ಬೆಂಗಳೂರು:“ಕಿಯೋನಿಕ್ಸ್ ಸಂಸ್ಥೆ ಎಐ ಆಧಾರಿತ ಕಿಯೋ ಕಂಪ್ಯೂಟರ್ ಗಳ ಮೂಲಕ ತಂತ್ರಜ್ಞಾನವನ್ನು ಹಳ್ಳಿ ಮಕ್ಕಳಿಗೆ ನೀಡುವ ದೊಡ್ಡ ಪ್ರಯತ್ನಕ್ಕೆ ಮುಂದಾಗಿದೆ. ಭವಿಷ್ಯದ ಮಕ್ಕಳನ್ನು ತಯಾರು ಮಾಡುವ ಚಿಂತನೆಗೆ ಕಿಯೋನಿಕ್ಸ್ ಮುಂದಾಗಿರುವುದನ್ನು ಸ್ವಾಗತಿಸುತ್ತೇನೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಮಂಗಳವಾರ ನಡೆದ ಕಿಯೋನಿಕ್ಸ್‌ನ 50ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮಕ್ಕೆ ಸಿಎಂ ಡಿ ಕೆ ಶಿವಕುಮಾರ್ ಅವರು ಚಾಲನೆ ನೀಡಿ ಮಾತನಾಡಿದರು.
“ಕಿಯೋನಿಕ್ಸ್ ಪಾಲಿಗೆ ಇದೊಂದು ಸುವರ್ಣ ದಿನ. ನಾನು ಶಾಲೆಯಲ್ಲಿ ಓದುವಾಗ ಕಿಯೋನಿಕ್ಸ್ ಆರಂಭವಾಗಿತ್ತು. ಆಗ ವೀರಪ್ಪ ಮೊಯ್ಲಿ ಅವರು ಕೈಗಾರಿಕಾ ಸಚಿವರಾಗಿದ್ದರು, ಎಸ್ ಎಂ ಕೃಷ್ಣ ಅವರು ಉಪ ಸಚಿವರಾಗಿದ್ದರು. ದೇವರಾಜ ಅರಸು ಅವರು ಸಿಎಂ ಆಗಿದ್ದರು. ಅವರುಗಳ ಅಲಂಕರಿಸಿದ ಸ್ಥಾನದಲ್ಲಿ ಇಂದು ನಾನು ಕೂತು ನಿಮ್ಮ ಮುಂದೆ ನಿಂತಿರುವುದು ನನ್ನ ಭಾಗ್ಯ” ಎಂದು ತಿಳಿಸಿದರು.
“ಇತ್ತೀಚೆಗೆ ಕಿಯೋನಿಕ್ಸ್ ಮೂಲಕ ಮಕ್ಕಳಿಗೆ ನೀಡುವ ಕಿಯೋ ಕಂಪ್ಯೂಟರ್ ಅನ್ನು ನನ್ನಿಂದಲೇ ಅನಾವರಣ ಮಾಡಿಸಿದರು. ಇಂದು ನಾವು ಭವಿಷ್ಯ ನಿರ್ಮಾಣ ಮಾಡುವ ಸಂದರ್ಭದಲ್ಲಿದ್ದೇವೆ. ಎಐ ಯುಗದ ಪ್ರವೇಶದಲ್ಲಿದ್ದು, ಕಿಯೋನಿಕ್ಸ್ ಹೊಸ ಸಾಧ್ಯತೆಗಳನ್ನು ಗುರುತಿಸಿ ಕಿಯೋ ಅನ್ನು ತಯಾರಿಸಿದ್ದಾರೆ. ಆ ಮೂಲಕ ಕರ್ನಾಟಕವನ್ನು ಭವಿಷ್ಯಕ್ಕೆ ತಯಾರು ಮಾಡುತ್ತಿದೆ. ದೇವರಾಜ ಅರಸು ಅವರ ಕಾಲದಲ್ಲಿ ಇದನ್ನು ಸ್ಥಾಪಿಸಿದ್ದು, ಇದರಿಂದ ಸಾಕಷ್ಟು ಜನರಿಗೆ ಉದ್ಯೋಗ ಸಿಗುತ್ತಿದೆ. ತಂತ್ರಜ್ಞಾನ, ವಿಜ್ಞಾನ ಎಂದರೆ ಬೆಂಗಳೂರು” ಎಂದರು.
