Fri. Aug 21st, 2026

ಕಪ್ಪು ಟೀಶರ್ಟ್‌ ಧರಿಸಿ ಬಿಜೆಪಿ ಶಾಸಕರ ಪ್ರತಿಭಟನೆ: ವಿಧಾನಸೌಧದಲ್ಲಿ ಮಾರ್ಷಲ್‌ಗಳೊಂದಿಗೆ ನೂಕಾಟ, ವಾಗ್ವಾದ

Share this with Friends

ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಶಾಸಕರು ಇಂದು ಕಪ್ಪು ಟೀಶರ್ಟ್‌ ಧರಿಸಿ ವಿನೂತನ ಪ್ರತಿಭಟನೆ ನಡೆಸಿದರು. ಶಾಸಕರ ಭವನದ ಆವರಣದಲ್ಲಿರುವ ಮಹರ್ಷಿ ವಾಲ್ಮೀಕಿ ಪ್ರತಿಮೆ ಮುಂಭಾಗ ಜಮಾಯಿಸಿದ ಪ್ರತಿಪಕ್ಷಗಳ ನಾಯಕರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ನಂತರ ಶಾಸಕರು ವಿಧಾನಸೌಧದ ಒಳಗೆ ಪ್ರವೇಶಿಸಲು ಯತ್ನಿಸಿದಾಗ, ಅವರು ಕಪ್ಪು ಟೀಶರ್ಟ್‌ ಧರಿಸಿರುವುದನ್ನು ಗಮನಿಸಿದ ಮಾರ್ಷಲ್‌ಗಳು ಮುಖ್ಯ ದ್ವಾರದಲ್ಲೇ ಅವರನ್ನು ತಡೆದರು. ಈ ವೇಳೆ ಮಾರ್ಷಲ್‌ಗಳು ಮತ್ತು ಬಿಜೆಪಿ ಶಾಸಕರ ನಡುವೆ ತೀವ್ರ ನೂಕಾಟ, ತಳ್ಳಾಟ ಹಾಗೂ ಗದ್ದಲ ಉಂಟಾಯಿತು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಜನಪ್ರತಿನಿಧಿಗಳು, ಭ್ರಷ್ಟ ಸಚಿವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದರು. ವಿಧಾನಸೌಧದ ಆವರಣದಲ್ಲಿ ‘ಭಾರತ್ ಮಾತಾ ಕೀ ಜೈ’ ಎನ್ನುವ ಘೋಷಣೆಗಳು ಮೊಳಗಿದವು.

ಈ ಹಠಾತ್ ಪ್ರತಿಭಟನೆಯ ಜಂಟಿ ನೇತೃತ್ವವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವಹಿಸಿದ್ದರು.

ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ – ಬಿ.ವೈ. ವಿಜಯೇಂದ್ರ:

ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, “ವಾಲ್ಮೀಕಿ ನಿಗಮದ ಬಹುಕೋಟಿ ಅಕ್ರಮ ಹಗರಣದ ನೈತಿಕ ಹೊಣೆ ಹೊತ್ತು ಸಚಿವ ನಾಗೇಂದ್ರ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ಹಿಂದೆ ಸಚಿವ ಸ್ಥಾನದಿಂದ ಹೊರಗುಳಿದಿದ್ದ ನಾಗೇಂದ್ರ ಅವರಿಗೆ ಪ್ರಕರಣದಲ್ಲಿ ಕ್ಲೀನ್‌ಚಿಟ್ ಸಿಕ್ಕಿದೆಯೇ? ಇಲ್ಲದಿದ್ದರೂ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಂಡಿದ್ದು ಏಕೆ?” ಎಂದು ಸರ್ಕಾರವನ್ನು ಪ್ರಶ್ನಿಸಿದರು. ಸಚಿವರ ರಾಜೀನಾಮೆ ಪಡೆಯುವವರೆಗೂ ಬಿಜೆಪಿ ವಿಧಾನಮಂಡಲದ ಒಳಗೂ ಮತ್ತು ಹೊರಗೂ ತನ್ನ ಹೋರಾಟವನ್ನು ತೀವ್ರಗೊಳಿಸಲಿದೆ ಎಂದು ಅವರು ಎಚ್ಚರಿಸಿದರು.

ದಲಿತರ ಹಣ ಲೂಟಿ ಹೊಡೆದಿದ್ದಾರೆ – ಆರ್. ಅಶೋಕ್:

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, “ಕಾಂಗ್ರೆಸ್ ಸರ್ಕಾರ ಹಾಗೂ ಸಚಿವ ನಾಗೇಂದ್ರ ಅವರು ಸೇರಿ ದಲಿತ ಸಮುದಾಯಕ್ಕೆ ಸೇರಿದ ಸುಮಾರು 189 ಕೋಟಿ ರೂಪಾಯಿ ಹಣವನ್ನು ಲೂಟಿ ಮಾಡಿದ್ದಾರೆ” ಎಂದು ಗಂಭೀರ ಆರೋಪ ಮಾಡಿದರು. ಸಚಿವರ ಮೇಲೆ ಈಗಾಗಲೇ ಹಲವು ಗಂಭೀರ ಪ್ರಕರಣಗಳಿದ್ದು, ಅವರು ನೈತಿಕವಾಗಿ ಸಚಿವ ಸ್ಥಾನದಲ್ಲಿ ಮುಂದುವರಿಯಲು ಅರ್ಹರಲ್ಲ. ಭ್ರಷ್ಟ ಸಚಿವರನ್ನು ವಜಾಗೊಳಿಸುವವರೆಗೂ ಸದನವನ್ನು ಸುಗಮವಾಗಿ ನಡೆಯಲು ಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಈ ಹಠಾತ್ ಪ್ರತಿಭಟನೆಯಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಪಕ್ಷದ ಪ್ರಮುಖ ಶಾಸಕರು ಮತ್ತು ಸಂಸದರು ಭಾಗವಹಿಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು

 

 


Share this with Friends

Related Post