Tue. Aug 4th, 2026

ಕಾಂಗ್ರೆಸ್‌ ಸಂಪುಟವೋ, ಪೇಮೆಂಟ್ ಲಿಸ್ಟೋ? ಹೊಸ ಸಚಿವರ ಪಟ್ಟಿಗೆ ಆರ್. ಅಶೋಕ ಟೀಕೆ!

Share this with Friends

ಬೆಂಗಳೂರು: “ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ಅತ್ಯಂತ ಭ್ರಷ್ಟ ಹಾಗೂ ಅಸಮತೋಲನದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿದೆ. ಹೊಸ ಸಚಿವರನ್ನು ಆಯ್ಕೆ ಮಾಡುವ ಕನಿಷ್ಠ ಸ್ವಾತಂತ್ರ್ಯವೂ ಮುಖ್ಯಮಂತ್ರಿಗಳಿಗಿರಲಿಲ್ಲ. ಸಂಪುಟದ ಪರಮಾಧಿಕಾರವನ್ನೇ ಕಳೆದುಕೊಂಡಿರುವ ಅವರು ಕೇವಲ ‘ರಬ್ಬರ್ ಸ್ಟಾಂಪ್ ಸಿಎಂ’ ಆಗಿ ಉಳಿದಿದ್ದಾರೆ” ಇದು ಕಾಂಗ್ರೆಸ್‌ ಸಂಪುಟವೋ, ಪೇಮೆಂಟ್ ಲಿಸ್ಟೋ? ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಸಂಪುಟ ವಿಸ್ತರಣೆಯ ನಿರ್ಧಾರ, ಸಾಂವಿಧಾನಿಕ ಹುದ್ದೆಗಳ ದುರ್ಬಳಕೆ ಹಾಗೂ ಕಾವೇರಿ ಜಲವಿವಾದದ ಕುರಿತು ಸರ್ಕಾರದ ವಿರುದ್ಧ ಸರಣಿ ಆರೋಪಗಳ ಸುರಿಮಳೆಗೈದರು.

‘ವಾಷಿಂಗ್ ಮಿಷನ್’ ಮೂಲಕ ಭ್ರಷ್ಟರಿಗೆ ಮರುಸೇರ್ಪಡೆ?

“ಪರಿಶಿಷ್ಟ ಪಂಗಡಗಳ ಕಲ್ಯಾಣ ನಿಗಮದ 187 ಕೋಟಿ ರೂಪಾಯಿಗಳ ಸಾರ್ವಜನಿಕ ಹಣವನ್ನು ಲೂಟಿ ಮಾಡಿ ಚುನಾವಣೆಗೆ ಬಳಸಿರುವುದು ಜಗಜ್ಜಾಹೀರಾಗಿದೆ. ಈ ಹಗರಣದ ಹಿನ್ನೆಲೆಯಲ್ಲಿ ಜೈಲು ಪಾಲಾಗಿದ್ದ ಬಿ. ನಾಗೇಂದ್ರ ಅವರನ್ನು ಮರಳಿ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಹಿಂದಿನ ಸಿಎಂ ಅವಧಿಯಲ್ಲಿ ಜೈಲಿಗೆ ಹೋದವರಿಗೆ, ಹೊಸ ಸಿಎಂ ತಮ್ಮ ‘ವಾಷಿಂಗ್ ಮಿಷನ್’ ಬಳಸಿ ಕ್ಲೀನ್ ಚಿಟ್ ಕೊಟ್ಟಿದ್ದಾರೆಯೇ?” ಎಂದು ಅಶೋಕ ಪ್ರಶ್ನಿಸಿದರು. ಕೊನೆ ಕ್ಷಣದಲ್ಲಿ ಮಂಕಾಳು ವೈದ್ಯ ಅವರ ಹೆಸರು ಕೈಬಿಟ್ಟು ಎಸ್.ಎಸ್. ಮಲ್ಲಿಕಾರ್ಜುನ್ ಅವರ ಹೆಸರನ್ನು ಸೇರಿಸಿರುವುದು ಕಾಂಚಾಣದ ಪ್ರಭಾವಕ್ಕೆ ಸಾಕ್ಷಿ. ಇದು ಸಿಎಂ ಅವರ ಪಟ್ಟಿಯಲ್ಲ, ‘ಪೇಮೆಂಟ್ ಲಿಸ್ಟ್’ ಎಂದು ಅವರು ವ್ಯಂಗ್ಯವಾಡಿದರು.

