ಬೆಂಗಳೂರು: ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ರೂಪ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಜಿಲ್ಲೆಗಳ ಪ್ರವಾಸೋದ್ಯಮ ಸಾಮರ್ಥ್ಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಸಿದ್ಧವಾಗುತ್ತಿರುವ ‘ಕರಾವಳಿ–ಮಲೆನಾಡು ಪ್ರವಾಸೋದ್ಯಮ ನೀತಿ’ಯ ಕರಡು ಪ್ರತಿಯನ್ನು ಮುಂಬರುವ ಸೆಪ್ಟೆಂಬರ್ 7ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಪ್ರಕಟಿಸಿದ್ದಾರೆ.
ವಿಧಾನಸೌಧದಲ್ಲಿ ನಡೆದ ಕರಾವಳಿ ಮತ್ತು ಮಲೆನಾಡು ಭಾಗದ ಜನಪ್ರತಿನಿಧಿಗಳ ಮಹತ್ವದ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು. ಹೊಸ ನೀತಿಯಲ್ಲಿ ಸೇರಿಸಬೇಕಾದ ಪ್ರಮುಖ ಅಂಶಗಳು, ಹೂಡಿಕೆಗೆ ಇರುವ ಮುಕ್ತ ಅವಕಾಶಗಳು ಹಾಗೂ ಪ್ರಸ್ತುತ ಎದುರಾಗುತ್ತಿರುವ ನಿಯಂತ್ರಣಾತ್ಮಕ ಸವಾಲುಗಳ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು. ಕಡಲತೀರ, ಧಾರ್ಮಿಕ ಕೇಂದ್ರಗಳು, ಸಾಂಸ್ಕೃತಿಕ ಪರಂಪರೆ ಹಾಗೂ ಪ್ರಕೃತಿ ಸೌಂದರ್ಯವನ್ನು ಬಳಸಿಕೊಂಡು ಸ್ಥಳೀಯ ಉದ್ಯೋಗಾವಕಾಶ ಮತ್ತು ಆರ್ಥಿಕ ಪ್ರಗತಿಯನ್ನು ಸಾಧಿಸುವ ನಿಟ್ಟಿನಲ್ಲಿ ಈ ನೀತಿ ಸಹಕಾರಿಯಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯ ಬಳಿಕ ಮಾತನಾಡಿದ ಸಚಿವ ಕೆ.ಜೆ. ಜಾರ್ಜ್, “ಕರಾವಳಿ ಮತ್ತು ಮಲೆನಾಡು ಪ್ರದೇಶಗಳು ರಾಜ್ಯದ ಪ್ರವಾಸೋದ್ಯಮದ ದಿಕ್ಸೂಚಿಗಳಾಗಿವೆ. ಇಲ್ಲಿನ ನೈಸರ್ಗಿಕ ಸಂಪತ್ತನ್ನು ಸದುಪಯೋಗಪಡಿಸಿಕೊಳ್ಳಲು ಸ್ಥಳೀಯ ಅಗತ್ಯಗಳು ಮತ್ತು ಜನಪ್ರತಿನಿಧಿಗಳ ಪ್ರಾಯೋಗಿಕ ಸಲಹೆಗಳನ್ನು ಒಳಗೊಂಡ ನೀತಿ ರೂಪಿಸಲಾಗುತ್ತಿದೆ. ಸಭೆಯಲ್ಲಿ ಬಂದಿರುವ ಎಲ್ಲಾ ಪ್ರಮುಖ ಮುಖ್ಯಾಂಶಗಳನ್ನು ಪರಿಶೀಲಿಸಿ ಕರಡಿನಲ್ಲಿ ಸೇರಿಸಲಾಗುವುದು,” ಎಂದರು. ಈ ಕರಡು ಸಿದ್ಧವಾದ ಬಳಿಕ ಮುಂದಿನ ಹಂತದಲ್ಲಿ ಮತ್ತೊಂದು ಸುತ್ತಿನ ಸಮಾಲೋಚನೆ ನಡೆಸಿ ಅಂತಿಮ ರೂಪ ನೀಡಲಾಗುವುದು. ಅಲ್ಲದೆ, ಮಂಗಳೂರಿನಲ್ಲಿ ಶೀಘ್ರದಲ್ಲೇ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ನೂತನ ನೀತಿಯ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಅವರು ಸುಳಿವು ನೀಡಿದರು.
