Sun. Oct 11th, 2026

ಜಗನ್ನಾಥ ಭವನದಲ್ಲಿ ಕೋರ್ ಕಮಿಟಿ ಸಭೆ:ಸರ್ಕಾರದ ವಿರುದ್ಧ ಬೀದಿಗಿಳಿಯಲು ಬಿಜೆಪಿ ಸಿದ್ದತೆ

Share this with Friends

ಬೆಂಗಳೂರು:ರಾಜ್ಯದ ಪ್ರಚಲಿತ ರಾಜಕೀಯ ವಿದ್ಯಮಾನಗಳು, ರಾಜ್ಯ ಸರ್ಕಾರದ ದ್ವೇಷದ ರಾಜಕಾರಣ ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಹಿನ್ನೆಲೆಯಲ್ಲಿ, ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಭಾನುವಾರ ಅತ್ಯಂತ ಮಹತ್ವದ ರಾಜ್ಯ ಕೋರ್ ಕಮಿಟಿ ಸಭೆ ಜರುಗಿತು. ಬಿಜೆಪಿ ರಾಜ್ಯ ಅಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆದ ಈ ಉನ್ನತ ಮಟ್ಟದ ಸಭೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಜನಾಂದೋಲನ ರೂಪಿಸಲು ರಣತಂತ್ರ ರೂಪಿಸಲಾಯಿತು.

ಸಭೆಯಲ್ಲಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪಾಲ್ಗೊಂಡು ಪ್ರಮುಖ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಇವರೊಂದಿಗೆ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಮಾ. ನಾಗರಾಜು, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದ ಗೌಡ, ಬಸವರಾಜ ಬೊಮ್ಮಾಯಿ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ್, ಮಾಜಿ ಸಚಿವ ಬಿ. ಶ್ರೀರಾಮುಲು, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಹಾಗೂ ತಮಿಳುನಾಡು ರಾಜ್ಯ ಸಹ-ಉಸ್ತುವಾರಿ ನಿರ್ಮಲ್ ಕುಮಾರ್ ಸುರಾಣಾ ಸೇರಿದಂತೆ ಪಕ್ಷದ ಮುಂಚೂಣಿ ನಾಯಕರು ಉಪಸ್ಥಿತರಿದ್ದರು. ಇದೇ ವೇಳೆ ರಾಜ್ಯದ ನೂತನ ಸಹ-ಉಸ್ತುವಾರಿಯಾಗಿ ಜವಾಬ್ದಾರಿ ವಹಿಸಿಕೊಂಡಿರುವ ಡಾ. ಕಾಸಂ ವೆಂಕಟೇಶ್ವರಲು ಅವರನ್ನು ಪಕ್ಷದ ಹಿರಿಯ ಮುಖಂಡರು ಆತ್ಮೀಯವಾಗಿ ಗೌರವಿಸಿ ಅಭಿನಂದಿಸಿದರು

ಕೋರ್ ಕಮಿಟಿ ಸಭೆಯ ಪ್ರಮುಖ ನಿರ್ಣಯಗಳು ಮತ್ತು ಚರ್ಚೆಗಳು:

ಎಫ್‌ಐಆರ್ ರಾಜಕಾರಣಕ್ಕೆ ಮುತ್ತಿಗೆಯ ಉತ್ತರ:

ಚುನಾವಣಾ ಆಯೋಗದ ನಿಯಮಾವಳಿಗಳ ಅನ್ವಯ ಎಸ್‌ಐಆರ್ ಫಾರಂ-7 ಸಲ್ಲಿಸುತ್ತಿರುವ ಬಿಜೆಪಿ ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್ ಸರ್ಕಾರ ಪೊಲೀಸರನ್ನು ದುರುಪಯೋಗಪಡಿಸಿಕೊಂಡು ಸುಳ್ಳು ಎಫ್‌ಐಆರ್ ದಾಖಲಿಸುತ್ತಿದೆ ಎಂದು ಸಭೆಯ ಬಳಿಕ ಬಿ.ವೈ. ವಿಜಯೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವಿಚಾರದಲ್ಲಿ ಹೈಕೋರ್ಟ್ ಚಾಟಿ ಬೀಸಿದ್ದರೂ ಸರ್ಕಾರ ದ್ವೇಷದ ರಾಜಕಾರಣ ಮುಂದುವರಿಸಿದೆ. ಇನ್ನು ಮುಂದೆ ಇಂತಹ ಕ್ರಮ ಕೈಗೊಂಡರೆ ರಾಜ್ಯಾದ್ಯಂತ ಸಂಬಂಧಪಟ್ಟ ಪೊಲೀಸ್ ಠಾಣೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (ಎಸ್‌ಪಿ) ಕಚೇರಿಗಳಿಗೆ ಪಕ್ಷದ ವತಿಯಿಂದ ಬೃಹತ್ ಮುತ್ತಿಗೆ ಹಾಕಲಾಗುವುದು ಎಂದು ಕೋರ್ ಕಮಿಟಿ ಒಮ್ಮತದ ನಿರ್ಧಾರ ಕೈಗೊಂಡಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಮಿತಿ ರಚನೆ:

