ಬೆಂಗಳೂರು:ಕಾಂಗ್ರೆಸ್ ಪಕ್ಷದ ರಾಷ್ಟ್ರೀಯತೆ ಮತ್ತು ವಂದೇ ಮಾತರಂ ಗೀತೆಯ ಇತಿಹಾಸವನ್ನು ಪ್ರಶ್ನಿಸುತ್ತಿರುವ ಬಿಜೆಪಿ ನಾಯಕರಿಗೆ ತೀಕ್ಷ್ಣ ತಿರುಗೇಟು ನೀಡಿರುವ ಹಿರಿಯ ನಾಯಕ ಹಾಗೂ ಸಚಿವ ರಾಮಲಿಂಗಾರೆಡ್ಡಿ, “ಬಿಜೆಪಿಯವರಿಂದ ನಾವು ದೇಶಭಕ್ತಿಯ ಪಾಠ ಕಲಿಯುವ ಅಗತ್ಯವಿಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿ ಇಂದಿಗೆ 53 ವರ್ಷಗಳು ಸಂದಿವೆ. ಅಂದಿನಿಂದಲೂ ಕಾಂಗ್ರೆಸ್ ಕಾರ್ಯಕರ್ತರು ನಿರಂತರವಾಗಿ ವಂದೇ ಮಾತರಂ ಹಾಡುತ್ತಲೇ ಬಂದಿದ್ದಾರೆ. ವಿಶೇಷವಾಗಿ ಕಾಂಗ್ರೆಸ್ ಸೇವಾದಳದ ವೇದಿಕೆಗಳಲ್ಲಿ ಈ ಗೀತೆ ಸದಾ ಮೊಳಗುತ್ತಿತ್ತು. ಆದರೆ, ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಆರಂಭದ ದಿನಗಳಲ್ಲಿ ಬಿಜೆಪಿಯವರು ವಂದೇ ಮಾತರಂ ಹಾಡುತ್ತಲೇ ಇರಲಿಲ್ಲ” ಎಂದು ಟೀಕಿಸಿದರು.
ಬ್ರಿಟಿಷರ ಜೊತೆಗಿನ ನಂಟು:
ಬಿಜೆಪಿಯ ಸೈದ್ಧಾಂತಿಕ ಹಿನ್ನೆಲೆಯನ್ನು ತರಾಟೆಗೆ ತೆಗೆದುಕೊಂಡ ಸಚಿವರು, “ಬಿಜೆಪಿ ನಾಯಕರ ಪೂರ್ವಜರು ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಭಾರತೀಯರ ಪರವಾಗಿ ನಿಲ್ಲದೆ ಬ್ರಿಟಿಷರೊಂದಿಗೆ ಗುರುತಿಸಿಕೊಂಡಿದ್ದರು. ಅಷ್ಟೇ ಅಲ್ಲದೆ, ದೇಶವನ್ನು ಇಬ್ಬಾಗ ಮಾಡಿದ ಇತಿಹಾಸ ಕೂಡ ಅವರದೇ ಪೂರ್ವಜರಿಗೆ ಸೇರಿದ್ದಾಗಿದೆ. ಜನಸಂಘದ ಸ್ಥಾಪಕರಾಗಿದ್ದ ಶ್ಯಾಮ ಪ್ರಸಾದ್ ಮುಖರ್ಜಿ ಅವರು ಅಂದು ಇಸ್ಲಾಂ ಸರ್ಕಾರದ ಸಚಿವರಾಗಿ ಕಾರ್ಯನಿರ್ವಹಿಸಿದ್ದರು ಎಂಬುದನ್ನು ಮರೆಯಬಾರದು” ಎಂದು ಇತಿಹಾಸದ ಪ್ರಸಂಗಗಳನ್ನು ಉಲ್ಲೇಖಿಸಿ ಕಟುವಾಗಿ ಟೀಕಿಸಿದರು.
ಹನೂರು ಅರಣ್ಯ ಘಟನೆ: ಶನಿವಾರ ಮ್ಯಾಜಿಸ್ಟ್ರೇಟ್ ತನಿಖಾ ವರದಿ ಲಭ್ಯ
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಇತ್ತೀಚೆಗೆ (ಆಗಸ್ಟ್ 15) ನಡೆದ ಗುಂಡಿನ ಚಕಮಕಿ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ತನಿಖೆ ನಡೆಯುತ್ತಿದ್ದು, ಮುಂಬರುವ ಶನಿವಾರದೊಳಗೆ ಅಧಿಕೃತ ವರದಿ ಕೈಸೇರಲಿದೆ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಪ್ರಕರಣದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದ ಸಚಿವರು, “ಘಟನೆ ಸಂಭವಿಸಿದ ತಕ್ಷಣವೇ ಗೌರವಾನ್ವಿತ ಮುಖ್ಯಮಂತ್ರಿಗಳು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದರು. ಈ ತನಿಖೆಯ ಅಂತಿಮ ವರದಿ ಶನಿವಾರ ಬರಲಿದ್ದು, ಅದರ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ನಮ್ಮ ಇಲಾಖೆಯ ಅಧಿಕಾರಿಗಳು ಅಥವಾ ಸಿಬ್ಬಂದಿ ತಪ್ಪು ಮಾಡಿರುವುದು ವರದಿಯಲ್ಲಿ ದೃಢಪಟ್ಟರೆ, ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲಾಗುವುದು” ಎಂದು ಭರವಸೆ ನೀಡಿದರು.
ಇಲಾಖಾ ಕೊಠಡಿ ದ್ವಂಸ ಹಾಗೂ ಜಿಲೆಟಿನ್ ಬಳಕೆ:
ಸ್ಥಳೀಯರ ಆಕ್ರೋಶದ ವೇಳೆ ಇಲಾಖೆಯ ಆಸ್ತಿಗೆ ಹಾನಿಯಾಗಿರುವುದನ್ನು ಉಲ್ಲೇಖಿಸಿದ ಅವರು, “ಪ್ರತಿಭಟನಾಕಾರರು ನಮ್ಮ ಇಲಾಖೆಯ ಸಿಬ್ಬಂದಿಗಳ ವಸತಿ ಕೊಠಡಿಗಳನ್ನು ಧ್ವಂಸಗೊಳಿಸಿದ್ದಾರೆ. ಅಷ್ಟೇ ಅಲ್ಲದೆ, ಈ ದಾಳಿಯ ವೇಳೆ ಜಿಲೆಟಿನ್ ಕಡ್ಡಿಗಳನ್ನು (ಸ್ಫೋಟಕ) ಬಳಸಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಪ್ರಾಥಮಿಕ ವರದಿ ನೀಡಿದ್ದಾರೆ. ಈ ಎಲ್ಲಾ ಆಯಾಮಗಳನ್ನು ತನಿಖಾ ತಂಡವು ಕೂಲಂಕಷವಾಗಿ ಪರಿಶೀಲಿಸುತ್ತಿದೆ” ಎಂದರು

