ಬೆಂಗಳೂರು:”ಪುಸ್ತಕಗಳು ಕೇವಲ ಮಾಹಿತಿ ನೀಡುವ ಸಾಧನಗಳಲ್ಲ; ಅವು ಮನುಷ್ಯನ ಆಲೋಚನಾ ಲಹರಿಗೆ ಸ್ಪಷ್ಟ ದಿಕ್ಕು ತೋರಿಸಿ, ಮಾನವೀಯ ಮೌಲ್ಯಗಳನ್ನು ಶ್ರೀಮಂತಗೊಳಿಸುವ ಮೂಲಕ ಇಡೀ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತವೆ” ಎಂದು ರಾಜ್ಯಪಾಲರಾದ ಡಾ. ಸುಧಾ ಯಾದವ್ ಅಭಿಪ್ರಾಯಪಟ್ಟರು.

ನಗರದ ಜಯನಗರದ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ವೀರಲೋಕ ಪ್ರಕಾಶನದ 6ನೇ ಪುಸ್ತಕ ಸಂತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾವಿರಾರು ವರ್ಷಗಳ ಶ್ರೀಮಂತ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯವು ‘ಕವಿರಾಜಮಾರ್ಗ’ದಿಂದ ಹಿಡಿದು ಬಸವೇಶ್ವರರ ಕ್ರಾಂತಿಕಾರಿ ವಚನಗಳವರೆಗೆ, ಪಂಪ-ರನ್ನ-ಪೊನ್ನರಿಂದ ಹಿಡಿದು ಆಧುನಿಕ ಜ್ಞಾನಪೀಠ ಪುರಸ್ಕೃತರವರೆಗೆ ಸಮಾಜಕ್ಕೆ ಸದಾ ಹೊಸ ಚಿಂತನೆಗಳನ್ನು ನೀಡಿದೆ. ವೀರಲೋಕ ಪ್ರಕಾಶನವು ಕೇವಲ ನಾಲ್ಕು ವರ್ಷಗಳಲ್ಲಿ 200ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ, ಹಿಂದಿನ ಐದು ಪುಸ್ತಕ ಸಂತೆಗಳ ಮೂಲಕ 10 ಲಕ್ಷಕ್ಕೂ ಅಧಿಕ ಓದುಗರನ್ನು ತಲುಪಿ 3 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಮಾರಾಟ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ‘ಉತ್ತರ ಪರ್ವ’, ‘ದೇಸಿ ಜಗಲಿ ಕಥೆ’, ‘ಕಥಾ ಸಂಕ್ರಾಂತಿ’ ಹಾಗೂ ‘ಸಾಹಿತ್ಯ ಯುಗಾದಿ’ಯಂತಹ ವಿನೂತನ ಕಾರ್ಯಕ್ರಮಗಳು ಗ್ರಾಮೀಣ ಮತ್ತು ಯುವ ಬರಹಗಾರರಿಗೆ ಉತ್ತಮ ವೇದಿಕೆ ಕಲ್ಪಿಸಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೊಬೈಲ್ ಯುಗದಲ್ಲೂ ಪುಸ್ತಕಗಳೇ ಶ್ರೇಷ್ಠ:
ಇಂದಿನ ಡಿಜಿಟಲ್ ಯುಗದಲ್ಲಿ ಜನರು ಹೆಚ್ಚಾಗಿ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಮೊರೆ ಹೋಗುತ್ತಿದ್ದರೂ, ಪುಸ್ತಕ ಮೇಳಗಳಿಗೆ ಹರಿದುಬರುತ್ತಿರುವ ಜನಸಾಗರ ಆಶಾದಾಯಕವಾಗಿದೆ. ಡಿಜಿಟಲ್ ಮಾಧ್ಯಮಗಳು ಕೇವಲ ಮಾಹಿತಿಯನ್ನು ಒದಗಿಸಿದರೆ, ಪುಸ್ತಕಗಳು ಆ ಮಾಹಿತಿಯನ್ನು ಆಳವಾಗಿ ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತವೆ ಎಂದರು.
ಮನೆಗೊಂದು ಗ್ರಂಥಾಲಯವಿರಲಿ:
ಮಕ್ಕಳನ್ನು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತಗೊಳಿಸದೆ, ಬಾಲ್ಯದಿಂದಲೇ ಸಾಹಿತ್ಯ, ಇತಿಹಾಸ, ವಿಜ್ಞಾನ ಮತ್ತು ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ಓದುವ ಹವ್ಯಾಸ ಬೆಳೆಸಬೇಕು. ಪ್ರತಿಯೊಂದು ಮನೆಯಲ್ಲೂ ಒಂದು ಪುಟ್ಟ ಗ್ರಂಥಾಲಯ ನಿರ್ಮಾಣವಾಗಬೇಕು ಎಂದು ಪೋಷಕರು ಹಾಗೂ ಶಿಕ್ಷಕರಿಗೆ ಕರೆ ನೀಡಿದರು.
ಅನುವಾದ ಸಾಹಿತ್ಯದಿಂದ ರಾಷ್ಟ್ರೀಯ ಏಕತೆ:
ಪುಸ್ತಕ ಸಂತೆಗಳ ಈ ಮಾದರಿ ದೇಶದ ಎಲ್ಲಾ ರಾಜ್ಯಗಳಿಗೂ ವಿಸ್ತರಿಸಬೇಕು. ಕನ್ನಡದ ಶ್ರೇಷ್ಠ ಕೃತಿಗಳು ಇತರ ಭಾರತೀಯ ಭಾಷೆಗಳಿಗೆ ಹಾಗೂ ಪರಭಾಷೆಯ ಉತ್ತಮ ಕೃತಿಗಳು ಕನ್ನಡಕ್ಕೆ ಅನುವಾದಗೊಳ್ಳಬೇಕು. ಇದರಿಂದ ಪ್ರಾದೇಶಿಕ ಸಾಹಿತ್ಯ ಬಲಗೊಳ್ಳುವುದರ ಜೊತೆಗೆ ದೇಶದಲ್ಲಿ ಸಾಂಸ್ಕೃತಿಕ ಸಾಮರಸ್ಯ ಮತ್ತು ರಾಷ್ಟ್ರೀಯ ಏಕತೆ ಗಟ್ಟಿಯಾಗುತ್ತದೆ ಎಂದು ರಾಜ್ಯಪಾಲರು ತಿಳಿಸಿದರು.