ಸರ್ಕಾರ ಪ್ರಕಟಿಸಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಮೀಸಲಾತಿ ಪಟ್ಟಿಯಲ್ಲಿ ಆಡಳಿತ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ಗೊಂದಲಗಳಿದ್ದು, ಚುನಾವಣೆ ಮುಂದೂಡುವ ಕುತಂತ್ರ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ. ಯಾವುದೇ ನೆಪ ಒಡ್ಡದೆ ಪಾರದರ್ಶಕವಾಗಿ ಚುನಾವಣೆ ನಡೆಸಲು ಒತ್ತಾಯಿಸಿರುವ ಕೋರ್ ಕಮಿಟಿ, ಚುನಾವಣೆ ಎದುರಿಸಲು ಈಗಿನಿಂದಲೇ ಸಜ್ಜಾಗಿದೆ. ಇದರ ಭಾಗವಾಗಿ ಪ್ರತಿ ಜಿಲ್ಲೆಗೂ ತಕ್ಷಣವೇ ಚುನಾವಣಾ ಉಸ್ತುವಾರಿಗಳನ್ನು ನೇಮಿಸಲು ಹಾಗೂ ‘ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿ’ಯನ್ನು ರಚಿಸಲು ತೀರ್ಮಾನಿಸಲಾಗಿದೆ.

ಸರ್ಟಿಫಿಕೇಟ್ ಅಧಿಕಾರಕ್ಕೆ ಆಕ್ಷೇಪ, ಉಪಚುನಾವಣೆ ಮೈತ್ರಿ:

ಪರ್ಮನೆಂಟ್ ರೆಸಿಡೆಂಟ್ ಸರ್ಟಿಫಿಕೇಟ್ (ಖಾಯಂ ನಿವಾಸಿ ಪ್ರಮಾಣಪತ್ರ) ನೀಡುವ ಅಧಿಕಾರವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಹಾಗೂ ಮುನ್ಸಿಪಲ್ ಕಮಿಷನರ್‌ಗಳಿಗೆ ನೀಡಿರುವ ಸರ್ಕಾರದ ಕ್ರಮವನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿದೆ. ಈ ಅಧಿಕಾರವನ್ನು ತಹಶೀಲ್ದಾರ್ ಹಂತದ ಅಧಿಕಾರಿಗಳಿಗೇ ಸೀಮಿತಗೊಳಿಸಬೇಕು ಎಂದು ಆಗ್ರಹಿಸಿ ಸರ್ಕಾರಕ್ಕೆ ಪತ್ರ ಬರೆಯಲು ಮತ್ತು ಚುನಾವಣಾ ಆಯೋಗದ ಗಮನ ಸೆಳೆಯಲು ನಿರ್ಧರಿಸಲಾಗಿದೆ. ಇನ್ನು ರಾಜ್ಯದಲ್ಲಿ ಎದುರಾಗಲಿರುವ ಮುಂಬರುವ ಉಪಚುನಾವಣೆಗಳಿಗೆ ಮೈತ್ರಿ ಪಕ್ಷವಾದ ಜೆಡಿಎಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಜಂಟಿ ಸಮನ್ವಯದೊಂದಿಗೆ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಚರ್ಚಿಸಲಾಗಿದೆ.

ಕೋರ್ ಕಮಿಟಿ ಪುನರ್‌ರಚನೆ:

ಪಕ್ಷದ ಹೊಸ ಉಸ್ತುವಾರಿಗಳು ಬಂದಿರುವುದರಿಂದ ಪ್ರಸ್ತುತ ಕೋರ್ ಕಮಿಟಿಯನ್ನು ಮುಂದುವರಿಸಬೇಕೇ ಅಥವಾ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಬೇಕೇ ಎಂಬ ಬಗ್ಗೆ ನಾಯಕರು ಅಭಿಪ್ರಾಯ ಹಂಚಿಕೊಂಡಿದ್ದು, ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ವಹಿಸಲಾಯಿತು.

 


Share this with Friends

Related Post