ಬಿಯಾಂಡ್ ಬೆಂಗಳೂರು ಮೂಲಕ ಹುಬ್ಬಳ್ಳಿ, ಶಿವಮೊಗ್ಗ, ಕಲಬುರ್ಗಿ, ಮಂಗಳೂರಿನಲ್ಲಿ ಐಟಿ ತಂತ್ರಜ್ಞಾನಕ್ಕೆ ಉತ್ತೇಜನ
“ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನದ ಸೇವೆ ಒದಗಿಸಲಾಗುತ್ತಿದೆ. ಬೆಂಗಳೂರಿನ ಆಸ್ತಿಗಳ ದಾಖಲೆ ಸರಿಪಡಿಸಲು ಹಾಗೂ ಜನರಿಗೆ ಖಾತಾ ವಿತರಣೆಗೆ ತಂತ್ರಜ್ಞಾನವನ್ನೇ ಬಳಸಲಾಗುತ್ತಿದೆ. ಬೆಂಗಳೂರಿನಲ್ಲಿ 40 ಲಕ್ಷ ಆಸ್ತಿಗಳಿಗೆ ಡಿಜಿಟಲ್ ಆಸ್ತಿ ದಾಖಲೆ ನೀಡಲು ಸರ್ಕಾರ ಮುಂದಾಗಿದೆ. ಜತೆಗೆ ಮನೆ ಮನೆಗೆ ದಾಖಲೆಗಳನ್ನು ನೀಡಲಾಗುವುದು. ಎಸ್ಐಆರ್ ಮುಗಿದ ಬಳಿಕ ನಗರದ ಸಾರ್ವಜನಿಕರಿಗೆ ಈ ದಾಖಲೆ ವಿತರಣೆ ಆರಂಭಿಸಲಾಗುವುದು ಎಂದರು.
ಬೆಂಗಳೂರಿನ ಜತೆಗೆ ಹುಬ್ಬಳ್ಳಿ, ಶಿವಮೊಗ್ಗ, ಕಲಬುರ್ಗಿ, ಮಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಉತ್ತೇಜನ ನೀಡಲು ತೀರ್ಮಾನಿಸಿದ್ದು, ಬಿಯಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ಬೇರೆ ಜಿಲ್ಲೆಗಳಲ್ಲಿ ಉದ್ಯಮಗಳ ಪ್ರಗತಿಗೆ ಮುಂದಾಗಿದ್ದೇವೆ. ಸಮಸ್ಯೆ ಯಾವುದೇ ಆದರೂ ಸಕಾರಾತ್ಮಕವಾಗಿ ಆಲೋಚಿಸಿ ಪರಿಹಾರ ಕಂಡುಕೊಳ್ಳಬೇಕು. ಎಐ ತಂತ್ರಜ್ಞಾನ ಬಂದಿದ್ದು, ಎಲ್ಲರಿಗೂ ಇದು ಲಭ್ಯವಾಗುತ್ತಿದೆ. ಕಿಯೋನಿಕ್ಸ್ ಅವರು ಗ್ರಾಮೀಣ ಭಾಗದ ಶಾಲೆಗಳು ಹಾಗೂ ಸಣ್ಣ ಉದ್ಯಮಿಗಳಿಗೆ ಈ ತಂತ್ರಜ್ಞಾನ ತಲುಪಿಸುತ್ತಿರುವುದಕ್ಕೆ ಅಭಿನಂದಿಸುತ್ತೇನೆ” ಎಂದು ಹೇಳಿದರು.
