ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ಭೀಕರ ಬರ ಪರಿಸ್ಥಿತಿಯಿಂದಾಗ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರು ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸದಿರಲು ನಿರ್ಧರಿಸಿದ್ದಾರೆ. ನಾಡಿನ ಜನತೆ ಮಳೆಯಿಲ್ಲದೆ ಕಷ್ಟಪಡುತ್ತಿರುವಾಗ ಸಂಭ್ರಮಾಚರಣೆ ಮಾಡುವುದು ಸೂಕ್ತವಲ್ಲ ಎಂದು ಅವರು ಪ್ರಕಟಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಸಂದೇಶ ಹಂಚಿಕೊಂಡಿರುವ ಅವರು, ತಮ್ಮ ಜನ್ಮದಿನದ ಅಂಗವಾಗಿ ಯಾವುದೇ ರೀತಿಯ ಸಭೆ-ಸಮಾರಂಭ, ಸನ್ಮಾನ ಅಥವಾ ಬ್ಯಾನರ್ ಅಳವಡಿಕೆಯಂತಹ ಆಡಂಬರಗಳನ್ನು ಮಾಡಬಾರದು ಎಂದು ಅಭಿಮಾನಿಗಳು ಹಾಗೂ ಪಕ್ಷದ ಹಿತೈಷಿಗಳಲ್ಲಿ ವಿನಮ್ರವಾಗಿ ವಿನಂತಿಸಿಕೊಂಡಿದ್ದಾರೆ.
ಸನ್ಮಾನದ ಬದಲು ಸಂತ್ರಸ್ತರಿಗೆ ನೆರವಾಗಿ:
“ಜನರ ಸಂಕಷ್ಟದ ಸಮಯದಲ್ಲಿ ನಿಮ್ಮ ಪ್ರೀತಿ ಮತ್ತು ಅಭಿಮಾನವನ್ನು ನಾನು ಗೌರವಿಸುತ್ತೇನೆ. ಆದರೆ ಈ ಬಾರಿ ಹಾರ-ತುರಾಯಿ ಹಾಗೂ ಉಡುಗೊರೆಗಳಿಗಾಗಿ ಹಣ ವ್ಯಯಿಸುವ ಬದಲು, ಬರದಿಂದ ತತ್ತರಿಸಿರುವ ಗ್ರಾಮೀಣ ಭಾಗದ ಜನರಿಗೆ ಮತ್ತು ರೈತರಿಗೆ ಅಗತ್ಯ ನೆರವು ನೀಡುವ ಮೂಲಕ ನನ್ನ ಹುಟ್ಟುಹಬ್ಬವನ್ನು ಅರ್ಥಪೂರ್ಣ ಜನಸೇವೆಯನ್ನಾಗಿ ಪರಿವರ್ತಿಸಿ” ಎಂದು ಅವರು ಕರೆ ನೀಡಿದ್ದಾರೆ. ನಿಮ್ಮ ಶುಭಾಶಯಗಳು ಮತ್ತು ಪ್ರೀತಿಯೇ ನನಗೆ ದೊಡ್ಡ ಗೌರವ ಎಂದು ಅವರು ತಿಳಿಸಿದ್ದಾರೆ.
ಅಂದು ಲಭ್ಯವಿರುವುದಿಲ್ಲ:
ಹುಟ್ಟುಹಬ್ಬದ ದಿನದಂದು ತಾವು ಪೂರ್ವ ನಿಯೋಜಿತ ಕಾರ್ಯನಿಮಿತ್ತ ದೂರದ ಊರಿಗೆ ಪ್ರಯಾಣ ಬೆಳೆಸುತ್ತಿರುವುದಾಗಿ ಡಿಸಿಎಂ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಅಂದು ಯಾರೂ ಕೂಡ ವೈಯಕ್ತಿಕ ಭೇಟಿಗಾಗಿ ಬೆಂಗಳೂರಿನ ನಿವಾಸಕ್ಕಾಗಲಿ ಅಥವಾ ಕಚೇರಿಗಾಗಲಿ ಆಗಮಿಸಬಾರದು ಎಂದು ವಿನಂತಿಸಿದ್ದಾರೆ. ಸಚಿವರ ಈ ಜನಪರ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

