ಬೆಂಗಳೂರು: ರಾಜ್ಯದ ಎಲ್ಲಾ ನಗರಗಳಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಹೊಸ ನಗರ ಯೋಜನೆಯನ್ನು ರೂಪಿಸಿದ್ದು, ಶಿಸ್ತುಬದ್ಧ ರಸ್ತೆ ನಿರ್ಮಾಣಕ್ಕಾಗಿ ‘ನೂತನ ರಸ್ತೆ ಗ್ರಿಡ್ ವ್ಯವಸ್ಥೆ’ ಜಾರಿಗೊಳಿಸಲು ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ನಗರದ ಜವಾಹರಲಾಲ್ ನೆಹರು ತಾರಾಲಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆ ನಿರ್ಮಿಸಿರುವ 16 ನೂತನ ಇಂದಿರಾ ಕ್ಯಾಂಟೀನ್ಗಳು ಹಾಗೂ ಸ್ವಚ್ಛ ಭಾರತ ಮಿಷನ್ (ನಗರ) ಯೋಜನೆಯಡಿ ಕಾಮಗಾರಿಗಳು ಮತ್ತು ಯಂತ್ರೋಪಕರಣಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. “ಮೈಸೂರು ಮತ್ತು ಬೆಳಗಾವಿಯಲ್ಲಿ ರಸ್ತೆಗಳು ವಿಶಾಲವಾಗಿವೆ, ಆದರೆ ಬೆಂಗಳೂರಿನಲ್ಲಿ ಆ ಪರಿಸ್ಥಿತಿಯಿಲ್ಲ. ಯೋಜಿತವಾಗಿ ನಗರ ಅಭಿವೃದ್ಧಿಪಡಿಸುವ ಉದ್ದೇಶದಿಂದಲೇ ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ನಗರಯೋಜನಾ ಕಾಲೇಜು ಆರಂಭಿಸಿದ್ದು, ದಾಖಲಾತಿ ಪ್ರಕ್ರಿಯೆಯೂ ಶುರುವಾಗಿದೆ,” ಎಂದರು.
ನಗರಸಭೆಗಳಿಗೆ ಹೆಚ್ಚಿನ ಅನುದಾನ; ಕಳ್ಳಬಿಲ್ಗೆ ಬ್ರೇಕ್:
ಮುಂದಿನ ದಿನಗಳಲ್ಲಿ ನಗರಸಭೆಗಳು ಹಾಗೂ ಮಹಾನಗರ ಪಾಲಿಕೆಗಳಿಗೆ ಹೆಚ್ಚಿನ ಅನುದಾನ ನೀಡಲು ಸರ್ಕಾರ ನಿರ್ಧರಿಸಿದೆ. ಆದರೆ, ಖರ್ಚಾಗುವ ಪ್ರತಿಯೊಂದು ಪೈಸೆಗೂ ಪಕ್ಕಾ ಲೆಕ್ಕವಿಡಬೇಕು ಮತ್ತು ಕಾಮಗಾರಿಯ ಫೋಟೋ, ವಿಡಿಯೋ ದಾಖಲೆ ಮಾಡಬೇಕು. “ಒಂದೇ ರಸ್ತೆಯನ್ನು ಎರಡೆರಡು ಬಾರಿ ತೋರಿಸಿ ಬಿಲ್ ಮಾಡುವಂತಿಲ್ಲ. ಶಾಸಕರು ಅಥವಾ ಕಾರ್ಪೊರೇಟರ್ಗಳು ಹೇಳಿದರು ಎಂಬ ಕಾರಣಕ್ಕೆ ಕಳ್ಳಲೆಕ್ಕ, ಕಳ್ಳಬಿಲ್ಗಳನ್ನು ಮಾಡಿದರೆ ಅಧಿಕಾರಿಗಳೇ ನೇರ ಹೊಣೆಯಾಗಬೇಕಾಗುತ್ತದೆ. ಅಕ್ರಮ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಸಿಎಂ ಖಡಕ್ ಎಚ್ಚರಿಕೆ ನೀಡಿದರು.
ಹಸಿವಿನ ಮೇಲೆ ರಾಜಕಾರಣ ಸಲ್ಲ; ಕ್ಯಾಂಟೀನ್ಗಳಲ್ಲಿ ಸಿಸಿಟಿವಿ ಅಳವಡಿಕೆ:
“ಹಸಿವಿಗೆ ಜಾತಿ, ಧರ್ಮವಿಲ್ಲ. ಆದರೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಹಸಿವಿನ ಮೇಲೂ ರಾಜಕಾರಣ ಮಾಡುತ್ತಿದ್ದು, ತಮ್ಮ ಕ್ಷೇತ್ರಗಳಲ್ಲಿ ಹಲವು ಇಂದಿರಾ ಕ್ಯಾಂಟೀನ್ಗಳನ್ನು ಸ್ಥಗಿತಗೊಳಿಸಿದ್ದಾರೆ. ನಾವು ಭಾವನೆಗಳ ಮೇಲೆ ರಾಜಕಾರಣ ಮಾಡುವುದಿಲ್ಲ, ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ,” ಎಂದು ವಾಗ್ದಾಳಿ ನಡೆಸಿದರು. ಇಂದಿರಾ ಕ್ಯಾಂಟೀನ್ಗಳಲ್ಲಿ ಪಾರದರ್ಶಕತೆ ತರಲು ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಕೇಂದ್ರೀಕೃತ ವ್ಯವಸ್ಥೆ ಮಾಡಲಾಗುವುದು. ಪ್ರತಿದಿನ ಒಬ್ಬೊಬ್ಬ ಅಧಿಕಾರಿ ಸರತಿಯಂತೆ ಕ್ಯಾಂಟೀನ್ನಲ್ಲಿ ಊಟ ಸೇವಿಸಿ, ಗುಣಮಟ್ಟ ಪರಿಶೀಲಿಸಿ ಸಹಿ ಹಾಕಬೇಕು ಎಂದು ಸೂಚಿಸಿದರು.
ಬಡವರಿಗೆ ನಿವೇಶನ, ಪೌರಕಾರ್ಮಿಕರಿಗೆ ಮನೆ:
ಪೌರಕಾರ್ಮಿಕರಿಗಾಗಿ ಮನೆಗಳನ್ನು ನಿರ್ಮಿಸಲು ಹಾಗೂ ರಾಜ್ಯದ ಪ್ರತಿ ಕ್ಷೇತ್ರದಲ್ಲೂ ಬಡವರಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ ಎಂದು ಸಿಎಂ ತಿಳಿಸಿದರು. ಇದೇ ವೇಳೆ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಅವರು, ಇಂದಿರಾಗಾಂಧಿ ಅವರ ಹತ್ಯೆಯಾದ ಸಂದರ್ಭದಲ್ಲಿ ತಾವು ಹೊಸದಾಗಿ ಆರಂಭಿಸಿದ್ದ ಚಿತ್ರಮಂದಿರಕ್ಕೆ ಅಂದಿನ ಜಿಲ್ಲಾಧಿಕಾರಿಗಳ ಸಲಹೆಯಂತೆ ‘ಇಂದಿರಾ ಚಿತ್ರಮಂದಿರ’ ಎಂದು ನಾಮಕರಣ ಮಾಡಿದ್ದನ್ನು ಸ್ಮರಿಸಿಕೊಂಡರು.