ಮಕ್ಕಳಲ್ಲಿ ಕೌಶಲ್ಯ ವೃದ್ಧಿಗೆ ಉದ್ಯಮ ಆಧಾರಿತ ಪಠ್ಯಕ್ರಮಕ್ಕೆ ಆದ್ಯತೆ ನೀಡಲು ಸೂಚನೆ
“ನಮ್ಮಲ್ಲಿ 30 ಸಾವಿರ ಇಂಜಿನಿಯರಿಂಗ್ ಸೀಟುಗಳು ಖಾಲಿ ಉಳಿದಿದೆ. ಇಂಜಿನಿಯರಿಂಗ್ ವ್ಯಾಸಂಗ ಮಾಡಿದವರಿಗೆ ಕಡಿಮೆ ವೇತನ ಸಿಗುತ್ತಿದ್ದು, ಇದನ್ನು ಯಾವ ರೀತಿ ಬಗೆಹರಿಸಬೇಕು ಎಂದು ಆಲೋಚನೆ ಮಾಡಲಾಗುತ್ತಿದೆ. ಮಕ್ಕಳಲ್ಲಿ ಕೌಶಲ್ಯ ವೃದ್ಧಿಗೆ ಆದ್ಯತೆ ನೀಡಲು ಅವರ ಪಠ್ಯಕ್ರಮವನ್ನು ಉದ್ಯಮ ಆಧಾರಿತವನ್ನಾಗಿ ಪರಿವರ್ತಿಸಲು ಸೂಚಿಸಿದ್ದೇನೆ. ಕೆಲವು ವಿದೇಶಗಳಲ್ಲಿ ಉದ್ಯೋಗ ನೀಡುವಾಗ ಪದವಿಗಳನ್ನು ಕೇಳುವುದಿಲ್ಲ. ಆ ಉದ್ಯೋಗಕ್ಕೆ ಸೂಕ್ತವಾದ ಕೌಶಲ್ಯವಿದೆಯೇ ಎಂದಷ್ಟೇ ಕೇಳುತ್ತಾರೆ” ಎಂದರು.
“ನಮ್ಮ ಯುವಕರು ಉದ್ಯೋಗಿಗಳಾಗುವುದಕ್ಕಿಂತ ಉದ್ಯೋಗದಾತರಾಗಬೇಕು. ನಮ್ಮ ಸರ್ಕಾರವು ಉದ್ಯೋಗದಾತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದೆ. ಈ ಸಂಸ್ಥೆ ತಂತ್ರಜ್ಞಾನದ ಪರಂಪರೆಯನ್ನು ಮುಂದುವರಿಸುತ್ತಿದ್ದು, ಭವಿಷ್ಯದಲ್ಲಿ ಜಾಗದ ಅಗತ್ಯ ಇದ್ದರೆ ಹೇಳಿ, ನಮ್ಮ ಸರ್ಕಾರ ನಿಮ್ಮ ಬೆಂಬಲಕ್ಕೆ ನಿಲ್ಲಲಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿರುವವರು ಬೆಂಗಳೂರು ಹಾಗೂ ದೇಶದ ಪ್ರಗತಿಯ ಅಡಿಪಾಯ. ನಮ್ಮ ಸರ್ಕಾರ ಜನರ ಪರವಾದ ಸರ್ಕಾರ. ನಾವು ಎಲ್ಲಾ ಕ್ಷೇತ್ರಗಳಲ್ಲಿ ನಾಯಕರನ್ನು ತಯಾರು ಮಾಡಲು ಬಯಸುತ್ತೇವೆ. ನಮ್ಮ ಸರ್ಕಾರ ಸದಾ ಸಕಾರಾತ್ಮಕವಾಗಿ ಚಿಂತನೆ ಮಾಡಲಿದ್ದು, ನಾವೆಲ್ಲರೂ ಒಟ್ಟಾಗಿ ಕರ್ನಾಟಕದ ಭವಿಷ್ಯವನ್ನು ನಿರ್ಮಾಣ ಮಾಡೋಣ” ಎಂದು ಕರೆ ನೀಡಿದರು.