ಮಹಿಳೆಯರಿಗೆ ಶೂನ್ಯ ಸ್ಥಾನ, ಹಿಂದುಳಿದ ಜಿಲ್ಲೆಗಳ ಕಡೆಗಣನೆ:

“ಚುನಾವಣಾ ಪೂರ್ವದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ದೊಡ್ಡ ಭಾಷಣ ಬಿಗಿದಿದ್ದ ಕಾಂಗ್ರೆಸ್ ಹೈಕಮಾಂಡ್, ಹೊಸ ಸಚಿವ ಸಂಪುಟದಲ್ಲಿ ಒಬ್ಬೇ ಒಬ್ಬ ಮಹಿಳೆಗೂ ಸ್ಥಾನ ನೀಡದೆ ನಾಡಿನ ನಾರಿಯರಿಗೆ ದ್ರೋಹ ಎಸಗಿದೆ” ಎಂದು ಅಶೋಕ ಕಿಡಿಕಾರಿದರು. ರಾಜ್ಯದಲ್ಲಿ ಶೇ. 12 ರಷ್ಟಿರುವ ಮುಸ್ಲಿಂ ಸಮುದಾಯಕ್ಕೆ 3 ಸ್ಥಾನಗಳನ್ನು ನೀಡಲಾಗಿದ್ದರೆ, ಶೇ. 50 ರಷ್ಟಿರುವ ಮಹಿಳೆಯರಿಗೆ ನೀಡಿರುವುದು ಶೂನ್ಯ ಸ್ಥಾನ! ಶಾಸಕಿ ಗಾಯತ್ರಿ ಶಾಂತಗೌಡ ಅವರು ಮನವಿ ಮಾಡಿದರೂ ಅವರಿಗೆ ಖಾತೆಯೇ ಸಿಗಲಿಲ್ಲ. ಇದರೊಂದಿಗೆ ಕರಾವಳಿ-ಮಲೆನಾಡು ಭಾಗವನ್ನು ಕಡೆಗಣಿಸಲಾಗಿದ್ದು, ಯಾದಗಿರಿ, ರಾಯಚೂರು, ವಿಜಯನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರದಂತಹ ಹಿಂದುಳಿದ ಜಿಲ್ಲೆಗಳಿಗೆ ಯಾವುದೇ ಪ್ರಾತಿನಿಧ್ಯ ನೀಡಿಲ್ಲ ಎಂದು ದೂರಿದರು.

ಸಂಪುಟ ಕಸರತ್ತಿನ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಆಂತರಿಕ ಬಂಡಾಯ ಸ್ಫೋಟಗೊಂಡಿದ್ದು, ಶಾಸಕರು ರಾಜೀನಾಮೆಗೆ ಮುಂದಾಗಿದ್ದಾರೆ. ಸ್ವಂತ ಪಕ್ಷದ ಕಾರ್ಯಕರ್ತರೇ ಮುಖ್ಯಮಂತ್ರಿಗಳ ಭಾವಚಿತ್ರಕ್ಕೆ ಮಸಿ ಬಳಿದು, ಆಕ್ರೋಶ ಹೊರಹಾಕುತ್ತಿದ್ದರೂ ಸರ್ಕಾರ ಮೌನವಾಗಿದೆ ಎಂದರು.

ಸಂವಿಧಾನದ ಆಶಯ ಗಾಳಿಗೆ:

