ಬೆಂಗಳೂರು: ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಯ ದೃಷ್ಟಿಯಿಂದ ಕೈಗಾರಿಕೆಗಳನ್ನು ಕೇವಲ ಬೆಂಗಳೂರಿಗೆ ಸೀಮಿತಗೊಳಿಸದೆ ವಿಕೇಂದ್ರೀಕರಣಗೊಳಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭವಿಷ್ಯದ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ್ದಾರೆ. ಕೈಗಾರಿಕಾ ಹೂಡಿಕೆಯನ್ನು ಆಕರ್ಷಿಸಲು ಬೆಂಗಳೂರನ್ನು ಹೊರತುಪಡಿಸಿ, ವಿಮಾನ ನಿಲ್ದಾಣ ಸೇರಿದಂತೆ ಅತ್ಯುತ್ತಮ ಮೂಲಸೌಕರ್ಯ ಹೊಂದಿರುವ ರಾಜ್ಯದ ಇತರೆ ಐದು ಪ್ರಮುಖ ನಗರಗಳನ್ನು ಗುರುತಿಸುವಂತೆ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಗೃಹ ಕಚೇರಿ ‘ಕೃಷ್ಣಾ’ದಲ್ಲಿ ನಡೆದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೂಡಿಕೆದಾರರಿಗೆ ವಿಶೇಷ ರಿಯಾಯಿತಿ:
ರಾಜ್ಯದ ವಿವಿಧ ಭಾಗಗಳಲ್ಲಿ ಕೈಗಾರಿಕಾ ಪ್ರಗತಿ ಸಾಧಿಸಲು ಮತ್ತು ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಸರ್ಕಾರ ಉದ್ದೇಶಿಸಿದೆ. ಇದಕ್ಕಾಗಿ ಹೊಸದಾಗಿ ಗುರುತಿಸಲ್ಪಡುವ ಐದು ನಗರಗಳಲ್ಲಿ ಬಂಡವಾಳ ಹೂಡುವ ಉದ್ಯಮಿಗಳಿಗೆ ವಿಶೇಷ ರಿಯಾಯಿತಿ ಹಾಗೂ ಸವಲತ್ತುಗಳನ್ನು ನೀಡುವ ಮೂಲಕ ಕೈಗಾರಿಕೋದ್ಯಮಕ್ಕೆ ಉತ್ತೇಜನ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಪ್ರಕಟಿಸಿದರು.
ಏಕಗವಾಕ್ಷಿ ವ್ಯವಸ್ಥೆ ಬಲಪಡಿಸಲು ಕಾಲಮಿತಿ:
“ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾಗಿರುವ ಏಕಗವಾಕ್ಷಿ (Single Window) ಅನುಮೋದನೆ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭ ಹಾಗೂ ಬಲಪಡಿಸಬೇಕು. ಈ ವ್ಯವಸ್ಥೆಯಡಿ ಬರುವ ಎಲ್ಲಾ ಇಲಾಖೆಗಳು ನಿಗದಿತ ಕಾಲಮಿತಿಯೊಳಗೆ ತಮ್ಮ ಅನುಮೋದನೆ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ಈ ಕುರಿತು ಶೀಘ್ರದಲ್ಲೇ ಆಯಾ ಇಲಾಖೆಗಳ ಸಚಿವರೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗುವುದು” ಎಂದು ಸಿಎಂ ತಿಳಿಸಿದರು. ಪ್ರಸ್ತುತ ಈ ವ್ಯವಸ್ಥೆಯಲ್ಲಿ 22 ಇಲಾಖೆಗಳು ಹಾಗೂ 119 ಸೇವೆಗಳನ್ನು ಡಿಜಿಟಲ್ ರೂಪದಲ್ಲಿ ಸಂಯೋಜಿಸಲಾಗಿದೆ. ನೀತಿ ಆಯೋಗದ ಹೂಡಿಕೆದಾರ ಸ್ನೇಹಿ ಸೂಚ್ಯಂಕದಲ್ಲಿ ಪ್ರಸ್ತುತ 9ನೇ ಸ್ಥಾನದಲ್ಲಿರುವ ಕರ್ನಾಟಕವನ್ನು ಮುಂಚೂಣಿಗೆ ತರಲು ಶ್ರಮಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಆಂಧ್ರಪ್ರದೇಶ, ತಮಿಳುನಾಡು, ಉತ್ತರಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳು ಹೂಡಿಕೆ ಆಕರ್ಷಿಸಲು ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.
ಉತ್ಪಾದನಾ ವಲಯದಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ:
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕರ್ನಾಟಕವು ತಯಾರಿಕಾ (Manufacturing) ವಲಯದಲ್ಲಿ ಬರೊಬ್ಬರಿ ₹5.58 ಲಕ್ಷ ಕೋಟಿ ಹೂಡಿಕೆಯನ್ನು ಆಕರ್ಷಿಸುವ ಮೂಲಕ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಸದ್ಯ ಸೆಮಿಕಂಡಕ್ಟರ್ಸ್, ಏರೋಸ್ಪೇಸ್ ಮತ್ತು ಡಿಫೆನ್ಸ್, ಕ್ಲೀನ್ ಮೊಬಿಲಿಟಿ ಹಾಗೂ ಇತರೆ ಉದಯೋನ್ಮುಖ ವಲಯಗಳಲ್ಲಿನ ಹೂಡಿಕೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಉತ್ಪಾದನಾ ವಲಯವನ್ನು ಮತ್ತಷ್ಟು ಉನ್ನತೀಕರಿಸಲು ಹಮ್ಮಿಕೊಳ್ಳಲಾಗಿದ್ದ “ಉತ್ಪಾದನಾ ಮಂಥನ” ಸಭೆಯಲ್ಲಿ ದೇಶದ ಪ್ರಮುಖ 80 ಸಿಇಓಗಳು ಪಾಲ್ಗೊಂಡಿದ್ದರು. ಅವರು ನೀಡಿದ್ದ 55 ಪ್ರಮುಖ ಸಲಹೆಗಳ ಪೈಕಿ ಈಗಾಗಲೇ 35 ತಾಂತ್ರಿಕ ಸಮಸ್ಯೆಗಳನ್ನು ಸರ್ಕಾರ ಯಶಸ್ವಿಯಾಗಿ ಬಗೆಹರಿಸಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ವಿವರಿಸಿದರು.

