Fri. Aug 21st, 2026

ಕಿಯೋನಿಕ್ಸ್ ಸಂಸ್ಥೆಯಿಂದ ಸ್ವದೇಶಿ ‘KEO AI PC’ ಅನಾವರಣ: ಪ್ರಿಯಾಂಕ್ ಖರ್ಗೆ

Share this with Friends

ಬೆಂಗಳೂರು: ದೇಶದ ಐಟಿ ಹಬ್ ಖ್ಯಾತಿಯ ಕರ್ನಾಟಕದ ತಂತ್ರಜ್ಞಾನ ಮತ್ತು ನವೋದ್ಯಮ ಸಾಮರ್ಥ್ಯಕ್ಕೆ ಮತ್ತೊಂದು ಐತಿಹಾಸಿಕ ಗರಿ ಲಭಿಸಿದೆ. ರಾಜ್ಯ ಸರ್ಕಾರದ ಸ್ವಾಮ್ಯದ ಕಿಯೋನಿಕ್ಸ್ (KEONICS) ಸಂಸ್ಥೆಯು ಸಂಪೂರ್ಣ ಸ್ವದೇಶಿ ತಂತ್ರಜ್ಞಾನದ ಆಧಾರದಲ್ಲಿ ಸಿದ್ಧಪಡಿಸಿರುವ ಕೃತಕ ಬುದ್ಧಿಮತ್ತೆ ಚಾಲಿತ ‘KEO AI PC’ ಸದ್ಯದಲ್ಲೇ ಮಾರುಕಟ್ಟೆಗೆ ಲೋಕಾರ್ಪಣೆಯಾಗಲು ಸಜ್ಜಾಗಿದೆ ಎಂದು ಮಾಹಿತಿ ತಂತ್ರಜ್ಞಾನ (IT-BT) ಸಚಿವರೂ ಆದ ಗೃಹಸಚಿವ ಪ್ರಿಯಾಂಕ್ ಖರ್ಗೆ ಪ್ರಕಟಿಸಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವರು, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ಜನಸಾಮಾನ್ಯರಿಗೂ ತಲುಪಿಸುವ ನಿಟ್ಟಿನಲ್ಲಿ ಕಿಯೋನಿಕ್ಸ್ ಸಂಸ್ಥೆ ಇಟ್ಟಿರುವ ಈ ಹೆಜ್ಜೆ ಅತ್ಯಂತ ಮಹತ್ವದ್ದಾಗಿದೆ ಎಂದು ಶ್ಲಾಘಿಸಿದ್ದಾರೆ.

ವೇಗದ ಸಾಮರ್ಥ್ಯ ಹಾಗೂ ಅತ್ಯಾಧುನಿಕ ತಂತ್ರಜ್ಞಾನ:

ನೂತನವಾಗಿ ಹೊರಬರಲಿರುವ ‘KEO AI PC’ ಸಾಧನವು ಅತ್ಯಾಧುನಿಕ ತಂತ್ರಜ್ಞಾನ, AI ಆಧಾರಿತ ತಡೆರಹಿತ ಸೇವೆಗಳು ಹಾಗೂ ಅತಿ ವೇಗದ ಗಣಕೀಕೃತ (Computing) ಸಾಮರ್ಥ್ಯವನ್ನು ಒಂದೇ ಕಂಪ್ಯೂಟರ್ ಸಾಧನದಲ್ಲಿ ಒದಗಿಸುವ ವಿಶೇಷ ವಿನ್ಯಾಸವನ್ನು ಹೊಂದಿದೆ. ಜಾಗತಿಕ ಮಟ್ಟದ ಐಟಿ ಪೈಪೋಟಿಗೆ ತಕ್ಕಂತೆ ಈ ಸ್ವದೇಶಿ ಗಣಕಯಂತ್ರವನ್ನು ಸಿದ್ಧಪಡಿಸಲಾಗಿದೆ.

ಡೀಪ್‌ಟೆಕ್ ವಲಯದಲ್ಲಿ ಕರ್ನಾಟಕ ನಂ.1 ಗುರಿ:

“ಕರ್ನಾಟಕವನ್ನು ಕೃತಕ ಬುದ್ಧಿಮತ್ತೆ (AI) ಹಾಗೂ ಡೀಪ್‌ಟೆಕ್ (DeepTech) ತಂತ್ರಜ್ಞಾನ ಕ್ಷೇತ್ರಗಳಲ್ಲಿ ಇಡೀ ದೇಶದಲ್ಲೇ ಮುಂಚೂಣಿ ರಾಜ್ಯವನ್ನಾಗಿ ಮಾಡುವುದು ನಮ್ಮ ಸರ್ಕಾರದ ಪ್ರಮುಖ ಸಂಕಲ್ಪವಾಗಿದೆ. ಇಂತಹ ಸ್ಥಳೀಯ ತಂತ್ರಜ್ಞಾನಗಳ ಸಂಶೋಧನೆ ಮತ್ತು ವಾಣಿಜ್ಯೀಕರಣವು ನಮ್ಮ ಈ ಆಶಯಕ್ಕೆ ಮತ್ತಷ್ಟು ಶಕ್ತಿ ತುಂಬಲಿದೆ” ಎಂದು ಪ್ರಿಯಾಂಕ್ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯದ ಯುವ ಪ್ರತಿಭೆಗಳು, ದೇಶದ ತಂತ್ರಜ್ಞಾನ ಸಾಮರ್ಥ್ಯ ಮತ್ತು ಭವಿಷ್ಯದ ಎಐ ಶಕ್ತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಇಂತಹ ಎಲ್ಲಾ ನವೀನ ಪ್ರಯತ್ನಗಳಿಗೆ ಸರ್ಕಾರ ನಿರಂತರವಾಗಿ ಬೆಂಬಲ ನೀಡಲಿದೆ ಎಂದು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

 

 


Share this with Friends

Related Post