Tue. Nov 3rd, 2026

ಆನವಟ್ಟಿಯಲ್ಲಿ ರಾತ್ರೋರಾತ್ರಿ ಅಡಿಕೆ ಮರಗಳ ತೆರವು: ರೈತರ ಪರವಾಗಿ ಸಂಸದ ಬಿ.ವೈ. ರಾಘವೇಂದ್ರ ಧರಣಿ, ಉನ್ನತ ಮಟ್ಟದ ತನಿಖೆಗೆ ಆಗ್ರಹ

Share this with Friends

ಸೊರಬ: ತಾಲ್ಲೂಕಿನ ಆನವಟ್ಟಿ ಹೋಬಳಿಯ ತೇವರತೆಪ್ಪ ಗ್ರಾಮದಲ್ಲಿ ರೈತರು ಸುಮಾರು 15 ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ್ದ, ಫಸಲು ನೀಡುತ್ತಿದ್ದ ಅಡಿಕೆ ಮರಗಳನ್ನು ಯಾವುದೇ ಪೂರ್ವ ನೋಟಿಸ್ ನೀಡದೆ ಅಧಿಕಾರಿಗಳು ಏಕಾಏಕಿ ಕಡಿದು ಹಾಕಿರುವುದನ್ನು ಖಂಡಿಸಿ ಬಿಜೆಪಿ ಸೊರಬ ಮಂಡಲದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಈ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿ ಸಂತ್ರಸ್ತ ರೈತರಿಗೆ ಬೆಂಬಲ ಸೂಚಿಸಿದ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಸರ್ಕಾರದ ಅಧಿಕಾರಿಗಳ ನಡೆಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ರೈತ ಕುಟುಂಬಗಳ ಜೀವನೋಪಾಯಕ್ಕೆ ಏಕೈಕ ಆಧಾರವಾಗಿದ್ದ ಅಡಿಕೆ ತೋಟವನ್ನು ಹೀಗೆ ಕ್ರೂರವಾಗಿ ನಾಶಪಡಿಸಿರುವುದು ತೀವ್ರ ನೋವು ತಂದಿದೆ. ವರ್ಷಗಳ ಕಾಲ ಬೆವರು ಸುರಿಸಿ ಬೆಳೆಸಿದ ಫಸಲನ್ನು ಕಳೆದುಕೊಂಡು ಅನ್ನದಾತರು ಬೀದಿಗೆ ಬಿದ್ದಿದ್ದಾರೆ. ರೈತರಿಗೆ ಆಗಿರುವ ಈ ಅಪಾರ ಆರ್ಥಿಕ ನಷ್ಟಕ್ಕೆ ಸರ್ಕಾರವೇ ನೇರ ಹೊಣೆ” ಎಂದು ಅವರು ದೂರಿದರು.

ಯಾವುದೇ ಕಾನೂನಾತ್ಮಕ ಮುನ್ಸೂಚನೆ ನೀಡದೆ ನಡೆಸಿರುವ ಈ ಮರಗಳ ತೆರವು ಕಾರ್ಯಾಚರಣೆಯ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ. ಈ ಇಡೀ ಪ್ರಕರಣದ ಕುರಿತು ನಿಷ್ಪಕ್ಷಪಾತವಾಗಿ ಉನ್ನತ ಮಟ್ಟದ ತನಿಖೆ ನಡೆಸಬೇಕು. ತಪ್ಪು ಎಸಗಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ, ನೊಂದ ರೈತ ಕುಟುಂಬಗಳಿಗೆ ತಕ್ಷಣವೇ ಸೂಕ್ತ ಆರ್ಥಿಕ ಪರಿಹಾರ ಒದಗಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಸಂಸದರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವರು ಹಾಗೂ ಹಿರಿಯ ನಾಯಕರಾದ ಹರತಾಳು ಹಾಲಪ್ಪ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಪ್ರಕಾಶ್ ಸೇರಿದಂತೆ ಪಕ್ಷದ ಪ್ರಮುಖ ಮುಖಂಡರು, ನೂರಾರು ಕಾರ್ಯಕರ್ತರು ಹಾಗೂ ಆಕ್ರೋಶಿತ ಸ್ಥಳೀಯ ರೈತರು ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ರೈತರ ಬದುಕು ಮತ್ತು ಅವರ ಜೀವನೋಪಾಯದ ರಕ್ಷಣೆಗೆ ಬಿಜೆಪಿ ಸದಾ ಬದ್ಧವಾಗಿರಲಿದ್ದು, ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ನಾಯಕರು ಎಚ್ಚರಿಸಿದ್ದಾರೆ.

ಘಟನೆ:

ಸೊರಬ ತಾಲೂಕಿನ ತೆವರ ತೆಪ್ಪ ಗ್ರಾಮದಲ್ಲಿ ಕೆರೆ ಜಾಗ ಒತ್ತುವರಿ ನೆಪವೊಡ್ಡಿ ತಾಲ್ಲೂಕು ಆಡಳಿತವು ಜೆಸಿಬಿ ಬಳಸಿ ಬಡ ರೈತ ದಂಪತಿ ಮಂಜಪ್ಪ ಮತ್ತು ಪರಸಪ್ಪ ಅವರ 500ಕ್ಕೂ ಅಧಿಕ ಅಡಿಕೆ ಮರಗಳನ್ನು ಏಕಾಏಕಿ ನೆಲಸಮ ಮಾಡಿದೆ.

ತೋಟ ಕಳೆದುಕೊಂಡ ಮಂಜಪ್ಪ ಅವರ ಪುತ್ರ, ಕಬ್ಬನಹಳ್ಳಿ ಬಳಿಯ ಅಕ್ರಮ ಕಲ್ಲು ಗಣಿಗಾರಿಕೆ ಹಾಗೂ ಸ್ಮಶಾನ ಒತ್ತುವರಿ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾರೆ. ಲೋಕಾಯುಕ್ತ ಅಂತಿಮ ಆದೇಶ ಬರುವ ಮುನ್ನವೇ ಯಾವುದೇ ನೋಟಿಸ್ ನೀಡದೆ ತೋಟ ನಾಶಪಡಿಸಲಾಗಿದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹಾಗೂ ಸಂತ್ರಸ್ತರು ಸ್ಥಳೀಯ ಸಚಿವ ಮಧು ಬಂಗಾರಪ್ಪ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 


Share this with Friends

Related Post