Fri. Oct 23rd, 2026

ಬೆಂಗಳೂರಿನ ಜಲ ಸುರಕ್ಷತೆಗೆ ಬೃಹತ್ ಯೋಜನೆ: ನಂದಿ ಬೆಟ್ಟಗಳ ಜಲಾನಯನ ಪ್ರದೇಶ ಸಂರಕ್ಷಣೆಗೆ ರಾಮಲಿಂಗಾರೆಡ್ಡಿ ಚಾಲನೆ

Share this with Friends

ಬೆಂಗಳೂರು: ಬೆಂಗಳೂರು ನಗರದ ಪ್ರಮುಖ ನೀರಿನ ಮೂಲವಾಗಿರುವ ನಂದಿಗಿರಿಧಾಮ ಶ್ರೇಣಿಯ ಜಲಾನಯನ ಪ್ರದೇಶಗಳನ್ನು ಸಂರಕ್ಷಿಸಲು ಕರ್ನಾಟಕ ಅರಣ್ಯ ಇಲಾಖೆಯು ಅತ್ಯಂತ ಮಹತ್ವಾಕಾಂಕ್ಷೆಯ ‘ಜಲಾನಯನ ಪ್ರದೇಶಗಳಿಗಾಗಿ ಅರಣ್ಯಗಳು: ನಂದಿ ಬೆಟ್ಟಗಳ ಯೋಜನೆ’ಗೆ ಅಧಿಕೃತವಾಗಿ ಚಾಲನೆ ನೀಡಿದೆ. ಮಾನ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ರಾಮಲಿಂಗಾರೆಡ್ಡಿ ಈ ವಿಶೇಷ ಪರಿಸರ ಸಂರಕ್ಷಣಾ ಉಪಕ್ರಮವನ್ನು ಉದ್ಘಾಟಿಸಿದರು.

ಈ ಯೋಜನೆಯು ಕರ್ನಾಟಕ ಅರಣ್ಯ ಮತ್ತು ವನ್ಯಜೀವಿ ಹವಾಮಾನ ಬದಲಾವಣೆ ಫೌಂಡೇಶನ್ (KFWCCF), ಅಯೋರಾ ಇಕೋಲಜಿಕಲ್ ಟ್ರಸ್ಟ್ ಮತ್ತು ಸೇಲ್ಸ್‌ಫೋರ್ಸ್ (Salesforce) ಸಂಸ್ಥೆಗಳ ಜಂಟಿ ಸಹಯೋಗದೊಂದಿಗೆ ಅನುಷ್ಠಾನಗೊಳ್ಳುತ್ತಿದೆ. ನಂದಿ ಬೆಟ್ಟಗಳ ಶ್ರೇಣಿಯಲ್ಲಿ ಉಗಮಿಸುವ ಪ್ರಮುಖ ಆರು ನದಿಗಳಾದ ಆರ್ಕಾವತಿ, ಚಿತ್ರಾವತಿ, ಪಾಪಾಗ್ನಿ, ಉತ್ತರ ಪಿನಾಕಿನಿ (ಪೆನ್ನಾರ್), ದಕ್ಷಿಣ ಪಿನಾಕಿನಿ (ಪೊನ್ನೈಯಾರ್) ಹಾಗೂ ಪಾಲಾರ್ ನದಿಗಳ ಜಲಾನಯನ ಪ್ರದೇಶಗಳನ್ನು ರಕ್ಷಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.

600 ಹೆಕ್ಟೇರ್ ಪ್ರದೇಶದಲ್ಲಿ ಕಾಡು ಮರುಸ್ಥಾಪನೆ, 1.80 ಲಕ್ಷ ಸಸ್ಯಗಳ ನಾಟಿ:

ಯೋಜನೆಯ ಅಡಿಯಲ್ಲಿ ಒಟ್ಟು 600 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ನೈಸರ್ಗಿಕ ಒಣ-ಪರ್ಣಪಾತಿ ಕಾಡುಗಳನ್ನು ಮರುಸ್ಥಾಪಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಮುಂದಿನ 3 ವರ್ಷಗಳ ಅವಧಿಯಲ್ಲಿ ಈ ವ್ಯಾಪ್ತಿಯಲ್ಲಿ 1,80,000 ಸ್ಥಳೀಯ ತಳಿಯ ಸಸ್ಯಗಳನ್ನು ನೆಟ್ಟು ಪೋಷಿಸುವ ಬೃಹತ್ ಗುರಿಯನ್ನು ಹೊಂದಲಾಗಿದೆ.

ಇದು ಕೇವಲ ಗಿಡ ನೆಡುವ ಕಾರ್ಯಕ್ರಮವಾಗಿರದೆ, ಮಣ್ಣು ಮತ್ತು ತೇವಾಂಶ ಸಂರಕ್ಷಣೆ, ನೈಸರ್ಗಿಕ ಪುನರುತ್ಪಾದನೆ, ಕಾಡಿಗೆ ಮಾರಕವಾಗಿರುವ ಆಕ್ರಮಣಕಾರಿ ಸಸ್ಯಗಳ ನಿಯಂತ್ರಣ ಹಾಗೂ ಸ್ಥಳೀಯ ಸಮುದಾಯಗಳಿಗೆ ಸುಸ್ಥಿರ ಜೀವೋಪಾಯದ ಅವಕಾಶಗಳನ್ನು ಕಲ್ಪಿಸಿಕೊಡಲಿದೆ. ಈ ಮೂಲಕ ಸಿಲಿಕಾನ್ ಸಿಟಿ ಬೆಂಗಳೂರಿನ ಭವಿಷ್ಯದ ಜಲ ಭದ್ರತೆಗೆ ಒಂದು ಬಲವಾದ ವೈಜ್ಞಾನಿಕ ಅಡಿಪಾಯ ಲಭಿಸಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆಗಳ ಮುಖ್ಯಸ್ಥರಾದ (PCCF & HoFF) ಮೀನಾಕ್ಷಿ ನೇಗಿ, ಅಯೋರಾ ಇಕೋಲಜಿಕಲ್ ಟ್ರಸ್ಟ್ ಮತ್ತು ಸೇಲ್ಸ್‌ಫೋರ್ಸ್ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 


Share this with Friends

Related Post