“ನಾನು ಇತ್ತೀಚೆಗೆ ಮೈಸೂರಿನಲ್ಲಿ ಪ್ರಧಾನಮಂತ್ರಿಗಳ ಕಾರ್ಯಕ್ರಮದಲ್ಲಿ ನಾನು ಅವರಿಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸ್ಥಾಪನೆಯ ಬಗ್ಗೆ ಮಾಹಿತಿ ನೀಡಿದೆ. ಟಾಟಾ ಹಾಗೂ ಸ್ವಾಮಿ ವಿವೇಕಾನಂದ ಅವರು ಹಡಗಿನಲ್ಲಿ ಪ್ರಯಾಣ ಮಾಡುವಾಗ ಭಾರತಕ್ಕೆ ವಿಜ್ಞಾನದ ಅಗತ್ಯತೆ ಬಗ್ಗೆ ಚರ್ಚೆ ಮಾಡಿದರು. ಆಗ ಮೈಸೂರು ಮಹಾರಾಜರನ್ನು ಭೇಟಿ ಮಾಡಿ ಮನವಿ ಮಾಡಿದಾಗ ರಾಜರು 300 ಎಕರೆ ಜಮೀನು ಹಾಗೂ 5 ಲಕ್ಷ ಹಣವನ್ನು ಇದಕ್ಕಾಗಿ ನೀಡಿದರು. ಆಗ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸ್ಥಾಪನೆಯಾಯಿತು. ಅಲ್ಲಿ ಆರಂಭವಾದ ವಿಜ್ಞಾನದ ಪ್ರಯಾಣ, ಇಂದು ಇಷ್ಟು ದೊಡ್ಡ ಪ್ರಮಾಣದಲ್ಲಿ 250ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜು, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಲಕ್ಷಾಂತರ ಮಂದಿ ಉದ್ಯೋಗಿಗಳು ಇದ್ದಾರೆ” ಎಂದರು.
ಕಿಯಾನಿಕ್ಸ್- 50 ವರ್ಷಗಳ ಅನ್ವೇಷಣೆ, ತಂತ್ರಜ್ಞಾನ, ಪ್ರಗತಿಯ ಪಯಣ
“ಕಿಯೋನಿಕ್ಸ್ ಆರಂಭವಾದಾಗ ಬೆಂಗಳೂರಿನಲ್ಲಿ 20 ಲಕ್ಷ ಜನಸಂಖ್ಯೆ ಇತ್ತು. ಈಗ 1.40 ಕೋಟಿ ಜನ ಇದ್ದಾರೆ. ಕರ್ನಾಟಕ ಸರ್ಕಾರ ಆಗಲೇ ದೂರದೃಷ್ಟಿಯಿಂದ ತಂತ್ರಜ್ಞಾನ ಕ್ಷೇತ್ರಕ್ಕೆ ದೊಡ್ಡ ಅಡಿಪಾಯ ಹಾಕಿತು. ಇದಕ್ಕಾಗಿ ದೇವರಾಜ ಅರಸು, ವೀರಪ್ಪ ಮೊಯ್ಲಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಇದು ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಉತ್ಪಾದನಾ ವಲಯದಲ್ಲಿ ತನ್ನ ಕೊಡುಗೆ ನೀಡಿದೆ. 50 ವರ್ಷಗಳ ಅನ್ವೇಷಣೆ, ತಂತ್ರಜ್ಞಾನ, ಪ್ರಗತಿಯ ಪಯಣವಾಗಿದೆ” ಎಂದರು.
