Sat. Aug 22nd, 2026

ಪಾದಚಾರಿ ರಸ್ತೆಯಲ್ಲಿ ವಾಹನ ಚಲಾಯಿಸಿದರೆ ₹5,000 ದಂಡ: ನಿಯಮ ಬಿಗಿಗೊಳಿಸಲು ಸಾರಿಗೆ ಇಲಾಖೆ ಪ್ರಸ್ತಾವನೆ

Share this with Friends

ಬೆಂಗಳೂರು: ಟ್ರಾಫಿಕ್ ಜ್ಯಾಮ್‌ನಿಂದ ಪಾರಾಗಲು ಫುಟ್‌ಪಾತ್‌ಗಳ ಮೇಲೆ ಮನಬಂದಂತೆ ವಾಹನ ನುಗ್ಗಿಸುವ ಸವಾರರಿಗೆ ಇನ್ಮುಂದೆ ಸಾರಿಗೆ ಇಲಾಖೆ ಶಾಕ್ ನೀಡಲಿದೆ. ಪಾದಚಾರಿಗಳ ಸುರಕ್ಷತೆಯನ್ನು ಕಡೆಗಣಿಸಿ ಫುಟ್‌ಪಾತ್ ಮೇಲೆ ಸವಾರಿ ಮಾಡುವ ವಾಹನ ಸವಾರರಿಗೆ ವಿಧಿಸುವ ದಂಡದ ಮೊತ್ತವನ್ನು ಬರೋಬ್ಬರಿ 10 ಪಟ್ಟು ಹೆಚ್ಚಿಸಲು ಸಾರಿಗೆ ಇಲಾಖೆಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಪ್ರಸ್ತುತ ಇರುವ ದಂಡ ಎಷ್ಟು? ಹೊಸ ಪ್ರಸ್ತಾವನೆ ಏನು?

ಪ್ರಸ್ತುತ ಜಾರಿಯಲ್ಲಿರುವ ನಿಯಮಗಳ ಪ್ರಕಾರ, ಫುಟ್‌ಪಾತ್ ಮೇಲೆ ವಾಹನ ಚಲಾಯಿಸುವ ಸವಾರರಿಗೆ ಕೇವಲ ₹500 ದಂಡ ವಿಧಿಸಲಾಗುತ್ತಿದೆ. ಆದರೆ, ಈ ಸಣ್ಣ ಮೊತ್ತದ ದಂಡದಿಂದ ಸವಾರರಲ್ಲಿ ಯಾವುದೇ ಭೀತಿ ಮೂಡುತ್ತಿಲ್ಲ ಹಾಗೂ ನಿಯಮಗಳ ಉಲ್ಲಂಘನೆ ನಿರಂತರವಾಗಿ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಲು ಈ ಕೆಳಗಿನಂತೆ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ:

ಮೊದಲ ಬಾರಿ ಉಲ್ಲಂಘನೆ: ಮೊದಲ ಬಾರಿ ಫುಟ್‌ಪಾತ್ ಮೇಲೆ ಗಾಡಿ ಓಡಿಸಿ ಸಿಕ್ಕಿಬಿದ್ದರೆ ₹5,000 ದಂಡ ವಿಧಿಸಲು ಶಿಫಾರಸು ಮಾಡಲಾಗಿದೆ.

ಎರಡನೇ ಬಾರಿ ಉಲ್ಲಂಘನೆ: ಅದೇ ತಪ್ಪು ಮರುಕಳಿಸಿದರೆ ದಂಡದ ಮೊತ್ತವನ್ನು ₹10,000 ಕ್ಕೆ ಏರಿಸಲು ಪ್ರಸ್ತಾಪಿಸಲಾಗಿದೆ.

ಸಚಿವ ಕೃಷ್ಣ ಬೈರೇಗೌಡ ಅವರ ಸಲಹೆ

ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಬೆಂಗಳೂರು ಸಂಚಾರಿ ಪೊಲೀಸ್ ಮತ್ತು ಬೃಹತ್ ಬೆಂಗಳೂರು ಪ್ರಾಧಿಕಾರಗಳ (GBA) ಸಭೆ ನಡೆಸಿ, ಪಾದಚಾರಿಗಳ ಹಕ್ಕನ್ನು ರಕ್ಷಿಸಲು ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಫುಟ್‌ಪಾತ್‌ಗಳನ್ನು ರಸ್ತೆ ವ್ಯಾಪಾರಿಗಳಿಂದ ಮುಕ್ತಗೊಳಿಸಿದ ನಂತರವೂ ವಾಹನ ಸವಾರರು ಅದನ್ನು ಶಾರ್ಟ್‌ಕಟ್ ಆಗಿ ಬಳಸುವುದು ಒಪ್ಪಲು ಸಾಧ್ಯವಿಲ್ಲ ಎಂದು ಅವರು ಸಾರಿಗೆ ಸಚಿವರಿಗೆ ಪತ್ರ ಬರೆದು ದಂಡದ ಮೊತ್ತ ಹೆಚ್ಚಳಕ್ಕೆ ಒತ್ತಾಯಿಸಿದ್ದರು.

ಫುಟ್‌ಪಾತ್‌ಗಳು ಕೇವಲ ಪಾದಚಾರಿಗಳು, ಮಕ್ಕಳು, ಹಿರಿಯ ನಾಗರಿಕರು ಮತ್ತು ದಿವ್ಯಾಂಗರು ಸುರಕ್ಷಿತವಾಗಿ ನಡೆಯಲು ಮಾತ್ರ ಮೀಸಲಾಗಿರಬೇಕು. ಸಾರಿಗೆ ಇಲಾಖೆಯು ಈ ಕಾನೂನು ತಿದ್ದುಪಡಿಗೆ ಸಂಬಂಧಿಸಿದಂತೆ ಕಾನೂನು ಇಲಾಖೆಯ ಅಭಿಪ್ರಾಯವನ್ನು ಕೋರಿದ್ದು, ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಯಿದೆ.

 

 


Share this with Friends

Related Post