Wed. Aug 5th, 2026

ಆಟೋ, ಕ್ಯಾಬ್ ಚಾಲಕರ ಹೋರಾಟಕ್ಕೆ ಜಯ:ಇಂದಿನಿಂದ ಅಕ್ರಮ ಬೈಕ್ ಟ್ಯಾಕ್ಸಿ ಜಪ್ತಿಗೆ ಸಾರಿಗೆ ಇಲಾಖೆ ನಿರ್ಧಾರ

Share this with Friends

ಬೆಂಗಳೂರು: ರಾಜಧಾನಿಯ ಆಟೋ ಮತ್ತು ಟ್ಯಾಕ್ಸಿ ಚಾಲಕರ ಬದುಕಿಗೆ ಕಂಟಕವಾಗಿದ್ದ ಅಕ್ರಮ ಬೈಕ್ ಟ್ಯಾಕ್ಸಿಗಳು ಹಾಗೂ ಆ್ಯಪ್ ಆಧಾರಿತ ಅಗ್ರಿಗೇಟರ್ ಸಂಸ್ಥೆಗಳಿಗೆ ಸಾರಿಗೆ ಇಲಾಖೆ ಬಿಗ್ ಶಾಕ್ ನೀಡಿದೆ. ಕರ್ನಾಟಕ ಆ್ಯಪ್ ಆಧಾರಿತ ಕಾರ್ಮಿಕರ ಸಂಘಟನೆ (KAWU) ಮತ್ತು ಸ್ವಾಭಿಮಾನಿ ಚಾಲಕರ ವಾಣಿಜ್ಯ ಒಕ್ಕೂಟ ನಡೆಸಿದ ಸುದೀರ್ಘ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು, ಆಗಸ್ಟ್ 5 ರಿಂದ ಸಿಲಿಕಾನ್ ಸಿಟಿಯಲ್ಲಿ ಅಕ್ರಮ ವಾಹನಗಳ ವಿರುದ್ಧ ಬೃಹತ್ ಕಾರ್ಯಾಚರಣೆ ಆರಂಭವಾಗಲಿದೆ.

ಆಟೋ ಮತ್ತು ಕ್ಯಾಬ್ ಚಾಲಕರ ಹಿತರಕ್ಷಣೆಗಾಗಿ ಆರ್‌ಟಿಒ ಮತ್ತು ಸಾರಿಗೆ ಇಲಾಖೆಯ ಉನ್ನತ ಅಧಿಕಾರಿಗಳು ಸಭೆ ನಡೆಸಿದ್ದು, ಅಕ್ರಮಗಳಿಗೆ ಬ್ರೇಕ್ ಹಾಕಲು ನಾಲ್ಕು ಪ್ರಮುಖ ಕಠಿಣ ನಿರ್ಧಾರಗಳನ್ನು ಕೈಗೊಂಡಿದ್ದಾರೆ.

ಆರ್‌ಟಿಒ ಅಧಿಕಾರಿಗಳು ಒಪ್ಪಿಕೊಂಡಿರುವ ಪ್ರಮುಖ ಆಕ್ಷನ್ ಪಾಯಿಂಟ್ಸ್:

ಬೆಂಗಳೂರಿನಾದ್ಯಂತ ದಿಢೀರ್ ದಾಳಿ: ಖಾಸಗಿ ನೋಂದಣಿ (ವೈಟ್ ಬೋರ್ಡ್) ಹೊಂದಿದ್ದರೂ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತಿರುವ ಎಲ್ಲಾ ಅಕ್ರಮ ಬೈಕ್ ಟ್ಯಾಕ್ಸಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ವಿಶೇಷ ಆರ್‌ಟಿಒ ತುಕಡಿಗಳು ಕಡ್ಡಾಯವಾಗಿ ಕಣಕ್ಕಿಳಿಯಲಿವೆ.

3 ತಿಂಗಳು ಜಪ್ತಿ, ಆರ್‌ಸಿ-ಡಿಎಲ್ ಬ್ಲ್ಯಾಕ್‌ಲಿಸ್ಟ್: ದಾಳಿ ವೇಳೆ ಸಿಕ್ಕಿಬೀಳುವ ವಾಹನಗಳನ್ನು ಕನಿಷ್ಠ 3 ತಿಂಗಳ ಕಾಲ ಆರ್‌ಟಿಒ ಕಸ್ಟಡಿಯಲ್ಲಿ ಇಡಲಾಗುವುದು. ನಿಯಮ ಉಲ್ಲಂಘಿಸುವ ಸವಾರರ ವಾಹನ ನೋಂದಣಿ ಪತ್ರ (RC) ಹಾಗೂ ಚಾಲನಾ ಪರವಾನಗಿಯನ್ನು (DL) ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ.

‘ಒನ್ ಸಿಟಿ, ಒನ್ ಫೇರ್’ ಕಡ್ಡಾಯ: ಎಲ್ಲಾ ಆ್ಯಪ್ ಆಧಾರಿತ ಕಂಪನಿಗಳು ಇನ್ಮುಂದೆ ಸರ್ಕಾರದ ಏಕರೂಪದ ದರ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಬಾಹಿರವಾಗಿ ಕಡಿಮೆ ದರ ನಿಗದಿಪಡಿಸಿ ಸಾಮಾನ್ಯ ಚಾಲಕರ ಹೊಟ್ಟೆಯರ ಹಸಿವು ಹೆಚ್ಚಿಸುವಂತಿಲ್ಲ.

ಪ್ಲೇ ಸ್ಟೋರ್‌ನಿಂದ ಆ್ಯಪ್ ಡಿಲೀಟ್ ಎಚ್ಚರಿಕೆ: ರಾಜ್ಯ ಸರ್ಕಾರದ ಸಾರಿಗೆ ನಿಯಮಗಳನ್ನು ಗಾಳಿಗೆ ತೂರಿ ದರ್ಪ ತೋರುವ ಕಂಪನಿಗಳ ಮೊಬೈಲ್ ಆ್ಯಪ್‌ಗಳನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಿಂದಲೇ ತೆಗೆದುಹಾಕಲು ತಾಂತ್ರಿಕ ಹಾಗೂ ಕಾನೂನು ಕ್ರಮ ಜರುಗಿಸಲಾಗುವುದು.

“ನಮ್ಮ ಒಗ್ಗಟ್ಟೇ ನಮ್ಮ ಬಲ. ನ್ಯಾಯಸಮ್ಮತ ಆದಾಯಕ್ಕಾಗಿ ಧ್ವನಿ ಎತ್ತಿದ ಪ್ರತಿಯೊಬ್ಬ ಚಾಲಕನಿಗೂ ಧನ್ಯವಾದಗಳು” ಎಂದು ಸ್ವಾಭಿಮಾನಿ ಚಾಲಕರ ಒಕ್ಕೂಟದ ಮುಖಂಡರು ಜಯಭೇರಿ ಬಾರಿಸಿದ್ದಾರೆ. ಈ ನಿರ್ಧಾರದಿಂದಾಗಿ ಬೆಂಗಳೂರಿನ ಲಕ್ಷಾಂತರ ಆಟೋ ಮತ್ತು ಕ್ಯಾಬ್ ಚಾಲಕರು ನಿಟ್ಟುಸಿರು ಬಿಡುವಂತಾಗಿದೆ.

 

 


Share this with Friends

Related Post