Fri. Aug 21st, 2026

ನಕಲಿ ಮೆಡಿಸಿನ್ ಮಾಫಿಯಾ ಹೆಡೆಮುರಿ ಕಟ್ಟಲು SIT ರಚನೆ: ಮಾಹಿತಿ ನೀಡಿದ್ರೆ ₹50,000 ಬಹುಮಾನ ಘೋಷಣೆ

Share this with Friends

ಬೆಂಗಳೂರು: ಅನುಮಾನಾಸ್ಪದ ಔಷಧಿ ಮರುಪ್ಯಾಕಿಂಗ್ ದಂಧೆಗಳ ಬಗ್ಗೆ  ನಂಬಲರ್ಹ ಮಾಹಿತಿ ನೀಡುವ ನಾಗರಿಕರಿಗೆ ₹10,000 ದಿಂದ ₹50,000 ವರೆಗೆ ನಗದು ಬಹುಮಾನ ನೀಡಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಪ್ರಕಟಿಸಿದ್ದಾರೆ.

ರಾಜ್ಯದಲ್ಲಿ ತಲ್ಲಣ ಮೂಡಿಸಿರುವ ₹5 ಕೋಟಿ ಮೌಲ್ಯದ ನಕಲಿ ಔಷಧಿ ಜಾಲದ ಬೆನ್ನುಬಿದ್ದಿರುವ ಆರೋಗ್ಯ ಇಲಾಖೆ, ಇಂದು ತನಿಖೆಯನ್ನು ತೀವ್ರಗೊಳಿಸಲು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಈ ಕುರಿತು ಇಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಸಚಿವ ಯು.ಟಿ. ಖಾದರ್, “ಇದು ಕೇವಲ ಸ್ಥಳೀಯ ದಂಧೆಯಲ್ಲ, ದೇಶದಾದ್ಯಂತ ಹರಡಿರುವ ಜಾಲವಾಗಿದೆ. ಹೀಗಾಗಿ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಇಬ್ಬರು ಇಲಾಖೆಯ ತಜ್ಞರನ್ನು ಒಳಗೊಂಡ ವಿಶೇಷ ತನಿಖಾ ತಂಡ (SIT) ರಚಿಸಲು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಮಾತುಕತೆ ನಡೆಸಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಪತ್ರ ಹಾಗೂ ಜಂಟಿ ಕಾರ್ಯಾಚರಣೆ:

ದಂಧೆಯ ಮೂಲ ತಾಣಗಳಾದ ತೆಲಂಗಾಣ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲು ಮತ್ತು ಅಲ್ಲಿನ ನಕಲಿ ಉತ್ಪಾದನಾ ಘಟಕಗಳನ್ನು ತಕ್ಷಣವೇ ಮುಚ್ಚಿಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಈ ಜಾಲದ ಕಿಂಗ್‌ಪಿನ್ ದುಬೈನಿಂದ ಕಾರ್ಯಾಚರಣೆ ನಡೆಸುತ್ತಿರುವುದು ಪತ್ತೆಯಾಗಿದ್ದು, ಈಗಾಗಲೇ ಬಿಡದಿಯ ಫಾರ್ಮ್‌ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರಭುದೇವ್ ಗೌಡ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ನಕಲಿ ಸಿಲಿಂಡರ್, ಪ್ಯಾಕೇಜಿಂಗ್ ಯಂತ್ರಗಳು ಮತ್ತು ಫಿಜರ್‌ನಂತಹ ಬಹುರಾಷ್ಟ್ರೀಯ ಕಂಪನಿಗಳ ನಕಲಿ ಲೇಬಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

6.5 ಕೋಟಿ ಜನರಿಗೆ ಸಚಿವರ ಮುಕ್ತ ಮನವಿ:

“ನಮ್ಮ ಆರೋಗ್ಯ ಮತ್ತು ಆಹಾರ ಸುರಕ್ಷತಾ ಇಲಾಖೆಯಲ್ಲಿ ಕೇವಲ 200 ಸಿಬ್ಬಂದಿ ಮಾತ್ರ ಇದ್ದಾರೆ. 6.5 ಕೋಟಿ ಜನಸಂಖ್ಯೆ ಇರುವ ನಮ್ಮ ರಾಜ್ಯದಲ್ಲಿ ಕೇವಲ ಅಧಿಕಾರಿಗಳಿಂದಲೇ ಇಡೀ ದಂಧೆಯನ್ನು ಪತ್ತೆಹಚ್ಚುವುದು ಕಷ್ಟಸಾಧ್ಯ” ಎಂದು ಖಾದರ್ ಅಸಹಾಯಕತೆ ವ್ಯಕ್ತಪಡಿಸಿದರು. ಆದ್ದರಿಂದ ಸಾರ್ವಜನಿಕರು ತಮ್ಮ ಸುತ್ತಮುತ್ತ ನಡೆಯುವ ಇಂತಹ ಅನುಮಾನಾಸ್ಪದ ಔಷಧಿ ಮರುಪ್ಯಾಕಿಂಗ್ ದಂಧೆಗಳ ಬಗ್ಗೆ ಮಾಹಿತಿ ನೀಡಬೇಕು. ನಂಬಲರ್ಹ ಮಾಹಿತಿ ನೀಡುವ ನಾಗರಿಕರಿಗೆ ₹10,000 ದಿಂದ ₹50,000 ವರೆಗೆ ನಗದು ಬಹುಮಾನ ನೀಡಲಾಗುವುದು ಮತ್ತು ಅವರ ಹೆಸರನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು ಎಂದು ಭರವಸೆ ನೀಡಿದ್ದಾರೆ.

 


Share this with Friends

Related Post