ಬೆಂಗಳೂರು: ವಿಧಾನ ಪರಿಷತ್ತಿನ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಡಳಿತಾರೂಢ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿರುವ ಬೆನ್ನಲ್ಲೇ, ಕರ್ನಾಟಕ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ.ಈ ಸಂಬಂಧ ಸಿಎಂಡಿಕೆ ಶಿವಕುಮಾರ್ ಕರೆ ಮಾಡಿ ರಾಜೀನಾಮೆ ನೀಡಿವಂತೆ ತಿಳಿಸಿದ ಬೆಳವಣಿಗೆಯಿಂದ ತಮಗೆ ತೀವ್ರ ಬೇಸರವಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಚಿವರ ಪಟ್ಟಿ ಜತೆಯಲ್ಲೇ ಸ್ಪೀಕರ್ ಮತ್ತು ಸಭಾಪತಿಗಳ ಹೆಸರನ್ನೂ ಕಾಂಗ್ರೆಸ್ ಹೈಕಮಾಂಡ್ ಅಧಿಕೃತ ಲೆಟರ್ ಹೆಡ್ ನಲ್ಲಿಯೇ ಆಯ್ಕೆ ಮಾಡಿ ಕಳಿಸಿಕೊಟ್ಟಿದೆ”ಇದು ಅತ್ಯಂತ ಕಲುಷಿತ ರಾಜಕಾರಣದ ಪರಮಾವಧಿ. ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಇಂತಹ ಪರಿಸ್ಥಿತಿಯನ್ನು ನಾನು ನೋಡಿಲ್ಲ. 1956 ರಿಂದ ಇಂದಿನವರೆಗಿನ ಇತಿಹಾಸದಲ್ಲಿ ಯಾವುದೇ ಸಭಾಪತಿಯನ್ನು ಈ ರೀತಿ ಅವಧಿಗೆ ಮುನ್ನವೇ ಕೆಳಗಿಳಿಸಿದ ಉದಾಹರಣೆ ಇಲ್ಲ. ಎಲ್ಲರೂ ತಮ್ಮ ಪೂರ್ಣ ಅವಧಿ ಮುಗಿಸಿದ್ದಾರೆ” ಎಂದು ಬೇಸರ ಹೊರಹಾಕಿದ್ದಾರೆ.
“ನನ್ನ ವಿರುದ್ಧ ಯಾವುದೇ ದೂರುಗಳಿಲ್ಲ, ಯಾರೂ ಅವಿಶ್ವಾಸ ವ್ಯಕ್ತಪಡಿಸಿಲ್ಲ. ಸದನವನ್ನು ನಿಷ್ಪಕ್ಷಪಾತವಾಗಿ ಮುನ್ನಡೆಸಿದ್ದೇನೆ. ಆದರೂ ಹೈಕಮಾಂಡ್ ಹೆಸರಿನಲ್ಲಿ ರಾಜೀನಾಮೆ ಕೇಳುತ್ತಿರುವುದು ನನ್ನ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ” ಎಂದು ಅವರು ಹೇಳಿದ್ದಾರೆ.
ಸದನದಲ್ಲೇ ತೀರ್ಮಾನವಾಗಲಿ:
ಮುಖ್ಯಮಂತ್ರಿಗಳು ಸೂಚಿಸಿದ ತಕ್ಷಣವೇ ತಾವಿನ್ನೂ ರಾಜೀನಾಮೆ ನೀಡುವ ಕುರಿತು ಯಾವುದೇ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಹೊರಟ್ಟಿ ಸ್ಪಷ್ಟಪಡಿಸಿದ್ದಾರೆ. “ನನ್ನನ್ನು ಹುದ್ದೆಯಿಂದ ಕೆಳಗಿಳಿಸಬೇಕಾದರೆ ನಿಯಮಾನುಸಾರ ಸದನದಲ್ಲೇ ಅವಿಶ್ವಾಸ ನಿರ್ಣಯ ತರಲಿ. ಮೊದಲು ನೋಟಿಸ್ ನೀಡಲಿ, ಆ ಬಳಿಕ ಸದನ ಕೈಗೊಳ್ಳುವ ನಿರ್ಧಾರಕ್ಕೆ ನಾನು ತಲೆಬಾಗುತ್ತೇನೆ” ಎಂದು ಆಡಳಿತ ಪಕ್ಷಕ್ಕೆ ಸವಾಲು ಹಾಕಿದ್ದಾರೆ.
ಮುಂದಿನ ದಿನಗಳಲ್ಲಿ ತಮ್ಮ ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚಿಸಿ, ಕಾನೂನು ಹಾಗೂ ಸಂವಿಧಾನದ ಚೌಕಟ್ಟಿನಡಿಯಲ್ಲಿ ಮುಂದಿನ ಹೆಜ್ಜೆ ಇಡುವುದಾಗಿ ಅವರು ತಿಳಿಸಿದ್ದಾರೆ. ಸದ್ಯ ಸಭಾಪತಿ ಪೀಠದ ಈ ಹಗ್ಗಜಗ್ಗಾಟ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

