Thu. Nov 19th, 2026

ಚುನಾವಣಾ ರಾಜಕೀಯಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗುಡ್ ಬೈ

Share this with Friends

ಮೈಸೂರು: ತಮಗೀಗ 80 ವರ್ಷ ವಯಸ್ಸಾಗಿದ್ದು, ವಯೋಸಹಜ ಕಾರಣಗಳಿಂದಾಗಿ ಮುಂದಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಅಭಿಮಾನಿಗಳು ಮತ್ತು ಕಾರ್ಯಕರ್ತರು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸುತ್ತಾರೆ. ಆದರೆ, ನನಗೀಗ 80 ವರ್ಷವಾಗಿದೆ. ಮೊದಲಿನಂತೆ ಸಕ್ರಿಯವಾಗಿ ಓಡಾಟ ನಡೆಸುವುದು ಕಷ್ಟವಾಗುವ ಕಾರಣದಿಂದ ಮುಂದಿನ ಚುನಾವಣಾ ಕಣದಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ,” ಎಂದು ಚುನಾವಣಾ ರಾಜಕೀಯಕ್ಕೆ ವಿದಾಯ ಘೋಷಿಸಿದರು.

5ನೇ ಸಾಲಿನಲ್ಲಿ ಕುಳಿತಿದ್ದಕ್ಕೆ ಸ್ಪಷ್ಟನೆ:

ಇದೇ ವೇಳೆ, ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದರು. “ಸೋನಿಯಾ ಗಾಂಧಿ ಅವರ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ನಾನು ತಡವಾಗಿ ತಲುಪಿದ್ದೆ. ಹೀಗಾಗಿ, ಅಲ್ಲಿ ಖಾಲಿಯಿದ್ದ ಐದನೇ ಸಾಲಿನ ಕುರ್ಚಿಯಲ್ಲಿ ಕುಳಿತುಕೊಂಡೆ. ಇದರಲ್ಲಿ ನನ್ನನ್ನು ಕಡೆಗಣಿಸುವ ಯಾವುದೇ ಪ್ರಶ್ನೆಯೇ ಇಲ್ಲ. ಈ ವಿಚಾರವಾಗಿ ನಾನು ಈಗಾಗಲೇ ಸ್ಪಷ್ಟನೆಯನ್ನೂ ನೀಡಿದ್ದೇನೆ,” ಎಂದು ಹೇಳಿದರು.

 


Share this with Friends

Related Post