“ಕಿಯೋನಿಕ್ಸ್ ಸಂಸ್ಥೆಯ ಪ್ರಥಮ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಬಾಳಿಗ ಅವರ ಪುತ್ಥಳಿಯನ್ನು ನಿರ್ಮಿಸಿರುವುದು ಸಂತೋಷದ ವಿಚಾರ. ಪ್ರಿಯಾಂಕ್ ಖರ್ಗೆ ಹಾಗೂ ಶರತ್ ಬಚ್ಚೇಗೌಡ ಅವರು ತಮ್ಮ ಮೂಲವನ್ನು ಮರೆತಿಲ್ಲ. ಕ್ಯಾಲಿಫೋರ್ನಿಯಾಗಲ್ಲಿ 16 ಲಕ್ಷ ಐಟಿ ವೃತ್ತಿಪರರು ಇದ್ದರೆ, ಬೆಂಗಳೂರಿನಲ್ಲಿ 26 ಲಕ್ಷ ಐಟಿ ವೃತ್ತಿಪರರು ಇದ್ದಾರೆ. ಅಷ್ಟರ ಮಟ್ಟಕ್ಕೆ ನಮ್ಮ ನಗರ ಬೆಳೆದಿದೆ. ಎಲೆಕ್ಟ್ರಾನಿಕ್ ಸಿಟಿ ಬಳಿ ಪ್ರಮುಖ ಕಂಪನಿಗಳು ಬಂದಿದ್ದು, ಬೆಂಗಳೂರಿಗೆ ತಂತ್ರಜ್ಞಾನದ ಗುರುತು ನೀಡಿದೆ. ಈ ಭಾಗದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ನೆರವು ನೀಡಲಾಯಿತು. ಕೇವಲ ಅದೊಂದೇ ಅಲ್ಲ, ನೆಲಮಂಗಲ, ಏರ್ ಪೋರ್ಟ್, ಕೋಲಾರ ರಸ್ತೆ ಮೇಲ್ಸೇತುವೆ ಮಾಡಿದ್ದು ಯುಪಿಎ ಸರ್ಕಾರ” ಎಂದು ತಿಳಿಸಿದರು.
“ನನಗೆ ಕಂಪ್ಯೂಟರ್, ಎಲೆಕ್ಟ್ರಾನಿಕ್ಸ್ ಬಳಕೆ ಬಗ್ಗೆ ನನಗೆ ಹೆಚ್ಚಾಗಿ ಗೊತ್ತಿಲ್ಲ. ನಮ್ಮ ಕಾಲದಲ್ಲಿ ಆಗಷ್ಟೇ ಕ್ಯಾಲುಕೇಟರ್, ಟಿವಿಗಳು ಬಂದಿದ್ದವು. ನಂತರ ಕಂಪ್ಯೂಟರ್ ಬಂದಿತು. ನಾವು ದೂರವಾಣಿ ಸಂಪರ್ಕ ಪಡೆಯಲು ಸಂಸದರ ಬಳಿ ಶಿಫಾರಸ್ಸು ಪಡೆಯಬೇಕಾಗಿತ್ತು. 1981ರಲ್ಲಿ ರಾಜಗೋಪಾಲ್ ಎಂಬ ಸಂಸದರಿಂದ ಶಿಫಾರಸ್ಸು ಪಡೆದು ಪಡೆದುಕೊಂಡಿದ್ದೆ. ಆದರೆ ಇಂದು ಎಲ್ಲರ ಕೈಯಲ್ಲಿ ಮೊಬೈಲ್ ಫೋನ್ ಗಳಿವೆ. ಒಬ್ಬೊಬ್ಬರ ಬಳಿ 2-3 ಮೊಬೈಲ್ ಗಳಿವೆ. ನಂತರ ಸೆಮಿಕಂಡಕ್ಟರ್, ಎಐ ಕಾಲ ಬಂದಿದೆ” ಎಂದರು.