CRZ ಮತ್ತು ಅರಣ್ಯ ನಿಯಮಗಳ ಸವಾಲು:
ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮಾತನಾಡಿ, ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಅಪಾರ ಅವಕಾಶಗಳಿದ್ದರೂ CRZ (ಕರಾವಳಿ ನಿಯಂತ್ರಣ ವಲಯ), ಪರಿಸರ ಸೂಕ್ಷ್ಮ ವಲಯ ಹಾಗೂ ಅರಣ್ಯ ಇಲಾಖೆಯ ಕಠಿಣ ನಿಯಮಗಳಿಂದಾಗಿ ಹಲವು ಯೋಜನೆಗಳ ಅನುಷ್ಠಾನಕ್ಕೆ ಹಿನ್ನಡೆಯಾಗುತ್ತಿದೆ ಎಂದರು. ಪ್ರಕೃತಿ ಸಂರಕ್ಷಣೆಗೆ ಧಕ್ಕೆಯಾಗದಂತೆ ಈ ನಿಯಮಗಳನ್ನು ಮರುಪರಿಶೀಲಿಸಿ, ಅನುಮತಿ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಎಂದು ಅವರು ಸಲಹೆ ನೀಡಿದರು.
ಸಿಂಗಲ್ ವಿಂಡೋ ಹಾಗೂ ಹೋಟೆಲ್ ಉದ್ಯಮಕ್ಕೆ ಪೂರಕ ವಾತಾವರಣ:
ಶಾಸಕ ವಿ. ಸುನಿಲ್ ಕುಮಾರ್ ಅವರು, ಕರಾವಳಿ ಭಾಗದಲ್ಲಿ ಹೊಸ ಹೂಡಿಕೆಗಳನ್ನು ಆಕರ್ಷಿಸಲು ‘ಸಿಂಗಲ್ ವಿಂಡೋ’ (ಏಕಗವಾಕ್ಷಿ) ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಪ್ರಮುಖ ಸಲಹೆ ನೀಡಿದರು. ಇದೇ ವೇಳೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಮಾತನಾಡಿ, ಜಿಲ್ಲೆಯಲ್ಲಿ ಹೋಟೆಲ್ ಉದ್ಯಮ ಹಾಗೂ ಪ್ರವಾಸಿ ಚಟುವಟಿಕೆಗಳ ವಿಸ್ತರಣೆಗೆ ಪೂರಕ ವಾತಾವರಣ ನಿರ್ಮಿಸುವ ಅಗತ್ಯವಿದೆ ಎಂದರು. ಪ್ರವಾಸಿಗರ ಅಗತ್ಯತೆಗಳಿಗೆ ತಕ್ಕಂತೆ ಕಾರ್ಯಾಚರಣೆಯ ಸಮಯ ಮತ್ತು ಪೂರಕ ವ್ಯವಸ್ಥೆಗಳನ್ನು ಕಲ್ಪಿಸಲು ಹೊಸ ನೀತಿಯಲ್ಲಿ ಸೂಕ್ತ ಅವಕಾಶ ನೀಡಬೇಕು ಎಂದು ಕೋರಿದರು.
ಸಭೆಯಲ್ಲಿ ಪ್ರವಾಸೋದ್ಯಮ ಇಲಾಹೆ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಸೇರಿದಂತೆ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕರುಗಳಾದ ಮಂಜುನಾಥ ಭಂಡಾರಿ, ಐವನ್ ಡಿಸೋಜಾ, ಹರೀಶ್ ಪೂಂಜಾ, ಉಮಾನಾಥ್ ಎ. ಕೋಟ್ಯಾನ್, ಭರತ್ ಶೆಟ್ಟಿ ವೈ., ಡಿ. ವೇದವ್ಯಾಸ ಕಾಮತ್, ರಾಜೇಶ್ ನಾಯಕ್ ಯು., ಭಾಗೀರಥಿ ಮುರುಳ್ಯ, ಅಶೋಕ್ ಕುಮಾರ್ ರೈ, ಗುರುರಾಜ್… ಶೆಟ್ಟಿ ಗಂಟಿಹೊಳೆ, ಎ. ಕಿರಣ್ ಕುಮಾರ್ ಕೊಡ್ಗಿ, ಯಶ್‌ಪಾಲ್ ಸುವರ್ಣ ಮತ್ತು ಗುರ್ಮೆ ಸುರೇಶ್ ಶೆಟ್ಟಿ ಉಪಸ್ಥಿತರಿದ್ದು, ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಅಗತ್ಯವಿರುವ ಪ್ರಮುಖ ಸಲಹೆಗಳನ್ನು ಹಂಚಿಕೊಂಡರು