“ಯಾವಾಗಲೂ ಕೈಯಲ್ಲಿ ಸಂವಿಧಾನದ ಪುಸ್ತಕ ಹಿಡಿದು ಓಡಾಡುವ ಕಾಂಗ್ರೆಸ್ ನಾಯಕರು, ತಮ್ಮ ಪಕ್ಷದ ಅಧಿಕೃತ ಲೆಟರ್ ಹೆಡ್‌ನಲ್ಲಿ ಸ್ಪೀಕರ್, ಉಪಸಭಾಪತಿ, ಪರಿಷತ್ತಿನ ಛೇರ್ಮನ್ ಸೇರಿದಂತೆ ಸಾಂವಿಧಾನಿಕ ಹುದ್ದೆಗಳ ಹೆಸರುಗಳನ್ನು ಉಲ್ಲೇಖಿಸುವ ಮೂಲಕ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿದ್ದಾರೆ. ಇಡೀ ವಿಧಾನಸಭೆಯನ್ನು ಕಾಂಗ್ರೆಸ್ ತನ್ನ ಸ್ವಂತ ಕಚೇರಿಯಂತೆ ಹಾಗೂ ನೌಕರರನ್ನು ನೇಮಕ ಮಾಡುವ ಪಟ್ಟಿಯಂತೆ ಬಳಸಿಕೊಳ್ಳುತ್ತಿದ್ದು, ಇದಕ್ಕಾಗಿ ಜನರ ಕ್ಷಮೆ ಯಾಚಿಸಬೇಕು” ಎಂದು ಆಗ್ರಹಿಸಿದರು.

ಕಾವೇರಿ ಗಂಡಾಂತರ: ‘ಟಿವಿಕೆ’ ಪಕ್ಷಕ್ಕೆ ಶರಣಾಗುತ್ತಾ ಕಾಂಗ್ರೆಸ್?

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವುದನ್ನು ಪ್ರಸ್ತಾಪಿಸಿದ ಅವರು, “ರಾಜ್ಯಕ್ಕೆ ಕಾವೇರಿ ನೀರು ಹಂಚಿಕೆಯಲ್ಲಿ ಭಾರಿ ಗಂಡಾಂತರ ಎದುರಾಗಿದೆ. ತಮಿಳುನಾಡಿನ ಸಿಎಂ, ಟಿವಿಕೆ (ತಮಿಳಗ ವೆಟ್ರಿ ಕಳಗಂ) ಪಕ್ಷದ ನಾಯಕ ಜೋಸೆಫ್ ವಿಜಯ್ ಅವರೊಂದಿಗೆ ಸಿದ್ದರಾಮಯ್ಯ ಸರ್ಕಾರ ರಹಸ್ಯ ಹೊಂದಾಣಿಕೆ ಮಾಡಿಕೊಂಡು ನೀರು ಹರಿಸಿದರೆ ಕರ್ನಾಟಕದ ಜನರು ಸುಮ್ಮನಿರಲ್ಲ. ಒಂದು ವೇಳೆ ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯಕ್ಕೆ ಹಿನ್ನಡೆಯಾದರೆ, ಕಾಂಗ್ರೆಸ್ ತಮಿಳುನಾಡಿನ ಟಿವಿಕೆ ಪಕ್ಷಕ್ಕೆ ಶರಣಾಗಿದೆ ಎಂದೇ ಅರ್ಥ. ಬರಗಾಲದ ನಡುವೆಯೂ ಸಿಎಂ ವಿಜಯ್ ಅವರೊಂದಿಗಿನ ಸಭೆಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಸಮ್ಮೇಳನ ಸಭಾಂಗಣ ನವೀಕರಿಸುತ್ತಿರುವುದು ಉದ್ಧಟತನದ ಪರಮಾವಧಿ” ಎಂದರು.

ಶುಕ್ರವಾರ ಮುಂಜಾನೆ ಮುಂಬರುವ ವಿಧಾನಸಭಾ ಅಧಿವೇಶನದ ಕುರಿತು ಪಕ್ಷದ ಪ್ರಮುಖರ ಸಭೆ ಕರೆಯಲಾಗಿದ್ದು, ಸದನದಲ್ಲಿ ಸರ್ಕಾರದ ಭ್ರಷ್ಟಾಚಾರ, ಸಂಪುಟ ಅಸಮತೋಲನ ಹಾಗೂ ಕಾವೇರಿ ವಿವಾದದ ವಿರುದ್ಧ ಜಂಟಿ ಹೋರಾಟದ ಕಾರ್ಯತಂತ್ರ ರೂಪಿಸಲಾಗುವುದು ಎಂದು ಅಶೋಕ ಮಾಹಿತಿ ನೀಡಿದರು

 


Share this with Friends

Related Post