Fri. Aug 21st, 2026

ಬಂಡೀಪುರ ಅರಣ್ಯ ಇಲಾಖೆ ಭರ್ಜರಿ ಕಾರ್ಯಾಚರಣೆ: ಫಾರ್ಮ್‌ಹೌಸ್ ಉಸ್ತುವಾರಿ ಬಂಧನ

Share this with Friends

ಬಂಡೀಪುರ:ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಬಚ್ಚಿಟ್ಟಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ವನ್ಯಜೀವಿಗಳ ಅವಶೇಷಗಳು (ಟ್ರೋಫಿ) ಹಾಗೂ ಅತ್ಯಾಧುನಿಕ ವಿದೇಶಿ ಶಸ್ತ್ರಾಸ್ತ್ರಗಳ ಬೃಹತ್ ದಾಸ್ತಾನನ್ನು ಜಪ್ತಿ ಮಾಡಿದ್ದಾರೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಕುಂದುಕೆರೆ ವಲಯದ ಕೆಬ್ಬೆಪುರ ಗ್ರಾಮದಲ್ಲಿರುವ ಖಾಸಗಿ ಫಾರ್ಮ್‌ಹೌಸ್ ಒಂದರಲ್ಲಿ ವನ್ಯಪ್ರಾಣಿಗಳ ಅಂಗಾಂಗ ಹಾಗೂ ಅಕ್ರಮ ಆಯುಧಗಳನ್ನು ಸಂಗ್ರಹಿಸಿಡಲಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ನಂಬಲರ್ಹ ಮಾಹಿತಿ ಲಭ್ಯವಾಗಿತ್ತು. ಈ ಖಚಿತ ಸುಳಿವಿನ ಆಧಾರದ ಮೇಲೆ ಅರಣ್ಯ ಇಲಾಖೆಯ ವಿಶೇಷ ಪಡೆ ತಕ್ಷಣವೇ ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿ, ಇಂಚಿಂಚೂ ಜಾಗವನ್ನು ತಪಾಸಣೆ ನಡೆಸಿತು.

ಸಿಕ್ಕಿಬಿದ್ದ ಆಧುನಿಕ ಆಯುಧಗಳು ಮತ್ತು ಪ್ರಾಣಿಗಳ ಚರ್ಮ:

ಅಧಿಕಾರಿಗಳು ನಡೆಸಿದ ಈ ತೀವ್ರ ಶೋಧ ಕಾರ್ಯದಲ್ಲಿ ವಿವಿಧ ಜಾತಿಯ ಅಪರೂಪದ ವನ್ಯಪ್ರಾಣಿಗಳ ಸಂಸ್ಕರಿಸಿದ ಮತ್ತು ಹಸಿ ಚರ್ಮಗಳು, ಬೊಂಬುಗಳು ಸೇರಿದಂತೆ ಹಲವು ಪ್ರಾಣಿಗಳ ಅವಶೇಷಗಳು ಸಿಕ್ಕಿಬಿದ್ದಿವೆ. ಇದರೊಂದಿಗೆ ಬೇಟೆಗೆ ಬಳಸಲಾಗುತ್ತಿದ್ದ ವಿವಿಧ ರೀತಿಯ ಸುಧಾರಿತ ಕೋವಿಗಳು, ಆಧುನಿಕ ವಿದೇಶಿ ನಿರ್ಮಿತ ಆಯುಧಗಳು ಹಾಗೂ ಅಪಾರ ಪ್ರಮಾಣದ ಲೈವ್ ಮದ್ದುಗುಂಡುಗಳು (ಕಾಡುತೂಸು) ಪತ್ತೆಯಾಗಿವೆ. ಈ ಸಂಬಂಧ ಫಾರ್ಮ್‌ಹೌಸ್‌ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸುರೇಶ್ ಪರಿಯಾರ್ ಎಂಬಾತನನ್ನು ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವನ್ಯಜೀವಿ ಕಾಯ್ದೆಯಡಿ ಕೇಸ್ ದಾಖಲು:

ಈ ಗಂಭೀರ ಅಪರಾಧಕ್ಕೆ ಸಂಬಂಧಿಸಿದಂತೆ ಕುಂದುಕೆರೆ ವನ್ಯಜೀವಿ ವಲಯದಲ್ಲಿ ವನ್ಯಜೀವಿ (ರಕ್ಷಣಾ) ಕಾಯ್ದೆ 1972 ರ ಅಡಿಯಲ್ಲಿ ಅಧಿಕೃತವಾಗಿ ವನ್ಯಜೀವಿ ಅಪರಾಧ ವರದಿಯನ್ನು ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ತೀವ್ರತೆಯನ್ನು ಗಣನೆಗೆ ತೆಗೆದುಕೊಂಡಿರುವ ಅರಣ್ಯ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು, ಈ ಜಾಲದ ಹಿಂದೆ ಯಾರಿದ್ದಾರೆ ಮತ್ತು ವನ್ಯಜೀವಿಗಳನ್ನು ಬೇಟೆಯಾಡಲಾಗುತ್ತಿತ್ತೇ ಎಂಬ ಕುರಿತು ಸಮಗ್ರ ಹಾಗೂ ಆಳವಾದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಉನ್ನತಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

 


Share this with Friends

Related Post