟ್ಟು ನೇರವಾಗಿ ವಿದ್ಯಾರ್ಥಿಗಳ ಬಳಿ ಧಾವಿಸಿದರು.
ಕಾವೇರಿದ ಬಿಸಿಲಿನಲ್ಲಿ ನಿಂತಿದ್ದ ವಿದ್ಯಾರ್ಥಿಗಳನ್ನು ಕಂಡು ಕರಗಿದ ಮುಖ್ಯಮಂತ್ರಿಗಳು, “ಮೊದಲು ಬಿಸಿಲಿನಿಂದ ಆಚೆ ಬನ್ನಿ, ಅಲ್ಲಿ ಮರದ ನೆರಳಿದೆ ಅಲ್ಲಿಗೆ ಹೋಗೋಣ ನಡೆಸಿ” ಎಂದು ಸ್ವತಃ ತಾವೇ ವಿದ್ಯಾರ್ಥಿಗಳನ್ನು ಹತ್ತಿರದ ಮರದ ನೆರಳಿಗೆ ಕರೆದುಕೊಂಡು ಹೋದರು. ಮರದ ತಂಪಾದ ನೆರಳಿನಲ್ಲಿ ವಿದ್ಯಾರ್ಥಿಗಳ ಜೊತೆ ಅತ್ಯಂತ ಸರಳವಾಗಿ ಮಾತನಾಡುತ್ತಾ, ನೇಮಕಾತಿಯ ಯಾವ ಹಂತದಲ್ಲಿ ತಮಗೆ ಅನ್ಯಾಯವಾಗಿದೆ ಎಂಬ ವಸ್ತುಸ್ಥಿತಿಯ ಸಂಪೂರ್ಣ ಮಾಹಿತಿಯನ್ನು ತಾಳ್ಮೆಯಿಂದ ಕೇಳಿ ಪಡೆದರು.
ಹಿಂದಿನ ಸರ್ಕಾರದ ತಪ್ಪುಗಳನ್ನು ಸರಿಪಡಿಸುವ ಆಶ್ವಾಸನೆ
ಇತ್ತೀಚೆಗೆ ಸರ್ಕಾರ ಹೊರಡಿಸಿದ 900ಕ್ಕೂ ಹೆಚ್ಚು ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ, ಬಿ.ಇ ಮತ್ತು ಬಿ.ಟೆಕ್‌ನಲ್ಲಿ ಬಯೋ ಕೆಮಿಸ್ಟ್ರಿ ಓದಿದವರಿಗೂ ಅವಕಾಶ ನೀಡಿದ್ದರಿಂದ ತಮಗೆ ಅನ್ಯಾಯವಾಗುತ್ತಿದೆ ಎಂದು ಕೃಷಿ ಪದವೀಧರರು ತಮ್ಮ ಅಳಲನ್ನು ತೋಡಿಕೊಂಡರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಮುಖ್ಯಮಂತ್ರಿಗಳು, “ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕಾತಿ ನಿಯಮಗಳಿಗೆ ಮಾಡಲಾದ ತಿದ್ದುಪಡಿಗಳಿಂದಾಗಿ ಈ ಗೊಂದಲ ಸೃಷ್ಟಿಯಾಗಿದೆ. ಇದನ್ನು ಕಾನೂನಾತ್ಮಕವಾಗಿ ಬಗೆಹರಿಸಲು ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ” ಎಂದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.
“ಪ್ರತಿಭಟನೆ ಕೈಬಿಡಿ, ನಿಮ್ಮೊಂದಿಗೆ ನಾವಿದ್ದೇವೆ”
ವಿದ್ಯಾರ್ಥಿಗಳ ಹೆಗಲ ಮೇಲೆ ಕೈಹಾಕಿ ಧೈರ್ಯ ತುಂಬಿದ ಸಿಎಂ, “ನಮ್ಮ ಸರ್ಕಾರ ನಿರುದ್ಯೋಗ ನಿರ್ಮೂಲನೆಗೆ ಕಟಿಬದ್ಧವಾಗಿದೆ. ನಿಮ್ಮ ಕಷ್ಟ ನನಗೆ ಅರ್ಥವಾಗುತ್ತದೆ. ಯಾವುದೇ ಕಾರಣಕ್ಕೂ ಕೃಷಿ ಪದವೀಧರರಿಗೆ ಅನ್ಯಾಯವಾಗಲು ನಾನು ಬಿಡುವುದಿಲ್ಲ. ದಯವಿಟ್ಟು ನಿಮ್ಮ ಪ್ರತಿಭಟನೆಯನ್ನು ಕೈಬಿಟ್ಟು ವಿಶ್ರಮಿಸಿಕೊಳ್ಳಿ” ಎಂದು ಆಪ್ತವಾಗಿ ವಿನಂತಿಸಿದರು. ಮುಖ್ಯಮಂತ್ರಿಗಳ ಈ ವಿಶಿಷ್ಟ ಮಾನವೀಯ ಆಂಗಲ್ ಮತ್ತು ಕಾಳಜಿಯುಕ್ತ ಭರವಸೆಯಿಂದಾಗಿ ಕಳೆದ 20 ದಿನಗಳಿಂದ ಬೀದಿಗಿಳಿದು ಹೋರಾಡುತ್ತಿದ್ದ ವಿದ್ಯಾರ್ಥಿಗಳ ಮುಖದಲ್ಲಿ ಕೊನೆಗೂ ಮಂದಹಾಸ ಮೂಡಿದೆ.

